RSS ABPS 2021: ರಾಮ ಮಂದಿರ ನಿಧಿ ಅಭಿಯಾನಕ್ಕೆ ದೇಣಿಗೆ ನೀಡಿದ್ದಾರೆ 12 ಕೋಟಿ ಜನ!

RSS ABPS 2021: ರಾಮ ಮಂದಿರ ನಿಧಿ ಅಭಿಯಾನಕ್ಕೆ ದೇಣಿಗೆ ನೀಡಿದ್ದಾರೆ 12 ಕೋಟಿ ಜನ!
ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ದ್ವೈವಾರ್ಷಿಕ ಸಭೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ದ್ವೈವಾರ್ಷಿಕ ಸಭೆ ಬೆಂಗಳೂರಿನಲ್ಲಿ ಶುಕ್ರವಾರ ಪ್ರಾರಂಭವಾಯಿತು. ರಾಮ ಮಂದಿರ ನಿಧಿ ಸಂಗ್ರಹ ಅಭಿಯಾನದಲ್ಲಿ 12 ಕೋಟಿ ಜನ ಹಣ ನೀಡಿದರು ಎಂದು ಆರ್​ಎಸ್​ಎಸ್​ ಹೇಳಿದೆ.

bhaskar hegde

|

Mar 19, 2021 | 5:32 PM


ದೇಶಾದ್ಯಂತ ನಡೆದ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದಲ್ಲಿ ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಾರ್ಯಕರ್ತರು ಭಾಗವಹಿಸಿದ್ದರು. ದೇಶದ ಮೂಲೆ ಮೂಲೆಗೂ ಹೋಗಿದ್ದ ಆರ್​ಎಸ್​ಎಸ್​​ ಕಾರ್ಯಕರ್ತರು 5,45,737 ಊರುಗಳನ್ನು ಸುತ್ತಾಡಿ, 12,47,21,000 ಜನರನ್ನು ಭೇಟಿ ಮಾಡಿ ನಿಧಿ ಸಂಗ್ರಹ ಮಾಡಿದ್ದರು ಎಂಬ ವಿವರ ಈಗ ಹೊರಬಿದ್ದಿದೆ.

ಅವರು ಓಡಾಡಿದ ಊರುಗಳು ಎಂದರೆ ಬರೀ ಬಿಜೆಪಿ ಆಡಳಿತ ಇರುವ ರಾಜ್ಯಗಳು ಎಂದುಕೊಳ್ಳಬೇಡಿ. ಮಿಜೋರಾಂ, ಅಂಡಮಾನ್, ಲಡಾಖ್ ಮುಂತಾದ ಬಿಜೆಪಿ ಆಡಳಿತ ಇಲ್ಲದ ನಗರಗಳಲ್ಲಿ ಕೂಡ ನಿಧಿ ಸಂಗ್ರಹ ಮಾಡಿದೆ ಎಂಬ ವಿವರ ಈಗ ಹೊರಬಿದ್ದಿದೆ. ಬೆಂಗಳೂರಿನಲ್ಲಿ ಪ್ರಾರಂಭವಾದ ಆರ್​ಎಸ್​ಎಸ್​​ ನ ಅಖಿಲ ಭಾರತೀಯ ಪ್ರತಿನಿಧಿ ಸಭಾದ ದ್ವೈವಾರ್ಷಿಕ ಸಭೆಗೆ ನೀಡಿರುವ ಈ ಮಾಹಿತಿ ಕುತೂಹಲಕಾರಿಯಾಗಿದೆ. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಅವರು, ದೇಣಿಗೆ ಕೊಡದ ಮನೆಯ ಬಾಗಿಲಿಗೆ ಸ್ಟಿಕ್ಕರ್​ನ್ನು ಅಂಟಿಸಿಲ್ಲ. ಇದು ತಪ್ಪುಗ್ರಹಿಕೆ ಎಂದು ವಿವರಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ದ್ವೈವಾರ್ಷಿಕ ಸಭೆ ಇಂದು ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಕಳೆದ ವರ್ಷ ನಡೆಯಬೇಕಾಗಿದ್ದ ಈ ಸಭೆ ಕೊರೊನಾದ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಈಗ ಮೂರು ದಿನಗಳ ಬದಲಾಗಿ ಎರಡೇ ದಿನ ನಡೆವ ಈ ಸಭೆಯಲ್ಲಿ 1200 ಪ್ರತಿನಿಧಿಗಳ ಬದಲಾಗಿ 450 ಜನರಿಗೆ ಈ ಸಭೆಯನ್ನು ನಿರ್ಬಂಧಿಸಲಾಗಿದೆ. ಸಭೆಯ ಪ್ರಾರಂಭದಲ್ಲಿ ರಾಷ್ಟ್ರೀಯ ವಕ್ತಾರ ಮನಮೋಹನ ವೈದ್ಯ ಈ ಸಭೆಯ ಕುರಿತಾಗಿ ಮಾಧ್ಯಮಕ್ಕೆ ವಿವರಗಳನ್ನು ನೀಡಿದರು.

ಈ ವರ್ಷ ನಾಗಪುರದಲ್ಲಿ ಈ ಸಭೆ ನಡೆಯಬೇಕಾಗಿತ್ತು. ಆದರೆ, ಅಲ್ಲಿ ಕೊರೊನಾ ಜಾಸ್ತಿ ಆಗಿ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಈ ಸಭೆ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಈ ಬಾರಿ, ಹೊಸ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಸುರೇಶ್ ಭೈಯ್ಯಾಜಿ ಜೋಷಿ ಅವರ ಅವಧಿ ಮುಗಿದ ಮೇಲೂ ಸಹ, ಅವರಿಗೆ ಮೂರು ಬಾರಿ ಅವರ ಕಾರ್ಯಾವಧಿಯನ್ನು ವಿಸ್ತರಿಸಲಾಗಿತ್ತು.

ಕೊರನಾದಲ್ಲಿ ಹೇಗಿದ್ದವು ಆರ್​ಎಸ್​ಎಸ್​ ಶಾಖೆಗಳು
ಇದೇ ಮೊದಲ ಬಾರಿಗೆ ಆರ್​ಎಸ್​ಎಸ್​​ ಶಾಖೆಗಳು ಮುಚ್ಚಿದ್ದವು. ಅದೂ ಕೂಡ ಕೊರೊನಾ ಬಂದು ಲಾಕ್ಡೌನ್ ಆಗಿದ್ದ ವೇಳೆಯಲ್ಲಿ. ಮಾರ್ಚ್​ನಿಂದ ಜುಲೈ ತನಕ ದೇಶಾದ್ಯಂತ ಶಾಖೆಗಳು ಮುಚ್ಚಿದ್ದವು ಎಂದು ವೈದ್ಯ ಹೇಳಿದರು. ಆ ನಂತರ, ಎಲ್ಲಾ ಕಡೆ ಶಾಖೆಗಳು ಪ್ರಾರಂಭವಾದವು ಎಂದು ಅವರು ವಿವರಿಸಿದರು. ಇದೇ ಹೊತ್ತಿನಲ್ಲಿ ಅವರು ಆರ್​ಎಸ್​ಎಸ್​​ ಸೇವಕರು ಹೇಗೆ ಲಾಕ್​ಡೌನ್​​ನಲ್ಲಿ ಆಹಾರದ ಪೊಟ್ಟಣ ಮತ್ತು ವೈದ್ಯಕೀಯದ ಸಹಾಯ ಮಾಡಿದ್ದರು ಎಂಬ ವಿವರವನ್ನು ಅವರು ನೀಡಿದರು.

5,70,000 ಕಾರ್ಯಕರ್ತರು 92656 ಊರು/ಕೇರಿಗಳಲ್ಲಿ ಕೊರೊನಾದಿಂದ ಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡಿದ್ದರು. ಸುಮಾರು 73 ಲಕ್ಷ ಬಡ ಜನರಿಗೆ ರೇಶನ್ ನೀಡಿದ್ದರು ಮತ್ತು 4.5 ಕೋಟಿ ಜನರಿಗೆ ಆಹಾರದ ಪೊಟ್ಟಣ ನೀಡಲಾಯಿತು. 90 ಲಕ್ಷಕ್ಕೂ ಹೆಚ್ಚಿನ ಮಾಸ್ಕ್​ಗಳನ್ನು ವಿತರಿಸಿದ್ದ ಆರ್​ಎಸ್​ಎಸ್​​ ಕಾರ್ಯಕರ್ತರು 60,000 ಬಾಟಲಿ ರಕ್ತದಾನ ಮಾಡಿದ್ದರು.

ಕೊರೊನಾ ವೇಳೆಯಲ್ಲಿ ಜನ ಹೇಗೆ ಸೇವೆಗೆ ಬಂದು ಕೈ ಜೋಡಿಸಿದರು ಎಂಬುದನ್ನು ಹೇಳುತ್ತ ವೈದ್ಯ ಅವರು ಭಾರತದ ಪ್ರಜಾಪ್ರಭುತ್ವ ಬಡವಾಗುತ್ತಿದೆ ಎಂದು ವಾದ ಮಂಡಿಸುವವರಿಗೆ ಟಾಂಗ್ ಕೊಟ್ಟಿದ್ದಾರೆ. ಭಾರತದ ರಾಷ್ಟ್ರ ಎಂಬ ಕಲ್ಪನೆ nation state ಎಂಬ ವಿಚಾರಕ್ಕಿಂತ ವಿಭಿನ್ನ. ನಮ್ಮ ರಾಷ್ಟ್ರ ಎಂಬ ಕಲ್ಪನೆಗೆ ರಾಜಕೀಯದ ಸಂಬಂಭ ಇಲ್ಲ. ಇಲ್ಲಿ ಪರಸ್ಪರ ಕೊಡುಕೊಳ್ಳುವಿಕೆಯೊಂದಿಗೆ ರಾಷ್ಟ್ರದ ಪರಿಕಲ್ಪನೆ ಬೆಳೆದಿದೆ. ಇದನ್ನು ಕೊರನಾ ವೇಳೆಯಲ್ಲಿ ನೋಡಿದ್ದೇವೆ ಎಂದು ಅವರು ವಿವರಿಸಿದರು.

ಆರ್​ಎಸ್​ಎಸ್​ ಶಾಖೆ ಬೆಳವಣಿಗೆ
ಸುಮಾರು 89 ಪ್ರತಿಶತ ಶಾಖೆಗಳು ಪುನರಾರಂಭವಾಗಿವೆ. ಇಡೀ ದೇಶದ 6495 ತಾಲೂಕುಗಳಲ್ಲಿ ಸದ್ಯ ಆರ್​ಎಸ್​ಎಸ್​ ಶಾಖೆಗಳು ನಡೆಯುತ್ತಿವೆ. ಸುಮಾರು 85 ಪ್ರತಿಶತ ಶಾಖೆಗಳು ತುಂಬಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ತಾಲೂಕಿನ ಕೆಳಗೆ 58,500 ಮಂಡಳಗಳಲ್ಲಿ-10-12 ಊರುಗಳನ್ನು ಸೇರಿಸಿದರೆ ಅದು ಒಂದು ಮಂಡಳ -ನಡೆಯುತ್ತಿವೆ. ಆದರೆ, ಅವುಗಳಲ್ಲಿ 40 ಪ್ರತಿಶತ ಬಹಳ ಕ್ರಿಯಾಶೀಲವಾಗಿವೆ. ಇನ್ನುಳಿದವುಗಳಲ್ಲಿ 20 ಪ್ರತಿಶತ ಮಂಡಳಗಳ ಜೊತೆ ಪ್ರಮುಖರು ಸಂಪರ್ಕದಲ್ಲಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಇಡೀ ದೇಶವನ್ನು ಮುಟ್ಟುವ ಗುರಿ ಆರ್​ಎಸ್​ಎಸ್​ ಹೊಂದಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:

ಆರ್​ಎಸ್​ಎಸ್​ನ್ನು ಅಣಕಿಸಿದ ಪಿಎಫ್​ಐ ವಿರುದ್ಧ ಬಿಜೆಪಿ ಆಕ್ರೋಶ; ಇದೊಂದು ಪಿತೂರಿ ಎಂದ ಸಿ ಟಿ ರವಿ

‘ಹೌದು ನಾನು ಆರ್​ಎಸ್​ಎಸ್​, ನೀವ್ಯಾರು?’ ಕಾಂಗ್ರೆಸ್​ ಶಾಸಕರಿಗೆ ಸದನದಲ್ಲಿ ತಿರುಗೇಟು ನೀಡಿದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ

 


Follow us on

Related Stories

Most Read Stories

Click on your DTH Provider to Add TV9 Kannada