Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತ ಪಡಿತರ ಯೋಜನೆ 5 ವರ್ಷ ವಿಸ್ತರಣೆ: ಛತ್ತೀಸ್​​ಗಢದಲ್ಲಿ ಪ್ರಧಾನಿ ಮೋದಿ ಘೋಷಣೆ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು 2020 ರಲ್ಲಿ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಕೇಂದ್ರ ಸರ್ಕಾರ ಆರಂಭಿಸಿತ್ತು. ಈ ಯೋಜನೆ ಅಡಿಯಲ್ಲಿ ಸರ್ಕಾರವು ಬಡವರಿಗೆ 5 ಕೆಜಿ ಆಹಾರ ಧಾನ್ಯವನ್ನು ಉಚಿತವಾಗಿ ಪೂರೈಸುತ್ತಿದೆ. ದೇಶದ 80 ಕೋಟಿ ಬಡವರಿಗೆ ಉಚಿತ ಪಡಿತರವನ್ನು ಒದಗಿಸುವ ಯೋಜನೆ ಇದಾಗಿದೆ.

ಉಚಿತ ಪಡಿತರ ಯೋಜನೆ 5 ವರ್ಷ ವಿಸ್ತರಣೆ: ಛತ್ತೀಸ್​​ಗಢದಲ್ಲಿ ಪ್ರಧಾನಿ ಮೋದಿ ಘೋಷಣೆ
ಪ್ರಧಾನಿ ನರೇಂದ್ರ ಮೋದಿ
Follow us
Ganapathi Sharma
|

Updated on: Nov 04, 2023 | 2:42 PM

ನವದೆಹಲಿ, ನವೆಂಬರ್ 4: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅಡಿ ಬಡವರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಉಚಿತ ಪಡಿತರ ಯೋಜನೆಯನ್ನು ಇನ್ನೂ 5 ವರ್ಷಗಳ ಕಾಲ ಮುಂದುವರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಘೋಷಣೆ ಮಾಡಿದರು. 80 ಕೋಟಿಗೂ ಹೆಚ್ಚು ಜನರು ಸದ್ಯ ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಛತ್ತೀಸ್‌ಗಢದ (Chhattisgarh) ದುರ್ಗ್‌ನಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಬಿಜೆಪಿ ಸರ್ಕಾರವು ಮುಂದಿನ 5 ವರ್ಷಗಳವರೆಗೆ ದೇಶದ 80 ಕೋಟಿ ಬಡವರಿಗೆ ಉಚಿತ ಪಡಿತರವನ್ನು ಒದಗಿಸುವ ಯೋಜನೆಯನ್ನು ವಿಸ್ತರಿಸಲಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದವು ಯಾವಾಗಲೂ ಪವಿತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ನನಗೆ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ಕಾಂಗ್ರೆಸ್ ಎಂದಿಗೂ ಬಡವರನ್ನು ವಂಚಿಸಿದ್ದು ಬಿಟ್ಟರೆ ಅವರಿಗೆ ಏನನ್ನೂ ನೀಡಿಲ್ಲ. ಕಾಂಗ್ರೆಸ್ ಎಂದಿಗೂ ಬಡವರನ್ನು ಗೌರವಿಸುವುದಿಲ್ಲ. ಬಡವರ ನೋವು, ಸಂಕಟ ಕಾಂಗ್ರೆಸ್​​ನವರಿಗೆ ಅರ್ಥವಾಗಲೇ ಇಲ್ಲ. ಹಾಗಾಗಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇರುವವರೆಗೂ ಬಡವರ ಹಕ್ಕನ್ನು ಲೂಟಿ ಮಾಡಿ ತಿಂದು ನಾಯಕರ ಬೊಕ್ಕಸಕ್ಕೆ ತುಂಬುತ್ತಲೇ ಇತ್ತು. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ನಮ್ಮ ಬಡ ಸಹೋದರ ಸಹೋದರಿಯರಲ್ಲಿ ಅವರ ಬಡತನವನ್ನು ತೊಡೆದುಹಾಕಬಹುದು ಎಂಬ ವಿಶ್ವಾಸವನ್ನು ಮೂಡಿಸಲಾಯಿತು ಎಂದು ಮೋದಿ ಹೇಳಿದರು.

ನಮ್ಮ ಸೇವೆಯ ಕೇವಲ 5 ವರ್ಷಗಳಲ್ಲಿ 13.5 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಮೋದಿ ಹೇಳಿದರು. ಬಡತನದಿಂದ ಹೊರಬಂದವರು ಇಂದು ಮೋದಿಗೆ ಲಕ್ಷಾಂತರ ಆಶೀರ್ವಾದ ನೀಡುತ್ತಿದ್ದಾರೆ. ಪ್ರತಿಯೊಬ್ಬ ಬಡವನೂ ತನ್ನ ಬಡತನವನ್ನು ಕೊನೆಗಾಣಿಸುವ ದೊಡ್ಡ ಸೈನಿಕನಾಗುವ ಮೂಲಕ ಮೋದಿಯ ಒಡನಾಡಿಯಾಗುವಂತೆ ನಾವು ನೀತಿಗಳನ್ನು ರೂಪಿಸಿದ್ದೇವೆ. ಬಿಜೆಪಿ ಸರ್ಕಾರ ಅತ್ಯಂತ ತಾಳ್ಮೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದೆ. ಮೋದಿಯವರಿಗೆ ದೇಶದ ಅತಿ ದೊಡ್ಡ ಜಾತಿ ಎಂದರೆ ಒಂದೇ, ಅದು ಬಡವರು. ಮೋದಿ ಅವರ ಸೇವಕ, ಸಹೋದರ, ಬಡ ಮಗ ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ: ಛತ್ತೀಸ್​ಗಢದ ಪುಟ್ಟ ಬಾಲಕಿಯ ಅಭಿಮಾನಕ್ಕೆ ನಮೋ: ಪತ್ರ ಬರೆದು ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ

ಇಲ್ಲಿ ಅನೇಕ ಸ್ನೇಹಿತರು ಕೆಲಸಕ್ಕಾಗಿ ಹೊರಗೆ ಹೋಗುತ್ತಾರೆ. ಅದಕ್ಕಾಗಿ ಬಿಜೆಪಿ ಸರ್ಕಾರವು ದೇಶದ ಯಾವುದೇ ಭಾಗಕ್ಕೆ ಹೋದರೂ ನಿಮಗೆ ಉಚಿತ ರೇಷನ್ ಸಿಗುವಂತೆ ಮಾಡಿದೆ ಎಂದು ಪ್ರಧಾನಿ ಹೇಳಿದರು. ಅದಕ್ಕಾಗಿಯೇ ನಿಮಗೆ ಒನ್ ನೇಷನ್-ಒನ್ ರೇಷನ್ ಕಾರ್ಡ್ ಸೌಲಭ್ಯ ನೀಡಲಾಗಿದೆ ಎಂದು ಮೋದಿ ಹೇಳಿದರು.

ಏನಿದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ?

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು 2020 ರಲ್ಲಿ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಕೇಂದ್ರ ಸರ್ಕಾರ ಆರಂಭಿಸಿತ್ತು. ಈ ಯೋಜನೆ ಅಡಿಯಲ್ಲಿ ಸರ್ಕಾರವು ಬಡವರಿಗೆ 5 ಕೆಜಿ ಆಹಾರ ಧಾನ್ಯವನ್ನು ಉಚಿತವಾಗಿ ಪೂರೈಸುತ್ತಿದೆ. ಇದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ ಉಲ್ಲೇಖಿಸಲಾದ ಆಹಾರ ಧಾನ್ಯಗಳ ವಿತರಣೆಯ ನಿಯಮಿತ ಕೋಟಾಕ್ಕಿಂತ ಹೆಚ್ಚುವರಿಯಾಗಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ