PAFF Ban: ಭಯೋತ್ಪಾದನೆ ಚಟುವಟಿಕೆ; ಪಿಎಎಫ್ಎಫ್ ನಿಷೇಧಿಸಿದ ಕೇಂದ್ರ
ಪಿಎಎಫ್ಎಫ್ ಎಂಬುದು ಮೌಲಾನಾ ಮಸೂದ್ ಅಜರ್ ನೇತೃತ್ವದ ಜೈಷ್-ಎ-ಮೊಹಮ್ಮದ್ನ ಜತೆ ನಂಟು ಹೊಂದಿರುವ, ಅದರ ಕಾರ್ಯಸೂಚಿಗಳಿಗೆ ಅನುಗುಣವಾಗಿ ದುಷ್ಕೃತ್ಯಗಳನ್ನು ಎಸಗುವ ಸಂಘಟನೆ.
ನವದೆಹಲಿ: ಜೈಷ್-ಎ-ಮೊಹಮ್ಮದ್ (Jaish-e-Mohammed) ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿರುವ ಪೀಪಲ್ಸ್ ಆ್ಯಂಟಿ-ಫ್ಯಾಸಿಸ್ಟ್ ಫ್ರಂಟ್ ಅಥವಾ ಪಿಎಎಫ್ಎಫ್ (PAFF) ಅನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಪಿಎಎಫ್ಎಫ್ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆ ಹೇಳಿದೆ. ಲಷ್ಕರ್ ಎ ತಯ್ಬಾದ ನಂಟು ಹೊಂದಿರುವ ರೆಸಿಸ್ಟೆನ್ಸ್ ಫ್ರಂಟ್ಗೆ ಗುರುವಾರವಷ್ಟೇ ಗೃಹ ಸಚಿವಾಲಯ ನಿಷೇಧ ಹೇರಿತ್ತು. ಅದರ ಬೆನ್ನಲ್ಲೇ ಪಿಎಎಫ್ಎಫ್ ವಿರುದ್ಧವೂ ಕ್ರಮ ಕೈಗೊಂಡಿದೆ.
ಪಿಎಎಫ್ಎಫ್ ಎಂಬುದು ಮೌಲಾನಾ ಮಸೂದ್ ಅಜರ್ ನೇತೃತ್ವದ ಜೈಷ್-ಎ-ಮೊಹಮ್ಮದ್ನ ಜತೆ ನಂಟು ಹೊಂದಿರುವ, ಅದರ ಕಾರ್ಯಸೂಚಿಗಳಿಗೆ ಅನುಗುಣವಾಗಿ ದುಷ್ಕೃತ್ಯಗಳನ್ನು ಎಸಗುವ ಸಂಘಟನೆ. ದೇಶದ ಭದ್ರತಾ ಪಡೆಗಳಿಗೆ, ನಾಯಕರಿಗೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಇತರ ರಾಜ್ಯಗಳ ನಾಗರಿಕರಿಗೆ ಭೀತಿ ಒಡ್ಡುವ ಸಂಘಟನೆ ಎಂದು ಗೃಹ ಸಚಿವಾಲಯದ ಅಧಿಸೂಚನೆ ತಿಳಿಸಿದೆ.
2019ರಲ್ಲಿ ಆರಂಭವಾಗಿದ್ದ ಪೀಪಲ್ಸ್ ಆ್ಯಂಟಿ-ಫ್ಯಾಸಿಸ್ಟ್ ಫ್ರಂಟ್
ಪೀಪಲ್ಸ್ ಆ್ಯಂಟಿ-ಫ್ಯಾಸಿಸ್ಟ್ ಫ್ರಂಟ್ 2019ರಲ್ಲಿ ಆರಂಭವಾಗಿತ್ತು. ಜೈಷ್-ಎ-ಮೊಹಮ್ಮದ್ನ ನೆರಳಾಗಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡಿತ್ತು. ಇದನ್ನು ಯುಎಪಿಎ ಅಡಿ ಗುರುತಿಸಲಾಗಿತ್ತು ಎಂದು ಗೃಹ ಸಚಿವಾಲಯ ತಿಳಿಸಿದೆ. ಸದ್ಯ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಎಲ್ಇಟಿಯ ಅರ್ಬಜ್ ಅಹಮದ್ ಮಿರ್ನಲ್ಲಿ ಕೇಂದ್ರ ಸರ್ಕಾರ ಶುಕ್ರವಾರ ಯುಎಪಿಎ ಅಡಿ ಭಯೋತ್ಪಾದಕನೆಂದು ಘೋಷಿಸಿತ್ತು. ಈತ ಕಳೆದ ವರ್ಷ ಮೇ ತಿಂಗಳಲ್ಲಿ ಕಾಶ್ಮೀರದಲ್ಲಿ ನಡೆದ ಶಿಕ್ಷಕರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ