ಜನರಲ್ ಪ್ರಾವಿಡೆಂಟ್ ಫಂಡ್ (ಜಿಪಿಎಫ್) ಬಡ್ಡಿ ದರ ಯಥಾ ಸ್ಥಿತಿ; ಶೇ 7.1ರಲ್ಲೇ ಮುಂದುವರಿಕೆ
ಸತತವಾಗಿ ಐದನೇ ತ್ರೈಮಾಸಿಕ ಕೂಡ ಜನರಲ್ ಪ್ರಾವಿಡೆಂಟ್ ಫಂಡ್ ಮೇಲಿನ ಬಡ್ಡಿ ದರವನ್ನು ಯಥಾ ಸ್ಥಿತಿಯಲ್ಲಿ (ಶೇ 7.1) ಮುಂದುವರಿಸಿದೆ ಕೇಂದ್ರ ಸರ್ಕಾರ. 2021ರ ಏಪ್ರಿಲ್ನಿಂದ ಜೂನ್ ತ್ರೈಮಾಸಿಕಕ್ಕೂ ಇದೇ ಬಡ್ಡಿ ದರ ಇರಲಿದೆ.
ಕೇಂದ್ರ ಸರ್ಕಾರದ ಬೆಂಬಲ ಇರುವ ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್), ಸುಕನ್ಯಾ ಸಮೃದ್ಧಿ ಯೋಜನಾ, ಪೋಸ್ಟ್ ಆಫೀಸ್ ಸೇವಿಂಗ್ಸ್ ಮುಂತಾದವುಗಳು ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಹಾಗೇ ಬಿಟ್ಟ ಮೇಲೆ, ಈಗ ಜನರಲ್ ಪ್ರಾವಿಡೆಂಟ್ ಫಂಡ್ (GPF) ಮತ್ತು ಇತರ ಸರ್ಕಾರೇತರ ಪಿಎಫ್, ಗ್ರಾಚ್ಯುಟಿ ಫಂಡ್ಗಳ ಬಡ್ಡಿ ದರವನ್ನು ಶೇ 7.1ರ ದರದಲ್ಲೇ ಮುಂದುವರಿಸಲು ತೀರ್ಮಾನಿಸಲಾಗಿದೆ. ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಆರ್ಥಿಕ ವ್ಯವಹಾರಗಳ ಇಲಾಖೆ ಈ ಬಗ್ಗೆ ಅಧಿಕೃತವಾದ ಘೋಷಣೆಯನ್ನು ಮಾಡಿದೆ.
ಈ ಬಗ್ಗೆ ಘೋಷಣೆ ಮಾಡಿರುವ ಪ್ರಕಾರ, ಜಿಪಿಎಫ್ ಮತ್ತು ಇತರ ವಿಶೇಷ ಠೇವಣಿ ಯೋಜನೆಗಳ ಬಡ್ಡಿ ದರವಾದ ಶೇ 7.1 ಏಪ್ರಿಲ್ನಿಂದ ಜೂನ್ 2021ರ ತ್ರೈಮಾಸಿಕಕ್ಕೆ ಅನ್ವಯ ಆಗುತ್ತದೆ. ಇದೀಗ ದರವು ಏಪ್ರಿಲ್ 1, 2021ರಿಂದ ಈ ದರವು ಅನ್ವಯಿಸುತ್ತದೆ ಎಂದು ತಿಳಿಸಲಾಗಿದೆ. ಈ ಮೇಲ್ಕಂಡ ಇಲಾಖೆಯ ಬಜೆಟ್ ವಿಭಾಗ ಈ ಸಂಬಂಧವಾಗ್ಇ ಕಚೇರಿ ಮೆಮೊರಂಡಂ ವಿತರಣೆ ಮಾಡಿದೆ. ಜಿಪಿಎಫ್ ಮತ್ತು ಅದೇ ರೀತಿಯ ಫಂಡ್ಗಳಿಗೆ 2021-22ರಲ್ಲಿ ಏಪ್ರಿಲ್ನಿಂದ ಜೂನ್ 30ರ ಅವಧಿಗೆ ಬಡ್ಡಿ ದರ ಶೇ 7.1ರಷ್ಟಿರುತ್ತದೆ. ಏಪ್ರಿಲ್ 1ರಿಂದ ಇದು ಅನ್ವಯ ಆಗುತ್ತದೆ ಎಂದು ತಿಳಿಸಲಾಗಿದೆ.
ಹಣಕಾಸು ಸಚಿವಾಲಯದ ಆಫೀಸ್ ಮೆಮೊರಂಡಂ ಪ್ರಕಾರ, ಹಣಕಾಸು ಸಚಿವಾಲಯ ಘೋಷಿಸಿದಂತೆ (ಆರ್ಥಿಕ ವ್ಯವಹಾರಗಳ ಇಲಾಖೆ) ಸರ್ಕಾರೇತರ ಪ್ರಾವಿಡೆಂಟ್ ವಿಶೇಷ ಠೇವಣಿ ಯೋಜನೆ, ಸೂಪರ್ ಆನ್ಯುಯೇಷನ್ ಮತ್ತು ಗ್ರಾಚ್ಯುಟಿ ಫಂಡ್ಗಳಿಗೆ ಏಪ್ರಿಲ್ 1, 2021ರಿಂದ ಜೂನ್ 30, 2021ಕ್ಕೆ ಶೇ 7.1ರಷ್ಟು ಬಡ್ಡಿ ದೊರೆಯುತ್ತದೆ. ಈ ದರವು ಏಪ್ರಿಲ್ 1ರಿಂದಲೇ ಜಾರಿಗೆ ಬರುತ್ತದೆ. ಒಟ್ಟು 10 ಫಂಡ್ಗಳಿಗೆ ಈ ದರದ ಘೋಷಣೆಯ ಪ್ರಭಾವ ಆಗಲಿದೆ.
ಜನರಲ್ ಪ್ರಾವಿಡೆಂಟ್ ಫಂಡ್ (ಜಿಪಿಎಫ್), ಕಾಂಟ್ರಿಬ್ಯೂಟರಿ ಪ್ರಾವಿಡೆಂಟ್ ಫಂಡ್ (ಭಾರತ), ಆಲ್ ಇಂಡಿಯಾ ಸರ್ವೀಸಸ್ ಪ್ರಾವಿಡೆಂಟ್ ಫಂಡ್, ಸ್ಟೇಟ್ ರೈಲ್ವೆ ಪ್ರಾವಿಡೆಂಟ್ ಫಂಡ್, ಜನರಲ್ ಪ್ರಾವಿಡೆಂಟ್ ಫಂಡ್ (ಡಿಫೆನ್ಸ್ ಸರ್ವೀಸಸ್), ಇಂಡಿಯನ್ ಆರ್ಡ್‌ನೆನ್ಸ್ ಡಿಪಾರ್ಟ್ಮೆಂಟ್ ಪ್ರಾವಿಡೆಂಟ್ ಫಂಡ್, ಇಂಡಿಯನ್ ಆರ್ಡ್‌ನೆನ್ಸ್ ಫ್ಯಾಕ್ಟರೀಸ್ ವರ್ಕ್‌ಮೆನ್ಸ್ ಪ್ರಾವಿಡೆಂಟ್ ಫಂಡ್, ಇಂಡಿಯನ್ ನೇವಲ್ ಡಾಕ್ ಯಾರ್ಡ್ ವರ್ಕ್‌ಮೆನ್ಸ್ ಪ್ರಾವಿಡೆಂಟ್ ಫಂಡ್, ಡಿಫೆನ್ಸ್ ಸರ್ವೀಸಸ್ ಆಫೀಸರ್ಸ್ ಪ್ರಾವಿಡೆಂಟ್ ಫಂಡ್ ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿ ಭವಿಷ್ಯ ನಿಧಿ. -ಈ 10ಕ್ಕೂ ಇದೇ ಬಡ್ಡಿ ದರವು ಅನ್ವಯ ಆಗುತ್ತದೆ.
ಇದು ಸತತ ಐದನೇ ತ್ರೈಮಾಸಿಕ ಜಿಪಿಎಫ್ ಬಡ್ಡಿ ದರವನ್ನು ಶೇ 7.1ರಲ್ಲೇ ಉಳಿಸಿಕೊಳ್ಳಲಾಗಿದೆ. 2020ರ ಏಪ್ರಿಲ್ನಲ್ಲಿ ಶೇ 7.9ರಷ್ಟಿದ್ದ ಜಿಪಿಎಫ್ ಬಡ್ಡಿ ದರವನ್ನು ಶೇ 7.1ಕ್ಕೆ ಇಳಿಸಲಾಯಿತು.
ಇದನ್ನೂ ಓದಿ: VPF or PPF: ಹಣ ಉಳಿತಾಯಕ್ಕೆ ನಿಮಗೆ ವಿಪಿಎಫ್ ಅಥವಾ ಪಿಪಿಎಫ್ಗಳ ಪೈಕಿ ಯಾವುದು ಉತ್ತಮ?
ಇದನ್ನೂ ಓದಿ: ಎನ್ಎಸ್ಸಿ, ಕೆವಿಪಿ, ಪೋಸ್ಟ್ ಆಫೀಸ್ ಎಫ್ಡಿ ಬಡ್ಡಿದರಗಳ ಕಡಿತ: 46 ವರ್ಷಗಳ ಕನಿಷ್ಠ ಮಟ್ಟಕ್ಕೆ ಪಿಪಿಎಫ್ ಬಡ್ಡಿ
(Central government unchanged General Provident Fund (GPF) rate of interest consecutive 5th time with 7.1% pa)