ಜಮ್ಮು: 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ (2019 Pulwama terror attack) 40 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ (Digvijaya Singh) ಇಂದು ಪ್ರಶ್ನೆಗಳನ್ನೆತ್ತಿದ್ದು, ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ (surgical strikes) ಮಾಡಿದ ಬಗ್ಗೆ ಕೇಂದ್ರವು ಯಾವುದೇ ಪುರಾವೆ ನೀಡಿಲ್ಲ ಎಂದು ಹೇಳಿದ್ದಾರೆ. ಪುಲ್ವಾಮಾ ಭಯೋತ್ಪಾದನೆಯ ಕೇಂದ್ರವಾಗಿದ್ದು, ಪ್ರತಿ ಕಾರನ್ನು ತಪಾಸಣೆ ಮಾಡಲಾಗುತ್ತದೆ. ರಾಂಗ್ ಸೈಡ್‌ನಿಂದ ಸ್ಕಾರ್ಪಿಯೋ ಕಾರು ಬಂದಿದೆ, ಯಾಕೆ ತಪಾಸಣೆ ಮಾಡಲಿಲ್ಲ? ನಂತರ ಡಿಕ್ಕಿ ಹೊಡೆದು ನಮ್ಮ 40 ಜವಾನರು ಸಾವಿಗೀಡಾಗಿದ್ದಾರೆ. ಇಲ್ಲಿಯವರೆಗೆ ಸರ್ಕಾರ ಸಂಸತ್ತಿನಲ್ಲಿ ಅಥವಾ ಸಾರ್ವಜನಿಕವಾಗಿ ಘಟನೆಯ ಬಗ್ಗೆ ಮಾಹಿತಿ ನೀಡಿಲ್ಲ ಎಂದಿದ್ದಾರೆ ದಿಗ್ವಿಜಯ ಸಿಂಗ್. ನಾವು ಇಷ್ಟು ಜನರನ್ನು ಕೊಂದಿದ್ದೇವೆ ಎಂದು ಅವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡುತ್ತಾರೆ. ಆದರೆ ಯಾವುದೇ ಪುರಾವೆ ಇಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದರು. ಜಮ್ಮುವಿನಲ್ಲಿ ದಿಗ್ವಿಜಯ ಸಿಂಗ್ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ನಂತರ ವಿಡಿಯೊ ಟ್ವೀಟ್ ಮಾಡಿರುವ ಅವರು, ಭಯೋತ್ಪಾದಕರ ಕೈಗೆ 300 ಕೆಜಿ ಆರ್‌ಡಿಎಕ್ಸ್ ಹೇಗೆ ಸಿಕ್ಕಿತು ಮತ್ತು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನಡುವಿನ ಸ್ನೇಹ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ನಡೆದ 2016ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 18 ಯೋಧರು ಹುತಾತ್ಮರಾದ ನಂತರ ದಿನಗಳಲ್ಲಿ ಭಾರತವು ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಫೆಬ್ರವರಿ 2019 ರ ಪುಲ್ವಾಮಾದಲ್ಲಿ ಭದ್ರತಾ ಬೆಂಗಾವಲು ಪಡೆ ಮೇಲೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ದಾಳಿ ನಡೆಸಿದೆ ಎನ್ನಲಾಗಿದೆ.
ದಾಳಿಯ ಕೆಲವು ದಿನಗಳ ನಂತರ, ಭಾರತವು ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ವೈಮಾನಿಕ ದಾಳಿಯ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಪುಲ್ವಾಮಾ ದಾಳಿ ಮತ್ತು ವೈಮಾನಿಕ ದಾಳಿಯ ಬಗ್ಗೆ ಕಾಂಗ್ರೆಸ್ ಈ ಹಿಂದೆ ಪ್ರಶ್ನೆಗಳನ್ನು ಎತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ, ಪಕ್ಷವು ತನ್ನ ಟೀಕೆಗಳನ್ನು ಕಡಿಮೆ ಮಾಡಿದೆ. ಈ ಟೀಕೆಗಳಿಗೆ ಬಿಜೆಪಿಯು ಕಾಂಗ್ರೆಸ್ “ನಮ್ಮ ಸೇನೆಯನ್ನು ಅನುಮಾನಿಸುತ್ತಿದೆ” ಎಂದು ಆರೋಪಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ