ಗಡಿಯಿಂದ ಹಿಂದೆ ಸರಿಯಲು ಅಸ್ಸಾಂ- ನಾಗಾಲ್ಯಾಂಡ್ ಒಪ್ಪಿಗೆ; ಇದು ಐತಿಹಾಸಿಕ ನಿರ್ಧಾರ ಎಂದ ಸಿಎಂ ಹಿಮಾಂತ ಬಿಸ್ವಾ

ಅಸ್ಸಾಂ ಹಾಗೂ ನಾಗಾಲ್ಯಾಂಡ್ ಗಡಿಗಳಲ್ಲಿ ನಿಯೋಜಿಸಿದ್ದ ಪೊಲೀಸ್ ಪಡೆಯನ್ನು ಹಿಂಪಡೆಯಲು ಎರಡೂ ಸರ್ಕಾರಗಳು ನಿರ್ಧರಿಸಿವೆ.

ಗಡಿಯಿಂದ ಹಿಂದೆ ಸರಿಯಲು ಅಸ್ಸಾಂ- ನಾಗಾಲ್ಯಾಂಡ್ ಒಪ್ಪಿಗೆ; ಇದು ಐತಿಹಾಸಿಕ ನಿರ್ಧಾರ ಎಂದ ಸಿಎಂ ಹಿಮಾಂತ ಬಿಸ್ವಾ
ಅಸ್ಸಾಂ- ನಾಗಾಲ್ಯಾಂಡ್ ಮುಖ್ಯ ಕಾರ್ಯದರ್ಶಿಗಳ ಸಭೆ
TV9kannada Web Team

| Edited By: Sushma Chakre

Jul 31, 2021 | 5:33 PM

ಅಸ್ಸಾಂ: ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ಗಡಿಯಲ್ಲಿ ಹಿಂಸಾಚಾರ ಹೆಚ್ಚಾಗಿ 6 ಮಂದಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಮತ್ತು 6 ಸರ್ಕಾರಿ ಅಧಿಕಾರಿಗಳ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು. ಇದರ ಬೆನ್ನಲ್ಲೇ ಅಸ್ಸಾಂ ಹಾಗೂ ನಾಗಾಲ್ಯಾಂಡ್ ಗಡಿಗಳಲ್ಲಿ ನಿಯೋಜಿಸಿದ್ದ ಪೊಲೀಸ್ ಪಡೆಯನ್ನು ಹಿಂಪಡೆಯಲು ಎರಡೂ ಸರ್ಕಾರಗಳು ನಿರ್ಧರಿಸಿವೆ. ಈ ಮೂಲಕ ಅಸ್ಸಾಂ ಹಾಗೂ ನಾಗಾಲ್ಯಾಂಡ್ ಗಡಿಯಲ್ಲೂ ಉಂಟಾಗಿದ್ದ ಆತಂಕದ ವಾತಾವರಣ ತಿಳಿಯಾದಂತಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ, ಇದೊಂದು ಐತಿಹಾಸಿಕ ನಿರ್ಧಾರ ಎಂದಿದ್ದಾರೆ. ಇಂದು ಅಸ್ಸಾಂ ಹಾಗೂ ನಾಗಾಲ್ಯಾಂಡ್ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಸಭೆ ನಡೆಸಿದ್ದರು. ಎರಡೂ ರಾಜ್ಯಗಳ ಗಡಿಯಲ್ಲಿ ರಾಜ್ಯ ಸರ್ಕಾರಗಳು ನಿಯೋಜನೆ ಮಾಡಿರುವ ಪೊಲೀಸ್ ಭದ್ರತಾ ಪಡೆಯನ್ನು ಹಿಂಪಡೆಯುವ ಬಗ್ಗೆ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡೆಸ್ಸೋಯ್ ಮೀಸಲು ಅರಣ್ಯ ಹಾಗೂ ತ್ಸುರಂಗ್​ಕಾಂಗ್ ಕಣಿವೆಯಲ್ಲಿ ಅಸ್ಸಾಂ ಹಾಗೂ ನಾಗಾಲ್ಯಾಂಡ್ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿತ್ತು. ಇದರಿಂದ ಯಾವ ಕ್ಷಣದಲ್ಲಾದರೂ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂದ ಆತಂಕ ಗಡಿಭಾಗದ ಜನರಲ್ಲಿ ಮನೆಮಾಡಿತ್ತು.

ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್​​ಗಳನ್ನು ಮಾಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವ, ಅಸ್ಸಾಂ-ನಾಗಾಲ್ಯಾಂಡ್ ಗಡಿಗಳಲ್ಲಿ ಉಂಟಾಗಿದ ಆತಂಕದ ವಾತಾವರಣ ಈಗ ಸರಿಯಾಗಿದೆ. ತಕ್ಷಣದಲ್ಲೇ ಎರಡೂ ರಾಜ್ಯಗಳ ಭದ್ರತಾ ಪಡೆಗಳು ಗಡಿಯ ಬೇಸ್​ ಕ್ಯಾಂಪ್​ನಿಂದ ಹಿಂದೆ ಸರಿಯಲಿವೆ. ಇದು ಅಸ್ಸಾಂ ಮತ್ತು ನಾಗಾಲ್ಯಾಂಡ್ ರಾಜ್ಯಗಳ ನಡುವಿನ ಸಂಬಂಧ ಬೆಸೆಯಲು ಐತಿಹಾಸಿಕ ನಿರ್ಧಾರವಾಗಿದೆ. ಈ ನಡೆಗಾಗಿ ಮುಖ್ಯಮಂತ್ರಿ ನೀಫ್ಯೂ ರಿಯೋ ಅವರಿಗೂ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಅಸ್ಸಾಂ ಜೊತೆ ಕೈಜೋಡಿಸಿ, ಗಡಿಯಲ್ಲಿ ಶಾಂತಿ ನೆಲೆಸಲು ಕಾರಣರಾಗಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮತ್ತು ಮಿಜೋರಾಂ ನಡುವೆ ನಿರಂತರವಾಗಿ ಸಂಘರ್ಷಗಳು ನಡೆಯುತ್ತಲೇ ಇವೆ. 2020ರ ಆಗಸ್ಟ್‌ನಲ್ಲಿ ಉಂಟಾದ ಸಂಘರ್ಷ ವೇಳೆ ಮಿಜೋರಂ ಗಡಿಯಲ್ಲಿರುವ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದರು. ಬಳಿಕ ಈ ವರ್ಷದ ಫೆಬ್ರವರಿಯಲ್ಲಿ ಸಂಘರ್ಷಗಳು ಏರ್ಪಟ್ಟಿದ್ದವು. ಮಿಜೋರಾಂ ದುಷ್ಕರ್ಮಿಗಳು ಅಸ್ಸಾಂನ ಕ್ಯಾಚರ್‌ ಜಿಲ್ಲೆಯೊಳಗೆ ಐಇಡಿ ಬಾಂಬ್‌ಗಳನ್ನು ಸ್ಛೋಟಿಸಿದ್ದರು. ಇದರಿಂದ ಮತ್ತೊಮ್ಮೆ ಸಂಘರ್ಷ ಭುಗಿಲೆದ್ದಿತ್ತು.

ಜುಲೈ 26ರಂದು ಮಿಜೋರಾಂ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ 6 ಮಂದಿ ಪೊಲೀಸರು ಸಾವಿಗೀಡಾಗಿದ್ದಾರೆ. ಮಿಜೋರಾಂನಿಂದ ಬಂದ ದುಷ್ಕರ್ಮಿಗಳು ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದಾರೆ ಮತ್ತು ಅಸ್ಸಾಂ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಸ್ಸಾಂ ಪೊಲೀಸರು ಆರೋಪಿಸಿದ್ದರು. ಆದರೆ, ಅಸ್ಸಾಂ ಸರ್ಕಾರ ಪೊಲೀಸ್‌ ಪಡೆಯನ್ನು ಬಳಸಿ ಗಡಿ ಭಾಗದ ಜನರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಮಿಜೋರಾಂ ಆರೋಪಿಸಿತ್ತು.

ಇದನ್ನೂ ಓದಿ: ಅಸ್ಸಾಂ-ಮಿಜೋರಾಂ ಗಡಿ ವಿವಾದ; ಅಸ್ಸಾಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ವಿರುದ್ಧ ಎಫ್​ಐಆರ್​ ದಾಖಲು

(Assam, Nagaland agreed to withdraw State forces from border CM Himanta Biswa Sarma calls it historic step)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada