ದೆಹಲಿ: ಉತ್ತರ ಕರ್ನಾಟಕದ ಬಹುಮಹತ್ವದ ಮಹದಾಯಿ ಯೋಜನೆಗೆ ಕರ್ನಾಟಕ ಸರಕಾರ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಕೇಂದ್ರ ಸರಕಾರದ ಜಲಶಕ್ತಿ ಸಚಿವಾಲಯ ಉತ್ತರ ನೀಡಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಜಲಶಕ್ತಿ ಸಚಿವಾಲಯ ಉತ್ತರ ನೀಡಿದೆ. ಮಹದಾಯಿ ಹಾಗೂ ಮಲಪ್ರಭಾ ನದಿ ಜೋಡಣೆಯ ವಿಚಾರ ಸದ್ಯಕ್ಕೆ ಕೇಂದ್ರ ಸರಕಾರದ ಮುಂದೆ ಇಲ್ಲ. ಕರ್ನಾಟಕ ಸರಕಾರ ಕೂಡ ಯೋಜನೆಗಾಗಿ ಅರ್ಜಿ ಸಲ್ಲಿಸಿಲ್ಲ ಎಂದು ಜಲಶಕ್ತಿ ಸಚಿವಾಲಯ ತಿಳಿಸಿದೆ.
ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತಂತೆ 14-08-2018 ರಂದು ನ್ಯಾಯಾಧಿಕರಣ ಅಂತಿಮ ತೀರ್ಪು ನೀಡಿದ್ದು ಕರ್ನಾಟಕಕ್ಕೆ ನೀರು ಬಳಕೆಗೆ ಅನುಮತಿ ನೀಡಿದೆ. ನ್ಯಾಯಾಧಿಕರಣ ನೀಡಿದ ಆದೇಶ ಪಶ್ನಿಸಿ ಗೋವಾ,ಕರ್ನಾಟಕ, ಮಹಾರಾಷ್ಟ್ರ ಸರಕಾರಗಳು ಸುಪ್ರೀಂಕೋರ್ಟ್ ಕದ ತಟ್ಟಿವೆ. ಮೇಲ್ಮನವಿ ಅರ್ಜಿಗಳು ವಿಚಾರಣೆ ಹಂತದಲ್ಲಿವೆ.
ಪ್ರಶ್ನೆಗೆ ಉತ್ತರ ಪಡೆದಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಹದಾಯಿ ಯೋಜನೆಗಾಗಿ ಹೋರಾಟದ ಮುನ್ಸೂಚನೆ ನೀಡಿದ್ದಾರೆ. ಮಹದಾಯಿ, ಕೃಷ್ಣಾ ಮೇಲ್ದಂಡೆ ಮತ್ತು ಮೇಕೆದಾಟು ಯೋಜನೆಗಳ ಪರವಾಗಿ ಜೆಡಿಎಸ್ ಪಕ್ಷ ಈಗಾಗಲೇ ರಾಷ್ಟ್ರಪತಿಗಳಿಗೆ ಮೆಮೊರೆಂಡಮ್ ಸಲ್ಲಿಸುವುದರ ಮೂಲಕ ರಾಜ್ಯದ ನೀರಾವರಿ ಯೋಜನೆಗಳ ಮೇಲೆ ತಮಗಿರುವ ಬದ್ಧತೆಯನ್ನು ಪ್ರದರ್ಶಿಸಿದೆ.
ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಪ್ರಧಾನಮಂತ್ರಿ ಅವರನ್ನೂ ಸಹ ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಿದ್ದೇವೆ. ಮಹದಾಯಿ ಯೋಜನೆ ವಿಚಾರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದೇನೆ. ಆದರೆ, ಒಕ್ಕೂಟ ಸರ್ಕಾರ ನೀಡಿರುವ ಉತ್ತರದ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಕಳಸಾ ಬಂಡೂರಿ ಯೋಜನೆಯನ್ನು ಪ್ರಾರಂಭಿಸಲು ಯಾವುದೇ ವಿಶೇಷ ಪ್ರಸ್ತಾವನೆಯನ್ನು ಸಲ್ಲಿಸಿಲ್ಲ. ಮತ್ತು ಮಹದಾಯಿ, ಮಲಪ್ರಭಾ ನದಿ ಜೋಡಣೆಯ ವಿಚಾರ ಕೂಡ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಪ್ರಜ್ವಲ್ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ಮುಂದಿನ ದಿನಗಳಲ್ಲಿ ರಾಜ್ಯದ ಮೂರು ನೀರಾವರಿ ಯೋಜನೆಗಳಿಗೆ ಶ್ರೀಘ್ರವಾಗಿ ಅನುಮೋದನೆ ನೀಡುವಂತೆ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿ ಜೆಡಿಎಸ್ ಪಕ್ಷದಿಂದ ಹೋರಾಟಗಳನ್ನು ರೂಪಿಸಲಾಗುವುದು. ಈ ಹೋರಾಟಕ್ಕೆ ರಾಜ್ಯದ ಸಮಸ್ತ ಜನತೆ ಬೆಂಬಲವಾಗಿ ನಿಂತು ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ವರದಿ: ಹರೀಶ್, ಟಿವಿ9 ನವದೆಹಲಿ
ಇದನ್ನೂ ಓದಿ: ಒಂದೇ ಹಂತದಲ್ಲಿ ಸಂಪುಟ ರಚನೆ ಮಾಡಲು ಹೈಕಮಾಂಡ್ ಪ್ಲಾನ್? ಸೋಮವಾರ ಸಿಎಂ ಮತ್ತೆ ದೆಹಲಿಗೆ ತೆರಳುವ ಸಾಧ್ಯತೆ
ನೀರಾವರಿ ಯೋಜನೆಗಳು, ಲಸಿಕೆ ಕೊರತೆ, ಕೊರೊನಾ ನಿಯಂತ್ರಣ: ದೆಹಲಿ ಭೇಟಿ ಬಗ್ಗೆ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ