ರೈತ ನಾಯಕರ ಜೊತೆ ಕೇಂದ್ರ ಸಚಿವರ ಸಾರ್ವಜನಿಕ ಚರ್ಚೆ ನಡೆಸಿ- ಅರವಿಂದ್ ಕೇಜ್ರಿವಾಲ್
ಕಳೆದ ಒಂದು ತಿಂಗಳಲ್ಲಿ ಎರಡನೇ ಬಾರಿಗೆ ದೆಹಲಿ ಚಲೋ ಚಳುವಳಿ ನಿರತ ಸಿಂಘು ಗಡಿಗೆ ಭೇಟಿ ನೀಡಿದ ಅವರು, ರೈತರಿಗೆ ಕೃಷಿ ಕಾಯ್ದೆಯ ಕುರಿತು ಸೂಕ್ತ ಮಾಹಿತಿಯಿಲ್ಲ ಎಂದು ಕೇಂದ್ರ ಸರ್ಕಾರ ಆರೋಪಿಸುತ್ತಿದೆ ಎಂದು ಕೇಜ್ರಿವಾಲ್ ಹೇಳಿದರು.
ನವದೆಹಲಿ: ನೂತನ ಕೃಷಿ ಕಾಯ್ದೆಗಳ ಕುರಿತು ಅತಿ ಹೆಚ್ಚು ತಿಳಿವಳಿಕೆಯಿರುವ ಕೇಂದ್ರದ ಯಾವುದೇ ಸಚಿವರು ರೈತ ಮುಖಂಡರ ಜೊತೆ ಸಾರ್ವಜನಿಕ ಚರ್ಚೆ ನಡೆಸಲಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸವಾಲು ಹಾಕಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಎರಡನೇ ಬಾರಿಗೆ ದೆಹಲಿ ಚಲೋ ಚಳುವಳಿ ನಿರತ ಸಿಂಘು ಗಡಿಗೆ ಭೇಟಿ ನೀಡಿದ ಅವರು, ರೈತರಿಗೆ ಕೃಷಿ ಕಾಯ್ದೆಯ ಕುರಿತು ಸೂಕ್ತ ಮಾಹಿತಿಯಿಲ್ಲ ಎಂದು ಕೇಂದ್ರ ಸರ್ಕಾರ ಆರೋಪಿಸುತ್ತಿದೆ. ಸಾರ್ವಜನಿಕ ಮುಕ್ತ ಚರ್ಚೆಯಿಂದ ಯಾರಿಗೆ ಎಷ್ಟು ಮಾಹಿತಿಯಿದೆ ಎಂಬುದು ತಿಳಿಯಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಚಾಟಿಯೇಟು ಬೀಸಿದರು.
ಕೇಂದ್ರ ಕೃಷಿ ಭೂಮಿ ಕಂಪನಿಗಳ ಕೈವಶ ಆಗದು. MSP ಮುಂದುವರೆಯಲಿದೆ ಎನ್ನುತ್ತಿದೆಯೇ ಹೊರತು, ಕೃಷಿ ಕಾಯ್ದೆಗಳ ಉಪಯುಕ್ತತೆಗಳ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದು ದೆಹಲಿ ಸಿಎಂ ವಾಗ್ದಾಳಿ ನಡೆಸಿದರು. 32 ದಿನಗಳಿಂದ ತೀವ್ರ ಚಳಿಯಲ್ಲಿ ರೈತರು ದಿನ ಕಳೆಯುತ್ತಿದ್ದಾರೆ. ಈವರೆಗೆ 40 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಕೇಜ್ರಿವಾಲ್ ಒತ್ತಾಯಿಸಿದರು.
ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮಾತನಾಡಿ, ದೆಹಲಿ ಸರ್ಕಾರ ರೈತರ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಹಗಲಿರುಳು ಪ್ರಯತ್ನಿಸುತ್ತಿದೆ. ಕ್ರೀಡಾಂಗಣಗಳಲ್ಲಿ ರೈತರ ಚಳುವಳಿಗೆ ಅವಕಾಶ ನೀಡಿದ್ದರೆ ಅವು ತೆರೆದ ಬಂಧೀಖಾನೆಗಳಾಗುತ್ತಿದ್ದವು. ನಮ್ಮ ಸರ್ಕಾರ ಕೈಗೊಂಡ ನಿರ್ಧಾರದಿಂದ ಆ ದುರ್ಘಟನೆ ಜರುಗಲಿಲ್ಲ ಎಂದರು.
ಕೃಷಿ ಕಾಯ್ದೆಗೆ ಅವಕಾಶ ನೀಡುವ ಕುರಿತು ರೈತರು ಆಲೋಚಿಸಬೇಕು: ಎಚ್.ಡಿ.ಕುಮಾರಸ್ವಾಮಿ