ನವದೆಹಲಿ, ನವೆಂಬರ್ 4: ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ರಾಜ್ಯದಲ್ಲಿ ರಾಜಕೀಯ ಕಾವು ಜೋರಾಗಿದೆ. ರಾಜ್ಯ ರಾಜಕೀಯ ರಾಷ್ಟ್ರ ಮಟ್ಟದಲ್ಲೂ ಸದ್ದು ಮಾಡಲಾರಂಭಿಸಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ವಿರುದ್ಧ ಬೆಟ್ಟಿಂಗ್ ಆ್ಯಪ್ ಪ್ರವರ್ತಕರಿಂದ 508 ಕೋಟಿ ರೂಪಾಯಿ ಪಡೆದ ಆರೋಪವನ್ನು ಜಾರಿ ನಿರ್ದೇಶನಾಲಯ (ED) ಮಾಡಿದ ಬೆನ್ನಲ್ಲೇ ಬಿಜೆಪಿ ಅದನ್ನು ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಬಿಜೆಪಿಯು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಚುನಾವಣೆ ಗೆಲ್ಲಲು ಹೊರಟಿದೆ ಎಂದು ಆರೋಪ ಮಾಡಿದೆ.
ಛತ್ತೀಸ್‌ಗಢದ ದುರ್ಗ್‌ನಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಸರ್ಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರಿಂದ ಬಘೇಲ್ ಅವರು 508 ಕೋಟಿ ರೂಪಾಯಿ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಉಲ್ಲೇಖಿಸಿದ ಮೋದಿ, ಅವರು (ಕಾಂಗ್ರೆಸ್) ಮಹಾದೇವನ ಹೆಸರನ್ನೂ ಬಿಟ್ಟಿಲ್ಲ. ಬೆಟ್ಟಿಂಗ್ ಮೂಲಕ ಕಾಂಗ್ರೆಸ್ ಸಾರ್ವಜನಿಕ ಹಣವನ್ನು ಲೂಟಿ ಮಾಡಿದೆ. ಮಹದೇವ್ ಹೆಸರಲ್ಲಿ ಹಗರಣ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ರಾಯ್‌ಪುರದಲ್ಲಿ ದೊಡ್ಡ ಕಾರ್ಯವೊಂದು ನಡೆದಿದೆ. ಛತ್ತೀಸ್‌ಗಢದ ಯುವಕರಿಂದ ಲೂಟಿ ಮಾಡಿ ಸಂಗ್ರಹಿಸಿರುವ ಹಣದಿಂದ ಕಾಂಗ್ರೆಸ್ ನಾಯಕರು ಮನೆ ತುಂಬುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉಚಿತ ಪಡಿತರ ಯೋಜನೆ 5 ವರ್ಷ ವಿಸ್ತರಣೆ: ಛತ್ತೀಸ್ಗಢದಲ್ಲಿ ಪ್ರಧಾನಿ ಮೋದಿ ಘೋಷಣೆ
ಈ ಮಧ್ಯೆ, ಕಾಂಗ್ರೆಸ್ ಪಕ್ಷವು ಛತ್ತೀಸ್‌ಗಢ ಚುನಾವಣೆಯಲ್ಲಿ ಹವಾಲಾ ಆಪರೇಟರ್‌ಗಳನ್ನು ಬಳಸಿಕೊಂಡು ಸ್ಪರ್ಧಿಸುತ್ತಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಪೇಶ್ ಬಘೇಲ್ ಬಗ್ಗೆ ಗುರುವಾರ ದೇಶದ ಮುಂದೆ ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಅಸೀಮ್ ದಾಸ್ ಎಂಬ ವ್ಯಕ್ತಿಯಿಂದ 5.30 ಕೋಟಿ ರೂ.ಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಕಾಂಗ್ರೆಸ್ ನಾಯಕರು ಶುಭಂ ಸೋನಿ ಮೂಲಕ ಅಸೀಂ ದಾಸ್ ಅವರಿಂದ ಹಣ ಪಡೆದಿರುವುದು ನಿಜವೇ? ರಾಯ್‌ಪುರಕ್ಕೆ ಹೋಗಿ ಬಘೇಲ್‌ಗೆ ಚುನಾವಣಾ ವೆಚ್ಚವಾಗಿ ಹಣ ನೀಡುವಂತೆ ಅಸೀಮ್ ದಾಸ್ ಅವರು ಸೋನಿ ಅವರಿಗೆ ಆದೇಶಿಸಿದ್ದರೇ ಎಂದು ಪ್ರಶ್ನಿಸಿದ್ದಾರೆ.
ರಾಜಸ್ಥಾನ ಮತ್ತು ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಖಚಿತವಾದ ಹಿನ್ನೆಲೆಯಲ್ಲಿ ಆ ಪಕ್ಷವು ಕೇಂದ್ರೀಯ ಸಂಸ್ಥೆಗಳಾದ ಇ.ಡಿ ಮತ್ತು ಕೇಂದ್ರೀಯ ತನಿಖಾ ದಳವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ತಿರುಗೇಟು ನೀಡಿದ್ದಾರೆ.
ರಾಜಸ್ಥಾನ ಮತ್ತು ಛತ್ತೀಸ್‌ಗಢದ ಜನರು ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟಿದ್ದಾರೆ, ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ರಮೇಶ್ ದೂರಿದ್ದಾರೆ.
ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಒಂದು ನಿರ್ದಿಷ್ಟ ಸೋಲಿನ ನಿರೀಕ್ಷೆಯನ್ನು ಎದುರಿಸುತ್ತಿರುವ ಪ್ರಧಾನಿ, ಕಾಂಗ್ರೆಸ್ ನಾಯಕರ ಪ್ರತಿಷ್ಠೆಗೆ ಹಾನಿ ಮಾಡಲು ತಮ್ಮ ಕೊನೆಯ ಅಸ್ತ್ರವಾದ ಇ.ಡಿಯನ್ನು ಬಿಚ್ಚಿಟ್ಟಿದ್ದಾರೆ. ಛತ್ತೀಸ್‌ಗಢ ಮತ್ತು ರಾಜಸ್ಥಾನ ಕಾಂಗ್ರೆಸ್ ಪಕ್ಷದ ‘ಕವಚ’ ಅಥವಾ ಗುರಾಣಿಯಾಗಿವೆ ಎಂದು ಜೈರಾಂ ರಮೇಶ್ ಶುಕ್ರವಾರ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಬೆಟ್ಟಿಂಗ್ ಆ್ಯಪ್ ಪ್ರವರ್ತಕರಿಂದ 508 ಕೋಟಿ ಪಡೆದ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್: ಇ.ಡಿ ಗಂಭೀರ ಆರೋಪ
ಮತ್ತೋರ್ವ ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್, ಬಘೇಲ್ ಅವರ ವರ್ಚಸ್ಸನ್ನು ಹಾಳು ಮಾಡಲು ಷಡ್ಯಂತ್ರ ಹೂಡಿರುವುದು ಸ್ಪಷ್ಟ. ಜನರು ಬಿಜೆಪಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದ್ದಾರೆ.
ತಮ್ಮ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಘೇಲ್, ಇದಕ್ಕಿಂತ ದೊಡ್ಡ ಹಾಸ್ಯ ಇನ್ನೊಂದಿಲ್ಲ. ಮುಂಬರುವ ಛತ್ತೀಸ್‌ಗಢ ಚುನಾವಣೆಯಲ್ಲಿ ಬಿಜೆಪಿ ತನ್ನ ‘ಏಜೆನ್ಸಿ’ಗಳ ಸಹಾಯದಿಂದ ಸ್ಪರ್ಧಿಸಲು ಬಯಸಿದೆ ಎಂದು ಟೀಕಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ