ದೆಹಲಿ: ವರ್ಷಗಳ ಹಿಂದೆ ಸರ್ಕಾರಿ ವಸತಿಗಳನ್ನು ಕಲಾವಿದರಿಗೆ ಮಂಜೂರು ಮಾಡಲಾಗಿತ್ತು ಆದರೆ 2014 ರಲ್ಲಿ ಇದನ್ನು ರದ್ದುಗೊಳಿಸಲಾಗಿದೆ. ಹಾಗಾಗಿ ಎಂಟು ಪ್ರಖ್ಯಾತ ಕಲಾವಿದರಿಗೆ ಮೇ 2 ರೊಳಗೆ ವಸತಿ ಖಾಲಿ ಮಾಡುವಂತೆ ಕೇಂದ್ರವು ಬುಧವಾರ ಹೇಳಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ (Padma Shri awardee) ಮತ್ತು ಒಡಿಸ್ಸಿ ನೃತ್ಯಗಾರ (Odissi dancer) 90ರ ಹರೆಯದ ಗುರು ಮಾಯಾಧರ್ ರಾವುತ್ (Guru Mayadhar Raut) ಅವರನ್ನು ಬುಧವಾರ ಸರ್ಕಾರಿ ವಸತಿಯಿಂದ ಹೊರಹಾಕಲಾಗಿತ್ತು. 28 ಕಲಾವಿದರ ಪೈಕಿ ಸುಮಾರು ಎಂಟು ಮಂದಿ ಇನ್ನೂ ಹಲವಾರು ಸೂಚನೆಗಳ ಹೊರತಾಗಿಯೂ ತಮ್ಮ ಸರ್ಕಾರಿ ವಸತಿಗಳನ್ನು ಬಿಟ್ಟುಕೊಟ್ಟಿಲ್ಲ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. “ಈ ಎಂಟು ಕಲಾವಿದರು ತಮ್ಮ ಬಂಗಲೆಗಳನ್ನು ಖಾಲಿ ಮಾಡುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ನಮಗೆ ಭರವಸೆ ನೀಡಿದ್ದು ಮತ್ತಷ್ಟು ಕಾಲಾವಕಾಶ ಕೋರಿದ್ದರು. ಅವರು ಮೇ 2 ರೊಳಗೆ ವಸತಿ ಖಾಲಿ ಮಾಡುವುದಾಗಿ ಲಿಖಿತವಾಗಿ ಭರವಸೆ ನೀಡಿದ್ದಾರೆ ಮತ್ತು ನಾವು ಅವರಿಗೆ ಸಮಯ ನೀಡಿದ್ದೇವೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ಗುರು ಮಾಯಾಧರ್ ರಾವುತ್ ಅವರನ್ನು ಹೊರಹಾಕಿರುವ ಕುರಿತು ಮಾತನಾಡಿದ ಅಧಿಕಾರಿಯೊಬ್ಬರು, ತೆರವು ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಅಧಿಕಾರಿಗಳ ತಂಡವನ್ನು ಅವರ ಸರ್ಕಾರಿ ಬಂಗಲೆಗೆ ಕಳುಹಿಸಲಾಗಿದೆ ಎಂದು ಹೇಳಿದರು. ತೆರವು ಕಾರ್ಯಾಚರಣೆ ವೇಳೆ ರಾವುತ್ ಅವರ ಬಂಗಲೆಯ ಹೊರಗೆ ಅವರ ಮನೆಯ ಸಾಮಾನುಗಳನ್ನು ಇರಿಸಿರುವ ವಿಡಿಯೊ, ಚಿತ್ರಗಳು ಸಾಮಾಜಿಕ ಮಾಧ್ಯಮದ ಹರಿದಾಡಿದೆ.
ಸರ್ಕಾರದ ನೀತಿಯ ಪ್ರಕಾರ 40 ಕಲಾವಿದರು ತಿಂಗಳಿಗೆ ₹ 20,000 ಕ್ಕಿಂತ ಕಡಿಮೆ ಗಳಿಸಿದರೆ ಸಂಸ್ಕೃತಿ ಸಚಿವಾಲಯದ ಶಿಫಾರಸಿನ ಮೇರೆಗೆ ಜನರಲ್ ಪೂಲ್ ವಸತಿ ಸೌಕರ್ಯಗಳಲ್ಲಿ ವಿಶೇಷ ಕೋಟಾದಡಿಯಲ್ಲಿ ವಸತಿ ಪಡೆಯಬಹುದು.
ಈ ತಿಂಗಳ ಆರಂಭದಲ್ಲಿ ದೆಹಲಿ ಹೈಕೋರ್ಟ್ ಭಾರತೀಯ ಶಾಸ್ತ್ರೀಯ ಕಲಾವಿದೆ ರೀಟಾ ಗಂಗೂಲಿ ಅವರಿಗೆ ಹೆಚ್ಚಿನ ಸಮಯವನ್ನು ನೀಡಲು ನಿರಾಕರಿಸಿತು. ಅವರು ಏಪ್ರಿಲ್ ಅಂತ್ಯದ ವೇಳೆಗೆ ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರ ಮಂಜೂರು ಮಾಡಿದ ನಿವಾಸಗಳನ್ನು ಖಾಲಿ ಮಾಡುವಂತೆ ಮತ್ತು ಇತರರಿಗೆ ನಿರ್ದೇಶಿಸುವ ನ್ಯಾಯಾಧೀಶರ ನಿರ್ಧಾರವನ್ನು ಪ್ರಶ್ನಿಸಿದ್ದರು.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನವೀನ್ ಚಾವ್ಲಾ ಅವರ ಪೀಠವು ಇನ್ನೂ ಒಂದು ದಿನವನ್ನು ನೀಡುವುದಿಲ್ಲ. ನ್ಯಾಯಾಧೀಶರು ಅವರಿಗೆ ಎರಡು ತಿಂಗಳ ಕಾಲಾವಕಾಶವನ್ನು ನೀಡುವಾಗ ಹೆಚ್ಚು ದಯೆ ತೋರಿದ್ದಾರೆ ಎಂದು ಹೇಳಿತ್ತು. ಕೇಂದ್ರವು ನಿವೇಶನವನ್ನು ತೆರವು ಮಾಡಲು ಡಿಸೆಂಬರ್ 31, 2020 ರ ಗಡುವನ್ನು ನೀಡಿತ್ತು. ಆದರೆ ಅರ್ಜಿಗಳನ್ನು ಸಲ್ಲಿಸಿದ ನಂತರ ಹೈಕೋರ್ಟ್ ನೋಟಿಸ್‌ಗೆ ತಡೆ ನೀಡಿತು.
ಅರ್ಜಿದಾರರು ಫೆಬ್ರವರಿಯಲ್ಲಿ ನೀಡಿದ ಆದೇಶವನ್ನು ಪಾಲಿಸದಿದ್ದಲ್ಲಿ ಕೇಂದ್ರವು ಕ್ರಮ ಕೈಗೊಳ್ಳಲು ಮುಕ್ತವಾಗಿದೆ ಎಂದು ನ್ಯಾಯಾಲಯ ಹೇಳಿತ್ತು.
ಮೋಹಿನಿಯಾಟ್ಟಂ ನರ್ತಕಿ ಭಾರತಿ ಶಿವಾಜಿ, ಕೂಚಿಪುಡಿ ನರ್ತಕಿ ಗುರು ವಿ ಜಯರಾಮ ರಾವ್, ಮಾಯಾಧರ್ ರಾವುತ್, ದ್ರುಪದ್ ಗಾಯಕ ಉಸ್ತಾದ್ ಎಫ್ ವಾಸಿಫುದ್ದೀನ್ ದಾಗರ್, ಭರತನಾಟ್ಯ ನರ್ತಕಿ ರಾಣಿ ಶಿಂಘಾಲ್, ಕಥಕ್ ತಜ್ಞ ಗೀತಾಂಜಲಿ ಲಾಲ್ ಮತ್ತು ಇತರ ಕಲಾವಿದರಾದ ಕೆಆರ್ ಸುಬಣ್ಣ, , ಕಮಲ್ ಸಾಬ್ರಿ, ದೇವರಾಜ್ ದಾಕೋಜಿ, ಕಮಲಿನಿ, ಕಲಾವಿದ ಜತಿನ್ ದಾಸ್, ಪಂಡಿತ್ ಭಜನ್ ಸೊಪೋರಿ ಮತ್ತು ಗಂಗೂಲಿ ಸಲ್ಲಿಸಿದ ಅರ್ಜಿಗಳ ಮೇಲೆ ಏಕಸದಸ್ಯ ನ್ಯಾಯಾಧೀಶರು ತೀರ್ಪು ನೀಡಿದರು. 1987ರಲ್ಲಿ ಮನೆ ಮಂಜೂರಾಗಿದ್ದ ಕೂಚಿಪುಡಿ ನರ್ತಕಿ ಗುರು ಜಯರಾಮ ರಾವ್ ಅವರ ಪತ್ನಿ ವನಶ್ರೀ ರಾವ್ ಅವರು ಆಸ್ತಿಯನ್ನು ಖಾಲಿ ಮಾಡುವ ಪ್ರಕ್ರಿಯೆಯಲ್ಲಿದ್ದಾರೆ.
“ನಾವು ಗೃಹೋಪಯೋಗಿ ವಸ್ತುಗಳನ್ನು ಪ್ಯಾಕ್ ಮಾಡಲು ಪ್ರಾರಂಭಿಸಿದ್ದೇವೆ. ಸರ್ಕಾರವು ನಮ್ಮ ಮಾತು ಕೇಳಲು ಸಿದ್ಧವಿಲ್ಲ. ನಾವು ಶೀಘ್ರದಲ್ಲೇ ವಸತಿಗಳನ್ನು ಖಾಲಿ ಮಾಡುತ್ತೇವೆ” ಎಂದು ರಾವ್ ಬುಧವಾರ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
“ಅಕ್ರಮ ನಿವಾಸಿಗಳ” ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಎಸ್ಟೇಟ್ ನಿರ್ದೇಶನಾಲಯವು ಲೋಕಸಭಾ ಸದಸ್ಯ ಚಿರಾಗ್ ಪಾಸ್ವಾನ್ ಅವರನ್ನು ಅವರ ದಿವಂಗತ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ನೀಡಲಾಗಿದ್ದ 12, ಜನಪಥ್ ಬಂಗಲೆಯಿಂದ ಹೊರಹಾಕಿತು. ಸಚಿವರಾಗಿದ್ದಾಗ ಬಂಗಲೆಗಳನ್ನು ಮಂಜೂರು ಮಾಡಿದ್ದ ಹಲವು ಬಿಜೆಪಿ ಸಂಸದರು ಸರ್ಕಾರಿ ಸೌಲಭ್ಯಗಳನ್ನು ಸಹ ಖಾಲಿ ಮಾಡಬೇಕಾಯಿತು.
ಇದನ್ನೂ ಓದಿ: ಸರ್ಕಾರಿ ಬಂಗಲೆಯಲ್ಲಿ ಬಾಡಿಗೆಗಿದ್ದ ಕಲಾವಿದರ ತೆರವು: ಮನೆ ಕಳೆದುಕೊಂಡ 91ರ ಹರೆಯದ ಪದ್ಮಶ್ರೀ ಪುರಸ್ಕೃತ ಗುರು ಮಾಯಾಧರ್ ರಾವುತ್
Published On - 11:34 am, Thu, 28 April 22