ದೆಹಲಿ: ದೇಶದಲ್ಲಿ ಕೊವಿಡ್ 3ನೇ ಅಲೆಯ ಆತಂಕ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಕೊವಿಡ್ ಮಾರ್ಗಸೂಚಿ ಪಾಲಿಸುವಂತೆ ನೋಡಿಕೊಳ್ಳಿ ಎಂದು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲಾಗಿದೆ. ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾರಿಂದ ಪತ್ರ ಬರೆಯಲಾಗಿದೆ.
ದೇಶದಲ್ಲಿ ಕೊರೊನಾ ಕೇಸ್ಗಳಲ್ಲಿ ಮತ್ತೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಮತ್ತಷ್ಟು ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿರುವ ಬಗ್ಗೆ ಅಜಯ್ ಭಲ್ಲಾ ಹೇಳಿದ್ದಾರೆ.
ಜಾಗ್ರತೆಯಿಂದ ಅನ್ಲಾಕ್ ನಿಯಮಗಳ ಜಾರಿಗೆ ಸೂಚನೆ ನೀಡಲಾಗಿದೆ. ಮತ್ತೆ ಕೊರೊನಾ ಕೇಸ್ ಹೆಚ್ಚಳವಾಗದಂತೆ ಕ್ರಮ ಕೈಗೊಳ್ಳಿ. ಜನಜಂಗುಳಿ ಸೇರದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಮಾರುಕಟ್ಟೆಗಳಲ್ಲಿ, ಪ್ರವಾಸಿ ತಾಣಗಳಲ್ಲಿ ಜನ ಸೇರದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಹೊಣೆ. ಎಲ್ಲಾ ಜಿಲ್ಲಾಡಳಿತಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲು ಸಲಹೆ ನೀಡಲಾಗಿದೆ.
ದೇಶದಲ್ಲಿ ಕೊರೊನಾ ಎರಡನೇ ಅಲೆ ಇನ್ನೂ ಮುಗಿದಿಲ್ಲ. ಲಸಿಕೆ ನೀಡುವುದಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಎಲ್ಲಾ ರಾಜ್ಯಗಳ ಸಿಎಸ್ಗಳಿಗೆ ಅಜಯ್ ಭಲ್ಲಾ ಸೂಚನೆ ನೀಡಿದ್ದಾರೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸಭೆ ನಡೆಸಿದ್ದಾರೆ. ಆರೋಗ್ಯ ಕಾರ್ಯದರ್ಶಿ, ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ರಾಜಸ್ಥಾನ, ಒಡಿಶಾ, ತೆಲಂಗಾಣ, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳ, ಪಂಜಾಬ್, ದೆಹಲಿ, ಕೇರಳ, ಹರಿಯಾಣ ರಾಜ್ಯದ ಅಧಿಕಾರಿಗಳು ಭಾಗಿಯಾಗಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜೇಶ್ ಭೂಷಣ್ ಚರ್ಚೆ ನಡೆಸಿದ್ದಾರೆ.
ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ
ಭಾರತದಲ್ಲಿ ಕಳೆದ 24ಗಂಟೆಯಲ್ಲಿ 38,792 ಹೊಸ ಕೊರೊನಾ ಸೋಂಕಿನ (Coronavirus) ಕೇಸ್ಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,09,46,074ಕ್ಕೆ ಏರಿಕೆಯಾಗಿದೆ. ಹಾಗೇ, 24ಗಂಟೆಯಲ್ಲಿ 624 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಅಲ್ಲಿಗೆ ಸಾವಿನ ಸಂಖ್ಯೆ 4,11,408ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಳ್ಳುವ ಪ್ರಮಾಣ ಶೇ. 97.28ರಷ್ಟಿದ್ದು, ಸಕ್ರಿಯ ಪ್ರಕರಣಗಳು 4,29,946 ಇದೆ. ಮಂಗಳವಾರ ಒಂದೇ ದಿನ 19,15,501ಮಂದಿಗೆ ಕೊರೊನಾ ತಪಾಸಣೆ ಮಾಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 43,59,73,639 ಮಂದಿಗೆ ಕೊರೊನಾ ಟೆಸ್ಟ್ ಮಾಡಿದಂತಾಗಿದೆ. ಸದ್ಯ ದೇಶದಲ್ಲಿ 2.10 ಪರ್ಸಂಟ್ ಪಾಸಿಟಿವಿಟಿ ರೇಟ್ ಇದೆ. ಕಳೆದ 23 ದಿನಗಳಿಂದಲೂ ಪಾಸಿಟಿವಿಟಿ ದರ ಇಷ್ಟೇ ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Published On - 5:46 pm, Wed, 14 July 21