AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Babul Supriyo: ಕೇಂದ್ರ ಸಚಿವ ಸ್ಥಾನದಿಂದ ಕೆಳಗಿಳಿದ ಬೆನ್ನಲ್ಲೇ ರಾಜಕೀಯಕ್ಕೆ ಗುಡ್​ ಬೈ ಎಂದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ

BJP MP Babul Supriyo | ನನ್ನ ಅಧಿಕಾರಾವಧಿಯಲ್ಲಿ ಹಲವರಿಗೆ ಸಹಾಯ ಮಾಡಿದೆ, ಇನ್ನು ಕೆಲವರಿಗೆ ಬೇಸರವನ್ನೂ ಮಾಡಿದೆ. ಇದೀಗ ಗುಡ್​ ಬೈ ಹೇಳುವ ಸಮಯ ಬಂದಿದೆ. ನಾನು ಬಿಜೆಪಿ ಪಕ್ಷ ಬಿಟ್ಟು ಬೇರಾವ ಪಕ್ಷಕ್ಕೂ ಹೋಗುತ್ತಿಲ್ಲ ಎಂದು ಬಾಬುಲ್ ಸುಪ್ರಿಯೋ ಪೋಸ್ಟ್ ಮಾಡಿದ್ದಾರೆ.

Babul Supriyo: ಕೇಂದ್ರ ಸಚಿವ ಸ್ಥಾನದಿಂದ ಕೆಳಗಿಳಿದ ಬೆನ್ನಲ್ಲೇ ರಾಜಕೀಯಕ್ಕೆ ಗುಡ್​ ಬೈ ಎಂದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ
ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ
TV9 Web
| Edited By: |

Updated on:Jul 31, 2021 | 6:18 PM

Share

ನವದೆಹಲಿ: ಇತ್ತೀಚೆಗಷ್ಟೇ ಕೇಂದ್ರ ಸಚಿವ ಸಂಪುಟ ಪುನಾರಚನೆಯಾದಾಗ ಸಚಿವ ಸ್ಥಾನದಿಂದ ಕೆಳಗಿಳಿದಿದ್ದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳುವುದಾಗಿ ಘೋಷಣೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಾಬುಲ್‌ ಸುಪ್ರಿಯೋ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜಕೀಯಕ್ಕೆ ಗುಡ್​ ಬೈ ಹೇಳುತ್ತಿದ್ದೇನೆ. ಹಾಗೇ ನನ್ನ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದೇನೆ ಎಂದು ಫೇಸ್​ಬುಕ್​ನಲ್ಲಿ ಬಾಬುಲ್ ತಿಳಿಸಿದ್ದಾರೆ. ತಮಗೆ ಕೇಂದ್ರ ಸಚಿವ ಸ್ಥಾನ ಕೈತಪ್ಪಿರುವುದು ಕೂಡ ಈ ನಿರ್ಧಾರಕ್ಕೆ ಒಂದು ಕಾರಣ ಎಂದು ಅವರು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಕರ್ನಾಟಕದ ಡಿ.ವಿ. ಸದಾನಂದ ಗೌಡ ಸೇರಿದಂತೆ 12 ಸಚಿವರ ಬಳಿ ರಾಜೀನಾಮೆ ಪಡೆದು ಹೊಸ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ನಮಗೆ ಆದೇಶ ನೀಡಲಾಗಿತ್ತು ಎಂದು ಬಾಬುಲ್ ಸುಪ್ರಿಯೋ ಫೇಸ್​ಬುಕ್​ನಲ್ಲಿ ಬರೆದುಕೊಂಡು ಅನೇಕ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯರಾಗಿರುವ ಬಿಜೆಪಿ ಸಂಸದ ಸುಪ್ರಿಯೋ ಇದೀಗ ರಾಜಕಾರಣದಿಂದ ದೂರ ಸರಿಯುತ್ತಿರುವ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲೇ ಘೋಷಣೆ ಮಾಡಿದ್ದಾರೆ.

‘ನನಗೆ ಮೋದಿಜೀ, ಅಮಿತ್​ ಶಾ, ನಡ್ಡಾ ಅವರು ನೀಡಿದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾನು ಈ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಅವರು ನನ್ನನ್ನ ಅಪಾರ್ಥ ಮಾಡಿಕೊಳ್ಳುವುದಿಲ್ಲ ಎಂದು ನಂಬಿದ್ದೇನೆ. ನಾನು ರಾಜೀನಾಮೆ ನೀಡುತ್ತೇನೆ ಎನ್ನುವ ಮೂಲಕ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಡುತ್ತಿದ್ದೇನೆ ಎಂದು ಅವರು ತಪ್ಪು ತಿಳಿದುಕೊಳ್ಳಬಾರದು. ನನಗೆ ಆ ರೀತಿಯ ಯಾವ ಆಸೆಯೂ ಈಗ ಇಲ್ಲ. 1992ರಲ್ಲಿ ಇದೇ  ರೀತಿ ನಾನು ನನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದೆ. ಈಗ ಮತ್ತೆ ಅದೇ ಕೆಲಸ ಮಾಡಲು ನಿರ್ಧರಿಸಿದ್ದೇನೆ. ನನಗೆ ಬದಲಾವಣೆ ಬೇಕಾಗಿದೆ. ಹೇಳಬೇಕಾದ ಕೆಲವು ಮಾತುಗಳು ನನ್ನಲ್ಲೇ ಉಳಿದಿವೆ. ಆ ಮಾತುಗಳನ್ನು ಹೇಳಲು ಇನ್ನೆಂದೂ ಸಮಯ ಬರುವುದಿಲ್ಲ ಎನಿಸುತ್ತಿದೆ. ಆ ಮಾತುಗಳು ನನ್ನಲ್ಲೇ ಉಳಿದುಹೋಗಲಿ. ನಾನು ಹೋಗುತ್ತಿದ್ದೇನೆ, ಗುಡ್ ಬೈ’ ಎಂದು ಬಾಬುಲ್ ಸುಪ್ರಿಯೋ ಸುದೀರ್ಘವಾದ ಪೋಸ್ಟ್ ಮಾಡಿದ್ದಾರೆ.

ಈ ಮೊದಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಬಾಬುಲ್ ಸುಪ್ರಿಯೋ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ರಾಜ್ಯ ಸಚಿವರಾಗಿದ್ದರು. ಸಂಪುಟ ಪುನಾರಚನೆ ವೇಳೆ ಅವರು ರಾಜೀನಾಮೆ ನೀಡಿದ್ದರು. ಗಾಯಕರಾಗಿದ್ದ ಬಾಬುಲ್ ಸುಪ್ರಿಯೋ ಬಳಿಕ ರಾಜಕಾರಣಕ್ಕೆ ಇಳಿದಿದ್ದರು. ರಾಜಕಾರಣಕ್ಕೆ ಗುಡ್​ ಬೈ ಹೇಳುತ್ತಿರುವುದಾಗಿ ಸರಣಿ ಫೇಸ್​ಬುಕ್ ಪೋಸ್ಟ್​ಗಳ ಮೂಲಕ ಸಂಸದ ಸುಪ್ರಿಯೋ ತಿಳಿಸಿದ್ದಾರೆ. ನಾನು ರಾಜಕಾರಣದಲ್ಲಿ ಇಳಿದು ಬಹಳ ಸಮಯವಾಯಿತೇನೋ ಎನಿಸುತ್ತಿದೆ. ನನ್ನ ಅಧಿಕಾರಾವಧಿಯಲ್ಲಿ ಹಲವರಿಗೆ ಸಹಾಯ ಮಾಡಿದೆ, ಇನ್ನು ಕೆಲವರಿಗೆ ಬೇಸರವನ್ನೂ ಮಾಡಿದೆ. ಇದೀಗ ಗುಡ್​ ಬೈ ಹೇಳುವ ಸಮಯ ಬಂದಿದೆ ಎಂದು ಬಾಬುಲ್ ಸುಪ್ರಿಯೋ ಪೋಸ್ಟ್ ಮಾಡಿದ್ದಾರೆ.

ನಾನು ಬಿಜೆಪಿ ಪಕ್ಷ ಬಿಟ್ಟು ಬೇರಾವ ಪಕ್ಷಕ್ಕೂ ಹೋಗುತ್ತಿಲ್ಲ. ಟಿಎಂಸಿ, ಕಾಂಗ್ರೆಸ್, ಸಿಪಿಐಎಂ ಯಾವ ಪಕ್ಷವನ್ನೂ ಸೇರುತ್ತಿಲ್ಲ. ನನಗೆ ತಮ್ಮ ಪಕ್ಷಕ್ಕೆ ಬರಬೇಕೆಂದು ಯಾರೂ ಫೋನ್ ಕೂಡ ಮಾಡಿಲ್ಲ. ಕರೆದರೂ ನಾನು ಹೋಗುವುದಿಲ್ಲ. ನಾನು ಒಂದೇ ತಂಡದಲ್ಲಿ ಆಡುವ ಆಟಗಾರ! ಎಂದಿಗೂ ಅದೇ ತಂಡಕ್ಕೆ ನನ್ನ ಬೆಂಬಲ ಇರುತ್ತದೆ. ನಾನು ಮೊದಲಿನಿಂದಲೂ ಪಶ್ಚಿಮ ಬಂಗಾಳದ ಬಿಜೆಪಿ ಪಕ್ಷದಲ್ಲೇ ಗುರುತಿಸಿಕೊಂಡಿದ್ದೇನೆ. ಮುಂದೆ ಕೂಡ ಬೇರೆ ಪಕ್ಷವನ್ನು ಸೇರುವುದಿಲ್ಲ. ಇಷ್ಟು ಬಿಟ್ಟು ಬೇರೇನೂ ಹೇಳಲು ಸಾಧ್ಯವಾಗುತ್ತಿಲ್ಲ! ಎಂದು ಬಾಬುಲ್ ಸುಪ್ರಿಯೋ ಫೇಸ್​ಬುಕ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ‘ರಾಜೀನಾಮೆ ಕೊಡಿ ಎಂದಿದ್ದರು’ ಬಾಬುಲ್ ಸುಪ್ರಿಯೊ ಫೇಸ್​ಬುಕ್ ಪೋಸ್ಟ್ ವಿರುದ್ಧ ಗರಂ ಆದ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್

(BJP MP Babul Supriyo Quits Politics says Good Bye in Facebook after Lost Union Minister post Recently)

Published On - 6:05 pm, Sat, 31 July 21