ರಕುಲ್ ಪ್ರೀತ್ ಸಿಂಗ್ ವಿವಾಹಕ್ಕೆ ಅಭಿನಂದನೆ ತಿಳಿಸಿ ಪತ್ರ ಬರೆದ ನರೇಂದ್ರ ಮೋದಿ; ಎದುರಾಯ್ತು ಟೀಕೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಅವರು ಆಹ್ವಾನ ನೀಡಿದ್ದರು. ಈ ಸೆಲೆಬ್ರಿಟಿಗಳ ಮದುವೆಗೆ ಮೋದಿ ಶುಭ ಹಾರೈಸಿದ್ದಾರೆ. ಅಭಿನಂದನೆ ತಿಳಿಸಲು ಅವರು ಪತ್ರ ಬರೆದಿದ್ದಾರೆ. ಆ ಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ರಕುಲ್ ಪ್ರೀತ್ ಸಿಂಗ್ ಖುಷಿಪಟ್ಟಿದ್ದಾರೆ. ಮೋದಿ ಪತ್ರ ಬರೆದಿದ್ದನ್ನು ಕೆಲವರು ಟೀಕಿಸಿದ್ದಾರೆ.
ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ವೈವಾಹಿಕ ಜೀವನ ಆರಂಭಿಸಿದ್ದಾರೆ. ಫೆಬ್ರವರಿ 21ರಂದು ಅವರು ಹಸೆಮಣೆ ಏರಿದರು. ಜಾಕಿ ಭಗ್ನಾನಿ (Jackky Bhagnani) ಜೊತೆ ಅವರ ಮದುವೆ ನೆರವೇರಿದೆ. ಗೋವಾದ ಖಾಸಗಿ ಹೋಟೆಲ್ನಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭಕ್ಕೆ ಅನೇಕರನ್ನು ಆಹ್ವಾನಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಈ ಮದುವೆಗೆ ಬರಲು ಮೋದಿ ಅವರಿಗೆ ಸಾಧ್ಯವಾಗಲಿಲ್ಲ. ಬದಲಿಗೆ, ಅವರು ನವ ದಂಪತಿಗೆ ಅಭಿನಂದನೆ ತಿಳಿಸಿ ಪತ್ರ ಬರೆದಿದ್ದಾರೆ. ಇದರಿಂದ ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಅವರಿಗೆ ಖುಷಿ ಆಗಿದೆ.
ನರೇಂದ್ರ ಮೋದಿ ಬರೆದ ಪತ್ರವನ್ನು ರಕುಲ್ ಪ್ರೀತ್ ಸಿಂಗ್ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಅವರು ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈಗ ಅವರು ಪತಿ-ಪತ್ನಿ ಆಗಿದ್ದಾರೆ. ಅವರ ವಿವಾಹಕ್ಕೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.
ಮೋದಿ ಬರೆದ ಪತ್ರದಲ್ಲಿ ಏನಿದೆ?
‘ಜಾಕಿ ಮತ್ತು ರಕುಲ್ ಜೀವಮಾನವಿಡೀ ಇರುವ ವಿಶ್ವಾಸ ಮತ್ತು ಸಹಭಾಳ್ವೆಯ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಅವರ ಮದುವೆಯ ಶುಭ ಸಂದರ್ಭದಲ್ಲಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಮುಂಬರುವ ವರ್ಷಗಳು ಈ ದಂಪತಿ ಒಬ್ಬರನ್ನೊಬ್ಬರು ತಿಳಿದುಕೊಳ್ಳುವ ಅವಕಾಶವಾಗಿದೆ. ಈ ಜೋಡಿಯ ಮನಸ್ಸು, ಹೃದಯ, ಕೆಲಸ ಒಂದೇ ಆಗಿರಲಿ. ಸದಾಕಾಲ ಒಬ್ಬರಿಗೊಬ್ಬರು ಜೊತೆಯಾಗಿರಲಿ. ಬದುಕಿನ ಪಯಣದಲ್ಲಿ ನಿಮ್ಮ ಜೋಡಿ ಪರ್ಫೆಕ್ಟ್ ಆಗಿರಲಿ. ಮದುವೆಗೆ ಕರೆದಿದ್ದಕ್ಕೆ ಧನ್ಯವಾದಗಳು. ಈ ಶುಭ ಸಂದರ್ಭದಲ್ಲಿ ಮತ್ತೊಮ್ಮೆ ನಾನು ಅಭಿನಂದನೆ ಮತ್ತು ಶುಭಾಶಯ ತಿಳಿಸುತ್ತೇನೆ’ ಎಂದು ನರೇಂದ್ರ ಮೋದಿ ಪತ್ರ ಬರೆದಿದ್ದಾರೆ.
ರಕುಲ್ ಪ್ರೀತ್ ಸಿಂಗ್ ಹಂಚಿಕೊಂಡ ಪತ್ರ:
Thankyou so much Honorable Prime Minister @narendramodi ji. Your blessings mean a lot to us 🙏🏻🙏🏻 @jackkybhagnani pic.twitter.com/Ymq7jENvUi
— Rakul Singh (@Rakulpreet) February 22, 2024
ನಟಿಯ ಮದುವೆಗೆ ಪತ್ರ ಬರೆದು ಅಭಿನಂದನೆ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಲವರು ಖಂಡಿಸಿದ್ದಾರೆ. ರಕುಲ್ ಪ್ರೀತ್ ಸಿಂಗ್ ಹಂಚಿಕೊಂಡ ಪತ್ರದ ಪೋಸ್ಟ್ಗೆ ಕಮೆಂಟ್ ಮಾಡಿದ ಕೆಲವು ನೆಟ್ಟಿಗರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸೆಲೆಬ್ರಿಟಿಗಳಿಗೆ ಶುಭ ಹಾರೈಸುವ ಸಲುವಾಗಿ ಮೋದಿಯವರು ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಾರೆ. ಆದರೆ ರೈತರ ಬಗ್ಗೆ ಮತ್ತು ಮಣಿಪುರದ ಬಗ್ಗೆ ಅವರು ಯೋಜನೆ ಕೂಡ ಮಾಡುವುದಿಲ್ಲ’ ಎಂದು ನೆಟ್ಟಿಗರು ಟೀಕಿಸಿದ್ದಾರೆ.
ಇದನ್ನೂ ಓದಿ: ನಿರ್ಮಾಪಕ ಜಾಕಿ ಬಗ್ನಾನಿ ಜೊತೆ ರಕುಲ್ ಪ್ರೀತ್ ಸಿಂಗ್ ವಿವಾಹ: ಇಲ್ಲಿವೆ ಚಿತ್ರಗಳು
2009ರಿಂದಲೂ ನಟಿ ರಕುಲ್ ಪ್ರೀತ್ ಸಿಂಗ್ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾ ಕನ್ನಡದ ‘ಗಿಲ್ಲಿ’. ಆ ಚಿತ್ರದಲ್ಲಿ ಅವರು ಜಗ್ಗೇಶ್ ಪುತ್ರ ಗುರುರಾಜ್ ಜೊತೆ ತೆರೆ ಹಂಚಿಕೊಂಡಿದ್ದರು. ಬಳಿಕ ಅವರಿಗೆ ತೆಲುಗು, ತಮಿಳು, ಹಿಂದಿಯಲ್ಲಿ ಹೆಚ್ಚು ಅವಕಾಶಗಳು ಸಿಗಲು ಆರಂಭಿಸಿದವು. ನಂತರ ಅವರು ಕನ್ನಡದಲ್ಲಿ ಯಾವುದೇ ಸಿನಿಮಾ ಮಾಡಲಿಲ್ಲ. ಈಗ ಬಾಲಿವುಡ್ನಲ್ಲಿ ಅವರು ಹೆಚ್ಚು ಸಕ್ರಿಯರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.