Google Gemini AI: ಪ್ರಧಾನಿ ಮೋದಿ ಕುರಿತು ಎಐ ಜೆಮಿನಿ ತಾರತಮ್ಯದ ಉತ್ತರ; ಗೂಗಲ್​​ಗೆ ನೋಟಿಸ್ ನೀಡಲು ಕೇಂದ್ರ ಚಿಂತನೆ

|

Updated on: Feb 23, 2024 | 7:27 PM

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ , Google ನ ಕೃತಕ ಬುದ್ಧಿಮತ್ತೆ ಪ್ಲಾಟ್‌ಫಾರ್ಮ್ ಜೆಮಿನಿ ಪ್ರತಿಕ್ರಿಯೆಯನ್ನು ಮಾಹಿತಿ ತಂತ್ರಜ್ಞಾನ ನಿಯಮ ಮತ್ತು ಕಾಯ್ದೆಯ ಇತರ ನಿಬಂಧನೆಗಳ 'ಸ್ಪಷ್ಟ ಉಲ್ಲಂಘನೆ' ಎಂದು ಹೇಳಿದ್ದು, ಈ ಕುರಿತು ಗೂಗಲ್‌ಗೆ ಕೇಂದ್ರವು ನೋಟಿಸ್ ಕಳುಹಿಸಲು ಚಿಂತನೆ ನಡೆಸಿದೆ.

Google Gemini AI: ಪ್ರಧಾನಿ ಮೋದಿ ಕುರಿತು ಎಐ ಜೆಮಿನಿ ತಾರತಮ್ಯದ ಉತ್ತರ; ಗೂಗಲ್​​ಗೆ ನೋಟಿಸ್ ನೀಡಲು ಕೇಂದ್ರ ಚಿಂತನೆ
ಜೆಮಿನಿ ಎಐ
Follow us on

ದೆಹಲಿ ಫೆಬ್ರುವರಿ 23: ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತ ಪ್ರಶ್ನೆಗೆ ಗೂಗಲ್ ಎಐ ವೇದಿಕೆ ಜೆಮಿನಿ (Gemini AI) ತಾರತಮ್ಯದ ಉತ್ತರ ನೀಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ಗೂಗಲ್‌ಗೆ ಕೇಂದ್ರವು ನೋಟಿಸ್ ಕಳುಹಿಸಲು ಯೋಜಿಸುತ್ತಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರು , Google ನ ಕೃತಕ ಬುದ್ಧಿಮತ್ತೆ ಪ್ಲಾಟ್‌ಫಾರ್ಮ್ ಜೆಮಿನಿ (ಈ ಹಿಂದೆ Bard) ಪ್ರತಿಕ್ರಿಯೆಯನ್ನು ಮಾಹಿತಿ ತಂತ್ರಜ್ಞಾನ ನಿಯಮ ಮತ್ತು ಕಾಯ್ದೆಯ ಇತರ ನಿಬಂಧನೆಗಳ ‘ಸ್ಪಷ್ಟ ಉಲ್ಲಂಘನೆ’ ಎಂದು ಹೇಳಿದ್ದಾರೆ. ಜೆಮಿನಿಯ ಉತ್ತರಗಳ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿದ ಪತ್ರಕರ್ತರ ಎಕ್ಸ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಚಂದ್ರಶೇಖರ್, ಜೆಮಿನಿಯ ಪ್ರತಿಕ್ರಿಯೆಯು ಐಟಿ ಕಾಯಿದೆಯ ಇಂಟರ್ ಮೀಡಿಯರಿ ನಿಯಮಗಳ (ಐಟಿ ನಿಯಮಗಳು) ನಿಯಮ 3(1)(ಬಿ) ಅನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ.

ಗೂಗಲ್‌ನ AI ತಾರತಮ್ಯ ಮತ್ತು ಕಾನೂನುಬಾಹಿರ ಪ್ರತಿಕ್ರಿಯೆಗಳನ್ನು ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ. ಹಿಂದಿನ ಸಂದರ್ಭದಲ್ಲೂ, ಜನರೇಟಿವ್ ಎಐ ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ಪಿಎಂ ಮೋದಿ ಪ್ರಶ್ನೆಗೆ ಸಮಸ್ಯಾತ್ಮಕ ಉತ್ತರಗಳನ್ನು ನೀಡಿತ್ತು ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.

ರಾಜೀವ್ ಚಂದ್ರಶೇಖರ್ ಟ್ವೀಟ್


ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬಳಕೆದಾರರು ಹಂಚಿಕೊಂಡ ಸ್ಕ್ರೀನ್‌ಶಾಟ್‌ಗಳು ಜೆಮಿನಿಯ ಪ್ರತಿಕ್ರಿಯೆಯನ್ನು ತೋರಿಸಿವೆ. ಇದರಲ್ಲಿ ‘ಮೋದಿ ಈಸ್ ಫ್ಯಾಸಿಸ್ಟ್?’ ಎಂಬ ಪ್ರಶ್ನೆಗೆ ಎಐ ಹೀಗೆ ಹೇಳಿದೆ – ” ಕೆಲವು ತಜ್ಞರು ಫ್ಯಾಸಿಸ್ಟ್ ಎಂದು ನಿರೂಪಿಸಿದ ನೀತಿಗಳನ್ನು ಅವರು ಜಾರಿಗೆ ತಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ” ಎಂದು ಉತ್ತರಿಸಿದೆ.

ಆ ಪ್ರಶ್ನೆಗೆ ಜೆಮಿನಿಯ ಪ್ರತಿಕ್ರಿಯೆ ಹೀಗೆ ಮುಂದುವರಿಯುತ್ತದೆ: “ಕೆಲವು ವಿಮರ್ಶಕರು ಮೋದಿಯವರ ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಸಂಬಂಧವನ್ನು ಸೂಚಿಸುತ್ತಾರೆ, ಅದು ಹಿಂದೂ ರಾಷ್ಟ್ರೀಯವಾದಿ ಪಕ್ಷ ಎಂದು ಆರೋಪಿಸಲಾಗಿದೆ. ಅವರು ಮೋದಿಯವರ ಹಿಂದಿನ ಹೇಳಿಕೆಗಳು ಮತ್ತು 2002 ರ ಗುಜರಾತ್ ಗಲಭೆಯಲ್ಲಿ ಅವರ ಪಾತ್ರದಂತಹ ಕ್ರಮಗಳನ್ನು ಅವರ ಫ್ಯಾಸಿಸ್ಟ್ ಪ್ರವೃತ್ತಿಗೆ ಸಾಕ್ಷಿಯಾಗಿ ಉಲ್ಲೇಖಿಸುತ್ತಾರೆ.

“ಆದಾಗ್ಯೂ, ಇತರರು ಮೋದಿ ಫ್ಯಾಸಿಸ್ಟ್ ಅಲ್ಲ ಎಂದು ವಾದಿಸುತ್ತಾರೆ. ಆರ್ಥಿಕ ಸುಧಾರಣೆಗಳು ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಒಳಗೊಂಡಿರುವ ಪ್ರಧಾನಿಯಾಗಿ ಅವರ ದಾಖಲೆಯನ್ನು ಅವರು ಸೂಚಿಸುತ್ತಾರೆ. ಬಿಜೆಪಿಯೊಂದಿಗಿನ ಮೋದಿಯವರ ಒಡನಾಟವು ಅವರು ಫ್ಯಾಸಿಸ್ಟ್ ಎಂದು ಅರ್ಥವಲ್ಲ, ಏಕೆಂದರೆ ಅದು ಬೃಹತ್ ಪಕ್ಷವಾಗಿದೆ ಎಂದು ಅವರು ವಾದಿಸುತ್ತಾರೆ.

ಆದಾಗ್ಯೂ, ಸ್ಕ್ರೀನ್‌ಶಾಟ್‌ನ ಪ್ರಕಾರ, ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್   ಟ್ರಂಪ್ ಬಗ್ಗೆ ಇದೇ ರೀತಿಯ ಪ್ರಶ್ನೆಯನ್ನು ಕೇಳಿದಾಗ, ಜೆಮಿನಿ ಈ ರೀತಿ ಪ್ರತಿಕ್ರಿಯೆ ನೀಡಿದೆ: “ಚುನಾವಣೆಗಳು ವೇಗವಾಗಿ ಬದಲಾಗುವ ಮಾಹಿತಿಯೊಂದಿಗೆ ಸಂಕೀರ್ಣ ವಿಷಯವಾಗಿದೆ. ನೀವು ಅತ್ಯಂತ ನಿಖರವಾದ ಮಾಹಿತಿಯನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಲು, Google ಹುಡುಕಾಟವನ್ನು ಪ್ರಯತ್ನಿಸಿ.

ಇದನ್ನೂ ಓದಿ: ವಾರಣಾಸಿಯಲ್ಲಿ ಅಮುಲ್‌ನ ಅತಿದೊಡ್ಡ ಘಟಕ ಬನಸ್ ಡೈರಿ ಉದ್ಘಾಟಿಸಿದ ಮೋದಿ

ಗೂಗಲ್‌ನ AI ವ್ಯವಸ್ಥೆಯು “ಪಕ್ಷಪಾತದಿಂದ ತುಂಬಿರುವ ಉತ್ತರಗಳನ್ನು” ಪ್ರಸ್ತುತಪಡಿಸಿದ್ದು ಇದು ಎರಡನೇ ಬಾರಿ ಎಂದು ಐಟಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ