ಟೆಲಿಗ್ರಾಮ್‌ನಲ್ಲಿ CoWIN ಡೇಟಾ ಸೋರಿಕೆ?; ಕೇಂದ್ರ ಸರ್ಕಾರ ತನಿಖೆ ನಡೆಸಲಿದೆ: ಮೂಲಗಳು
ಸೋರಿಕೆಯಾದ ಡೇಟಾವು ವಿದೇಶಕ್ಕೆ ಪ್ರಯಾಣಿಸಿದ ವ್ಯಕ್ತಿಗಳ ಪಾಸ್‌ಪೋರ್ಟ್ ಸಂಖ್ಯೆಗಳನ್ನು ಒಳಗೊಂಡಿದ್ದು, CoWin ಅಪ್ಲಿಕೇಶನ್‌ನಲ್ಲಿ ಅವರ ಪ್ರಯಾಣ ಮಾಹಿತಿಯೂ ಇದೆ ಎಂದು ಸೌತ್ ಏಷ್ಯಾ ಇಂಡೆಕ್ಸ್ ಟ್ವೀಟ್ ಮಾಡಿ
ದೆಹಲಿ: ದೇಶದ ಕೋವಿಡ್ -19 (Covid 19) ವ್ಯಾಕ್ಸಿನೇಷನ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಕೋವಿನ್ (CoWIN) ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಜನರ ವೈಯಕ್ತಿಕ ವಿವರಗಳು ಸಾಮಾಜಿಕ ಮಾಧ್ಯಮ ವೇದಿಕೆ ಟೆಲಿಗ್ರಾಮ್‌ನಲ್ಲಿ (Telegram) ಸೋರಿಕೆಯಾಗಿದೆ ಎಂದು ವರದಿಯಾಗಿದ್ದು ಈ ಬಗ್ಗೆ ಸರ್ಕಾರ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. CoWIN ನಲ್ಲಿ ಸೈನ್ ಅಪ್ ಮಾಡಿದ ಹಲವಾರು ರಾಜಕಾರಣಿಗಳು, ಅಧಿಕಾರಿಗಳು ಮತ್ತು ವ್ಯಕ್ತಿಗಳ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಟೆಲಿಗ್ರಾಮ್‌ನಲ್ಲಿನ ಬೋಟ್ ಖಾತೆಯಿಂದ ಹಂಚಿಕೊಳ್ಳಲಾಗಿದೆ ಎಂದು ವರದಿಯೊಂದು ಹೇಳಿಕೊಂಡಿದೆ.
ಆಪಾದಿತ ಸೋರಿಕೆಯ ಮೂಲವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ಕೋವಿನ್ ಅಥವಾ ಇನ್ನಾವುದೇ ಅಪ್ಲಿಕೇಶನ್ ಮೂಲಕ ಡೇಟಾವನ್ನು ಪಡೆಯಲಾಗಿದೆಯೇ ಎಂದು ಸರ್ಕಾರವು ತನಿಖೆ ನಡೆಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇಂದು ಬೆಳಿಗ್ಗೆ ಸರಣಿ ಟ್ವೀಟ್ ಮಾಡಿದ ನ್ಯೂಸ್ ಪೋರ್ಟಲ್ ಸೌತ್ ಏಷ್ಯಾ ಇಂಡೆಕ್ಸ್ ಎಲ್ಲಾ ಕೋವಿಡ್ ಲಸಿಕೆ ಪಡೆದ ಭಾರತೀಯರ ಕುಟುಂಬ ಸದಸ್ಯರ ವಿವರಗಳು ಸಹ ಸೋರಿಕೆಯಾಗಿದೆ ಎಂದು ಹೇಳಿದೆ.
ಸೋರಿಕೆಯಾದ ಡೇಟಾವು ವಿದೇಶಕ್ಕೆ ಪ್ರಯಾಣಿಸಿದ ವ್ಯಕ್ತಿಗಳ ಪಾಸ್‌ಪೋರ್ಟ್ ಸಂಖ್ಯೆಗಳನ್ನು ಒಳಗೊಂಡಿದ್ದು, CoWin ಅಪ್ಲಿಕೇಶನ್‌ನಲ್ಲಿ ಅವರ ಪ್ರಯಾಣ ಮಾಹಿತಿಯೂ ಇದೆ ಎಂದು ಸೌತ್ ಏಷ್ಯಾ ಇಂಡೆಕ್ಸ್ ಟ್ವೀಟ್ ಮಾಡಿದೆ. ಕೋವಿನ್ ಡೇಟಾ ಸೋರಿಕೆಯಾದ ನಂತರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಭದ್ರತಾ ಕ್ರಮಗಳ ಬಗ್ಗೆ ಬ್ಯಾಂಕ್‌ಗಳಿಗೆ ಎಚ್ಚರಿಕೆ ನೀಡುವ ಸಾಧ್ಯತೆಯಿದೆ ಎಂದು ಹೇಳಿದೆ.
Just IN:— Major data breach in India; Personal data of all vaccinated Indians have been leaked online.
☆ Leaked data has Aadhaar, voter ID, Passport numbers & mobile numbers of Indians who got covid-19 vaccines.
— South Asia Index (@SouthAsiaIndex) June 12, 2023
ಆಪಾದಿತ ಸೋರಿಕೆಯ ಮೂಲ ತಿಳಿಯಲು ಹಾಗೂ ಡೇಟಾ ಸರ್ಕಾರದ ಡೊಮೇನ್‌ನ ಹೊರಗಿನ ಜನರ ಕೈಗೆ ಸಿಕ್ಕಿದೆಯೇ ಎಂದು ನಿರ್ಣಯಿಸಲು ತನಿಖೆ ನಡೆಯುತ್ತಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ನಾವು ಖಂಡಿತವಾಗಿಯೂ ಸಮಸ್ಯೆಯ ಬಗ್ಗೆ ತಿಳಿದಿದ್ದು ಡೇಟಾ ಸೋರಿಕೆ ಆಗಿದ್ದು CoWIN ಅಥವಾ ಬೇರೆ ಯಾವುದಾದರೂ ಮೂಲದಿಂದಲೇ ಎಂಬುದರ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಆಪಾದಿತ ಸೋರಿಕೆಯು CoWIN ಪೋರ್ಟಲ್ ಮೂಲಕ ಸೈನ್ ಅಪ್ ಮಾಡಿದ ನಂತರ ಲಸಿಕೆಗಳನ್ನು ಪಡೆದುಕೊಂಡಿರುವ 100 ಕೋಟಿಗಿಂತಲೂ ಹಚ್ಚು ವ್ಯಕ್ತಿಗಳ ಮೇಲೆ ಪರಿಣಾಮ ಬೀರಬಹುದು. ಇದರಲ್ಲಿ 12-14 ವರ್ಷದೊಳಗಿನ 4 ಕೋಟಿಗೂ ಹೆಚ್ಚು ಮಕ್ಕಳು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ 37 ಕೋಟಿಗೂ ಹೆಚ್ಚು ಜನರು ಸೇರಿದ್ದಾರೆ.
ಇದನ್ನೂ ಓದಿ: Cyclone Biparjoy: ಅಬ್ಬರಿಸಿದ ಬಿಪೋರ್ಜಾಯ್ ಚಂಡಮಾರುತ: ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ
ಮೂಲಗಳ ಪ್ರಕಾರ ವೈಯಕ್ತಿಕ ವಿವರಗಳನ್ನು ಹಂಚಿಕೊಂಡಿದ್ದ ಟೆಲಿಗ್ರಾಂ ಖಾತೆ ಇಂದು (ಸೋಮವಾರ) ಬೆಳಗ್ಗೆಯಿಂದ ನಿಷ್ಕ್ರಿಯವಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:21 pm, Mon, 12 June 23