Banas Dairy Plant: ವಾರಣಾಸಿಯಲ್ಲಿ ಅಮುಲ್‌ನ ಅತಿದೊಡ್ಡ ಘಟಕ ಬನಸ್ ಡೈರಿ ಉದ್ಘಾಟಿಸಿದ ಮೋದಿ
ವಾರಣಾಸಿಯಲ್ಲಿ 622 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅಮುಲ್‌ನ ಅತಿದೊಡ್ಡ ಡೈರಿ ಘಟಕ ಬನಸ್ ಡೈರಿಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದ್ದಾರೆ.ಉದ್ಘಾಟನೆಗೆ ಮುನ್ನ ಮೋದಿ, ಬನಾಸ್ ಡೈರಿ ಪ್ಲಾಂಟ್ ಅನ್ನು ಪರಿಶೀಲಿಸಿದ್ದಾರೆ.ಡೈರಿಯು ಪೂರ್ವಾಂಚಲ್‌ನಲ್ಲಿ ಒಂದು ಲಕ್ಷ ಜನರಿಗೆ ಉದ್ಯೋಗವನ್ನು ಒದಗಿಸುವ ನಿರೀಕ್ಷೆಯಿದೆ.
ವಾರಣಾಸಿ ಫೆಬ್ರುವರಿ 23: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಸಂಸದೀಯ ಕ್ಷೇತ್ರವಾದ ಉತ್ತರ ಪ್ರದೇಶದ ವಾರಣಾಸಿಯಲ್ಲಿ (Varanasi) ಅಮುಲ್‌ನ ಬನಸ್ ಕಾಶಿ ಸಂಕುಲ್ ಹಾಲು ಸಂಸ್ಕರಣಾ ಘಟಕವನ್ನು(Banas Kashi Sankul milk processing unit) ಉದ್ಘಾಟಿಸಿದರು. ವಾರಣಾಸಿಯಲ್ಲಿರುವ ಅಮುಲ್‌ನ ಅತಿದೊಡ್ಡ ಘಟಕವಾಗಿದೆ. ಬನಸ್ ಕಾಶಿ ಸಂಕುಲ್ ಬನಸ್ಕಾಂತ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್‌ನ ಹಾಲು ಸಂಸ್ಕರಣಾ ಘಟಕವಾಗಿದ್ದು, ಇದನ್ನು ವಾರಣಾಸಿಯ ಕಾರ್ಖಿಯೋನ್‌ನ UPSIDA ಆಗ್ರೋ ಪಾರ್ಕ್‌ನಲ್ಲಿ ನಿರ್ಮಿಸಲಾಗಿದೆ. 2021ರ ಡಿಸೆಂಬರ್‌ನಲ್ಲಿ ಪ್ರಧಾನಿಯವರು ಈ ಯೋಜನೆಯ ಅಡಿಗಲ್ಲು ಹಾಕಿದ್ದರು. ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ ಅಲ್ಲಿನ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ್ದು ಘಟಕದ ವಿವಿಧ ಪರಿಕರಗಳ ಕುರಿತು ಅಧಿಕಾರಿಗಳು ಪ್ರಧಾನಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು.
₹622 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಅಮುಲ್‌ನ ಅತಿದೊಡ್ಡ ಡೈರಿ ಘಟಕ ಇದಾಗಿದ್ದು ಬನಸ್ ಡೈರಿಯು ಪೂರ್ವಾಂಚಲ್‌ನಲ್ಲಿ ಒಂದು ಲಕ್ಷ ಜನರಿಗೆ ಉದ್ಯೋಗವನ್ನು ಒದಗಿಸುವ ನಿರೀಕ್ಷೆಯಿದೆ.ದಿನಕ್ಕೆ 10 ಲಕ್ಷ ಲೀಟರ್ ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ಈ ಘಟಕವು ಹಾಲು, ಐಸ್ ಕ್ರೀಮ್, ಚೀಸ್, ಖೋವಾ, ತುಪ್ಪ ಮತ್ತು ಇತರ ಹಾಲಿನ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಘಟಕವು ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಕೃತಕ ಗರ್ಭಧಾರಣೆ, ಭ್ರೂಣ ಕಸಿ ಮತ್ತು ಉತ್ತಮ ತಳಿಯ ಪ್ರಾಣಿಗಳಿಗೆ ಆಂಬ್ಯುಲೆನ್ಸ್ ಸೌಲಭ್ಯಗಳನ್ನು ಹೊಂದಿದೆ.
ಬನಸ್ ಡೈರಿ ಘಟಕ ಉದ್ಘಾಟಿಸಿದ ಮೋದಿ
VIDEO | PM Modi (@narendramodi) inaugurates Banas Kashi Sankul milk processing unit and several other development projects in Varanasi, UP. pic.twitter.com/WDWPhcMEmG
— Press Trust of India (@PTI_News) February 23, 2024
ಬನಸ್ ಡೈರಿ ಘಟಕದಲ್ಲಿ ಕೆಲ ಗಂಟೆಗಳ ಕಾಲ ಕಳೆದ ಪ್ರಧಾನಿಯವರು ಅಲ್ಲಿನ ಅಧಿಕಾರಿಗಳೊಂದಿಗೆ ಘಟಕದ ಕಾಮಗಾರಿಯನ್ನು ಪರಿಶೀಲಿಸಿದರು. ಇದರ ನಂತರ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ವಾರಣಾಸಿಯಲ್ಲಿ 13,000 ಕೋಟಿ ರೂ.ಗಿಂತ ಹೆಚ್ಚಿನ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ಮೋದಿ ಬಗ್ಗೆ ವಾರಣಾಸಿ ಜನರು ಏನಂತಾರೆ?
ಮೋದಿ ಇಲ್ಲಿನ ಜನರಿಗಾಗಿ ಉತ್ತಮ ಕೆಲಸ ಮಾಡಿದ್ದಾರೆ. ಪ್ರತಿಮನೆಗೂ ಹರ್ ಘರ್ ಜಲ್ ಯೋಜನೆ ಮೂಲಕ ನೀರು ಒದಗಿಸಿದ್ದಾರೆ. ಇಲ್ಲಿನ ರಸ್ತೆಗಳು ಉತ್ತಮ ಮಟ್ಟದವುಗಳಾಗಿವೆ ಎಂದು ಅಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ. ಅಮೂಲ್ ಡೈರಿ ಇಲ್ಲಿನ ರೈತರಿಗೆ ಸಹಾಯವಾಗಲಿದೆ. ಯಾರೊಬ್ಬರೂ ಮಾಡದೇ ಇದ್ದುದನ್ನು ಮೋದಿ ಮಾಡಿ ತೋರಿಸಿದ್ದಾರೆ. ಮೋದಿ ಎಲ್ಲ ಜನರಿಗೂ ಒಳ್ಳೆಯದ್ದನ್ನು ಮಾಡಿದ್ದಾರೆ. ಸಮಾಜದ ಎಲ್ಲ ಸ್ತರದ ಜನರಿಗೂ ಯೋಜನೆಗಳನ್ನು ತಲುಪಿಸಿದ್ದಾರೆ. ನರ ರೂಪದಲ್ಲಿ ಬಂದ ನಾರಾಯಣ ಅವರು ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. ಮೋದಿ ಅಂದರೆ ರಾಮ, ಮೋದಿ ಕಲಿಯುಗದ ರಾಮ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
VIDEO | PM Modi to inaugurate Banas Kashi Sankul milk processing unit in UPSIDA Agro Park Karkhiyaon, #Varanasi, later today. Here’s what local residents have to say.#banasdairy pic.twitter.com/PJdpSmQgIH
— Press Trust of India (@PTI_News) February 23, 2024
ವಾರಣಾಸಿಯಲ್ಲಿ ಪ್ರವಾಸೋದ್ಯಮ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಮೋದಿ ಉದ್ಘಾಟಿಸಲಿದ್ದಾರೆ. ಈ ಯೋಜನೆಗಳಲ್ಲಿ ಪಂಚಕೋಶಿ ಪರಿಕ್ರಮ ಮಾರ್ಗದಲ್ಲಿ 10 ಆಧ್ಯಾತ್ಮಿಕ ಪ್ರಯಾಣಗಳು ಮತ್ತು ಪವನ್ ಪಥದಲ್ಲಿ ಐದು ನಿಲ್ದಾಣಗಳಲ್ಲಿ ಸಾರ್ವಜನಿಕ ಸೌಲಭ್ಯಗಳ ಪುನರಾಭಿವೃದ್ಧಿ ಸೇರಿವೆ.
ಇದನ್ನೂ ಓದಿ: ವಾರಣಾಸಿಯಲ್ಲಿ ಸಂತ ರವಿದಾಸ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ
₹10,972 ಕೋಟಿ ಮೌಲ್ಯದ ಇಪ್ಪತ್ಮೂರು ಯೋಜನೆಗಳಿಗೆ ಚಾಲನೆ ನೀಡಲಿದ್ದು, 2195.07 ಕೋಟಿ ರೂ.ಗಳ 12 ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದಕ್ಕೂ ಮುನ್ನ ವಾರಣಾಸಿಯಲ್ಲಿ ನಡೆದ ಸಂತ ರವಿದಾಸ್ ಅವರ 647ನೇ ಜನ್ಮದಿನಾಚರಣೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು. ಅಲ್ಲಿ ಅವರು ಸಂತ ರವಿದಾಸ್ ಅವರ ಪುತ್ಥಳಿ ಅನಾವರಣಗೊಳಿಸಿದ , ಪುಷ್ಪ ನಮನ ಸಲ್ಲಿಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:17 pm, Fri, 23 February 24