ಚಂಡೀಗಢ ಚುನಾವಣಾ ಅಧಿಕಾರಿ ಅನಿಲ್ ಮಸಿಹ್​​ಗೆ ನೋಟಿಸ್ ನೀಡುವಂತೆ ಸುಪ್ರೀಂ ಆದೇಶ

|

Updated on: Feb 20, 2024 | 7:40 PM

Anil Masih: ಸೋಮವಾರ ಚುನಾವಣಾಧಿಕಾರಿಯು ಸುಪ್ರೀಂ ಕೋರ್ಟ್‌ನಲ್ಲಿ ಎಂಟು ಮತಪತ್ರಗಳಲ್ಲಿ ಗುರುತು ಹಾಕಿರುವುದಾಗಿ ಒಪ್ಪಿಕೊಂಡಿದ್ದರು. ಅಂದಹಾಗೆ ಸುಳ್ಳು ಹೇಳಿಕೆ ನೀಡಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತ್ತು. ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್,ಸುಳ್ಳು ಹೇಳಿಕೆಗಾಗಿ ಅನಿಲ್ ಮಸಿಹ್ ಅವರಿಗೆ ನೋಟಿಸ್ ನೀಡುವಂತೆ  ರಿಜಿಸ್ಟ್ರಾರ್ ಜುಡಿಷಿಯಲ್ ಅವರಿಗೆ ಸೂಚಿಸಿದೆ.

ಚಂಡೀಗಢ ಚುನಾವಣಾ ಅಧಿಕಾರಿ ಅನಿಲ್ ಮಸಿಹ್​​ಗೆ ನೋಟಿಸ್ ನೀಡುವಂತೆ ಸುಪ್ರೀಂ ಆದೇಶ
ಅನಿಲ್ ಮಸಿಹ್
Follow us on

ದೆಹಲಿ ಫೆಬ್ರುವರಿ 20: ಚಂಡೀಗಢದ ಮೇಯರ್ ಚುನಾವಣೆಯಲ್ಲಿ (Chandigarh mayoral polls) ಚುನಾವಣಾ ಅಧಿಕಾರಿ (presiding officer) ಉದ್ದೇಶಪೂರ್ವಕವಾಗಿ ಎಂಟು ಮತಪತ್ರಗಳನ್ನು ತಿರುಚಲು ಯತ್ನಿಸಿದ್ದಾರೆ ಎಂದು ಸುಪ್ರೀಂಕೋರ್ಟ್ (Supreme Court) ಮಂಗಳವಾರ ಹೇಳಿದೆ. ನ್ಯಾಯಾಲಯದ ಮುಂದೆ ಸುಳ್ಳು ಹೇಳಿಕೆ ನೀಡಿದ ಕಾರಣ ಸುಳ್ಳು ಹೇಳಿಕೆಗಾಗಿ ಅನಿಲ್ ಮಸಿಹ್ ಅವರಿಗೆ ನೋಟಿಸ್ ನೀಡುವಂತೆ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಜುಡಿಷಿಯಲ್ ಅವರಿಗೆ ಸೂಚಿಸಿದೆ. ಚುನಾವಣಾಧಿಕಾರಿ 8 ಬ್ಯಾಲೆಟ್ ಪೇಪರ್​​ಗಳನ್ನು ತಿರುಚಲು ಉದ್ದೇಶಪೂರ್ವಕ ಪ್ರಯತ್ನ ನಡೆಸಿರುವುದು ಸ್ಪಷ್ಟವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಹೇಳಿದೆ.

ಸೋಮವಾರ ಚುನಾವಣಾಧಿಕಾರಿಯು ಸುಪ್ರೀಂಕೋರ್ಟ್‌ನಲ್ಲಿ ಎಂಟು ಮತಪತ್ರಗಳಲ್ಲಿ ಗುರುತು ಹಾಕಿರುವುದಾಗಿ ಒಪ್ಪಿಕೊಂಡಿದ್ದರು. ಅಂದಹಾಗೆ ಸುಳ್ಳು ಹೇಳಿಕೆ ನೀಡಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತ್ತು. ಮಸಿಹ್‌ಗೆ ಪ್ರತಿಕ್ರಿಯಿಸಲು ಮೂರು ವಾರಗಳ ಕಾಲಾವಕಾಶವನ್ನು ನೀಡಲಾಗಿದ್ದು, ಅವರ ವಿರುದ್ಧ ಸುಳ್ಳು ಪ್ರಕರಣವನ್ನು ಏಕೆ ಪ್ರಾರಂಭಿಸಬಾರದು ಎಂದು ಸುಪ್ರೀಂ ಕೇಳಿದೆ.

“ಪ್ರಿಸೈಡಿಂಗ್ ಆಫೀಸರ್ (ಅನಿಲ್ ಮಸಿಹ್) ವಿರುದ್ಧ ಸುಳ್ಳು ಹೇಳಿಕೆಯ ನೋಟಿಸ್ ನೀಡಲಾಗಿದೆ. ಅವರ ವಿರುದ್ಧ ಐಪಿಸಿ ಅಡಿಯಲ್ಲಿ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ” ಎಂದು ವಕೀಲ ಶಾದನ್ ಫರಾಸತ್ ಹೇಳಿದ್ದಾರೆ. ಇಡೀ ಚುನಾವಣೆಯನ್ನು ಅನೂರ್ಜಿತಗೊಳಿಸುತ್ತಿಲ್ಲ ಆದರೆ ಎಣಿಕೆ ಪ್ರಕ್ರಿಯೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಕುಲದೀಪ್ ಕುಮಾರ್ ಚಂಡೀಗಢ ಮೇಯರ್ ಎಂದು ಘೋಷಿಸಿದ ಸುಪ್ರೀಂಕೋರ್ಟ್

ಚಂಡೀಗಢ ಮೇಯರ್ ಚುನಾವಣೆಯಲ್ಲಿ ಎಎಪಿಯ ಕುಲದೀಪ್ ಕುಮಾರ್ ವಿಜೇತ ಎಂದು ಸುಪ್ರೀಂಕೋರ್ಟ್ (Supreme Court) ಘೋಷಿಸಿದೆ. ಮತಪತ್ರ ತಿರುಚಿದ ಆರೋಪದ ಕುರಿತು ಇಂದು(ಮಂಗಳವಾರ) ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಚುನಾವಣಾ ಅಧಿಕಾರಿ ಅಸಿಂಧು ಎಂದು ಘೋಷಿಸಿದ ಮತಗಳನ್ನು ಮಾನ್ಯವೆಂದು ಪರಿಗಣಿಸಬೇಕು ಮತ್ತು ಮರುಎಣಿಕೆ ನಡೆಸಬೇಕು ಎಂದು ಹೇಳಿದೆ.ಚುನಾವಣಾ ಅಧಿಕಾರಿ ಅಸಿಂಧು ಎಂದು ಘೋಷಿಸಿದ ಮತ ಅಸಿಂಧು ಅಲ್ಲ ಎಂದು ಹೇಳಿದ ನ್ಯಾಯಾಲಯ, ಎಎಪಿಯ ಕುಲದೀಪ್ ಕುಮಾರ್ ಅವರನ್ನು ಮೇಯರ್ ಎಂದು ಘೋಷಿಸಿದೆ.

ಇದನ್ನೂ ಓದಿ: Chandigarh mayoral polls: ಎಎಪಿಯ ಕುಲದೀಪ್ ಕುಮಾರ್ ಚಂಡೀಗಢ ಮೇಯರ್ ಎಂದು ಘೋಷಿಸಿದ ಸುಪ್ರೀಂಕೋರ್ಟ್

ಅನಿಲ್ ಮಸಿಹ್ ಯಾರು?

ಅನಿಲ್ ಮಸಿಹ್ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಚಂಡೀಗಢ ಘಟಕದ ಪ್ರಮುಖ ಸದಸ್ಯರಾಗಿದ್ದಾರೆ. 53 ವರ್ಷದ ಅನಿಲ್ ಮಸಿಹ್ ಅವರನ್ನು 2018 ರಲ್ಲಿ ಚಂಡೀಗಢ ಜಿಲ್ಲೆಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ನೇಮಿಸಲಾಯಿತು. ಮಸಿಹ್ ಚಂಡೀಗಢ ಮುನ್ಸಿಪಲ್ ಕಾರ್ಪೊರೇಶನ್‌ನ ಸದಸ್ಯರೂ ಆಗಿದ್ದಾರೆ. ಮಸಿಹ್ ಮತ್ತು ಇತರ ಎಂಟು ಜನರನ್ನು 2022 ರಲ್ಲಿ ಮುನ್ಸಿಪಲ್ ಕಾರ್ಪೊರೇಶನ್‌ಗೆ ನಾಮನಿರ್ದೇಶನ ಮಾಡಲಾಗಿದೆ.

2018 ರಲ್ಲಿ, ಚರ್ಚ್ ಆಫ್ ನಾರ್ತ್ ಇಂಡಿಯಾ (CNI) ನಿಂದನೀಯ ಭಾಷೆಯನ್ನು ಬಳಸಿದ ಆರೋಪದ ಮೇಲೆ ಚರ್ಚ್ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಮತ್ತು ಸಮಿತಿಯ ಸಭೆಯಲ್ಲಿ ನಂಬಿಕೆಗೆ ವಿರುದ್ಧವಾಗಿ ಮಾತನಾಡುವುದನ್ನು ನಿರ್ಬಂಧಿಸಿದೆ. ಆದಾಗ್ಯೂ, ಅವರನ್ನು ಎರಡು ವರ್ಷಗಳ ನಂತರ CNI ನ ಬಿಷಪ್ ಡೆನ್ಜೆಲ್ ಪೀಪಲ್ಸ್ ಮರುಸ್ಥಾಪಿಸಿದರು.

ಚಂಡೀಗಢ ಮೇಯರ್ ಚುನಾವಣೆಯಲ್ಲಿ ಏನಾಯಿತು?

ಜನವರಿ 30 ರಂದು ನಡೆದ ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಿ ಬಿಜೆಪಿ ಗೆಲುವು ಸಾಧಿಸಿತ್ತು. ಚುನಾವಣಾಧಿಕಾರಿಯು ಸಮ್ಮಿಶ್ರ ಪಾಲುದಾರರ ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಿದ್ದು , ಬ್ಯಾಲೆಟ್ ಪೇಪರ್ ತಿರುಚಿದ್ದಾರೆ ಎಂ ಎಎಪಿ ಆರೋಪಿಸಿತ್ತು. ಬಿಜೆಪಿಯ ಮನೋಜ್ ಸೋಂಕರ್ ಅವರು 16 ಮತಗಳೊಂದಿಗೆ ಮೇಯರ್ ಸ್ಥಾನವನ್ನು ಗೆದ್ದರು. ಎಎಪಿ ಅಭ್ಯರ್ಥಿ ಕುಲದೀಪ್ ಕುಮಾರ್ ಅವರಿಗೆ 12 ಮತಗಳು ಸಿಕ್ಕಿತ್ತು. ಮೇಯರ್ ಆದ ನಂತರ ಮನೋಜ್ ರಾಜೀನಾಮೆ ನೀಡಿದರು. ಇದಲ್ಲದೆ, ಮೂವರು ಎಎಪಿ ಕೌನ್ಸಿಲರ್‌ಗಳು ಬಿಜೆಪಿಗೆ ಪಕ್ಷಾಂತರವಾಗಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ