ದೆಹಲಿ: ದೇಶದಲ್ಲಿಂದು ಒಟ್ಟು 1,65,714 ಜನರು ಕೊರೊನಾ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ ಸಿಕ್ಕಿದೆ. ಜೊತೆಗೆ, ಲಸಿಕೆ ಪಡೆದ ಯಾರೊಬ್ಬರ ಆರೋಗ್ಯದಲ್ಲೂ ವ್ಯತ್ಯಯವಾಗಿಲ್ಲ ಎಂದು ಇಲಾಖೆ ತಿಳಿಸಿದೆ.
ಇತ್ತ, ಕರ್ನಾಟಕದಲ್ಲಿಂದು 13,408 ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಪಡೆಯಲು 21,658 ನೋಂದಾಯಿಸಿಕೊಂಡಿದ್ದರು. 21,658 ಜನರ ಪೈಕಿ 13,408 ಜನರು ಲಸಿಕೆ ಪಡೆದಿದ್ದಾರೆ. ಜೊತೆಗೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇಕಡ 65 ರಷ್ಟು ಲಸಿಕೆ ವಿತರಣೆ ಆಗಿದೆ. 539 ಮಂದಿ ಪೈಕಿ 351 ಜನರು ಲಸಿಕೆ ಪಡೆದಿದ್ದಾರೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶೇಕಡ 53ರಷ್ಟು ಲಸಿಕೆ ವಿತರಣೆ ಆಗಿದ್ದು 277 ಮಂದಿ ಪೈಕಿ 146 ಜನರು ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ಇವತ್ತು ಭಾರತದ ವೈದ್ಯಕೀಯ ಕ್ಷೇತ್ರದಲ್ಲೇ ಒಂದು ಐತಿಹಾಸಿಕ ದಿನ. ಕಳೆದ 10 ತಿಂಗಳಿನಿಂದ ತತ್ತರಿಸಿಹೋಗಿದ್ದವರಿಗೆ ರಾಮಬಾಣ ಸಿಕ್ಕಿದೆ. ಪ್ರಧಾನಿ ಸಾರಥ್ಯದಲ್ಲಿ ಈ ಲಸಿಕೆ ಕೇವಲ 10 ತಿಂಗಳ ಸಮಯದಲ್ಲೇ ಸಿಕ್ಕಿದೆ ಎಂದು ಹೇಳಿದರು.
ನಮ್ಮ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬಹಳಷ್ಟು ಶ್ರಮಿಸಿದ್ದಾರೆ. ಬಹಳ ಪಾರದರ್ಶಕತೆಯಿಂದ ಇವತ್ತು ನಿಯಂತ್ರಣ ತರುವ ಕೆಲಸವಾಗಿದೆ. ಇಡೀ ವಿಶ್ವದಲ್ಲಿ ಅತಿ ಅಗ್ಗದ ಲಸಿಕೆಯಾಗಿದೆ. ಕೇವಲ 210 ರೂಪಾಯಿಗೆ ಸಿಕ್ಕಿದೆ. ಗ್ರೂಪ್ Dನಲ್ಲಿ ಕೆಲಸ ಮಾಡುವವರು ಮೊದಲನೇ ಫಲಾನುಭವಿಗಳಾಗಿದ್ದಾರೆ ಎಂದು ಸುಧಾಕರ್ ಹೇಳಿದರು.
ನಮ್ಮ ರಾಜ್ಯದಲ್ಲಿ ನಾಗರತ್ನ ಎಂಬ ಹೆಣ್ಣು ಮಗಳು ಮೊದಲ ಲಸಿಕೆ ಪಡೆದಿದ್ದಾರೆ. ಆಕೆ ಕಣ್ಣಲ್ಲಿ ಸಂತೋಷವನ್ನು ನಾವೂ ನೋಡಿದ್ದೇವೆ. ಇಡೀ ರಾಜ್ಯದಲ್ಲಿ 243 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಪ್ರಾರಂಭವಾಯ್ತು. ಸಾಮಾನ್ಯವಾಗಿ 9 ಗಂಟೆಗೆ ಶುರುವಾಗಬೇಕಿತ್ತು. ಆದರೆ, ಕೆಲವಡೆ 11 ಗಂಟೆ ನಂತರ ಶುರುವಾಯ್ತು ಎಂದು ಹೇಳಿದರು.
‘ಲಸಿಕೆ ಪಡೆದವರಲ್ಲಿ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ’
ಲಸಿಕೆ ಪಡೆದವರಲ್ಲಿ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ. ಕೆಲವೇ ಮಂದಿಗೆ ಮಾತ್ರ ಸ್ವಲ್ಪ ಊತ ಕಂಡುಬಂದಿದ್ದು ಬಿಟ್ಟರೇ ಬೇರೆ ಸಮಸ್ಯೆಯಾಗಿಲ್ಲ. ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಎರಡು ಲಸಿಕೆಗಳಿಂದಲೂ ಅಡ್ಡಪರಿಣಾಮಗಳು ಆಗಿಲ್ಲ ಎಂದು ಸುಧಾಕರ್ ಹೇಳಿದರು.
ನಾಳೆ ಭಾನುವಾರವಾಗಿರೋ ಹಿನ್ನೆಲೆಯಲ್ಲಿ ಕೇವಲ ಖಾಸಾಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತೆ. ಸೋಮವಾರದಿಂದ ಎಂದಿನಂತೆ ಸರ್ಕಾರಿ ಆಸ್ಪತ್ರೆಗಳಲ್ಲೂ ಸತತವಾಗಿ ಲಸಿಕೆ ಹಾಕುತ್ತೇವೆ. ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಇವತ್ತು ಹೆಚ್ಚು ಮಂದಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಕೇವಲ 37 ಪರ್ಸೆಂಟ್ ಮಂದಿ ಮಾತ್ರ ಲಸಿಕೆ ಪಡೆದು ಜಿಲ್ಲೆ ಕೊನೆ ಸ್ಥಾನದಲ್ಲಿದೆ.
ಲಸಿಕೆ ಬಹಳ ಸುರಕ್ಷಿತವಾಗಿದೆ. ಎಲ್ಲರೂ ಹಾಕಿಸಿಕೊಳ್ಳಬೇಕು ಅಂತಾ ಮನವಿ ಮಾಡುತ್ತೇನೆ. ನಾನು ಕೂಡ ಹಲವಾರು ಆಸ್ಪತ್ರೆಗಳಿಗೆ ಭೇಟಿಕೊಟ್ಟು ಪರಿಶೀಲಿಸಿದ್ದೇನೆ. 7,43,000 ಮಂದಿಯನ್ನ ಮೊದಲ ಹಂತದಲ್ಲಿ ಗುರುತಿಸಿದ್ದೀವಿ. ನಮಗೆ 8 ಲಕ್ಷದಷ್ಟು ವ್ಯಾಕ್ಸಿನ್ ಬಂದಿದೆ. ಇನ್ನು 8 ಲಕ್ಷದಷ್ಟು ವ್ಯಾಕ್ಸಿನ್ ನೀಡುವ ಭರವಸೆ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.
Published On - 8:10 pm, Sat, 16 January 21