ಚತ್ತೀಸ್ಗಢ್ (Chhattisgarh )ನ ಸುರ್ಗಜಾ ಜಿಲ್ಲೆಯಲ್ಲಿ ಇತ್ತೀಚೆಗೆ ಸರ್ಕಾರದಿಂದಲೇ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಶಿಬಿರದಲ್ಲಿ ವೈದ್ಯರೊಬ್ಬರು 7 ತಾಸುಗಳಲ್ಲಿ, ಬರೋಬ್ಬರಿ 101 ಮಹಿಳೆಯರಿಗೆ ಸಂತಾನಶಕ್ತಿ ಹರಣ (Sterilisation Camp) ಆಪರೇಶನ್ (ಟ್ಯೂಬೆಕ್ಟಮಿ) ಮಾಡಿ ಸುದ್ದಿಯಾಗಿದ್ದರು. ಆದರೆ ಈ ವೈದ್ಯನಿಗೆ ಈಗ ಸಣ್ಣ ಸಂಕಷ್ಟ ಎದುರಾಗಿದೆ. ಅಲ್ಪ ಸಮಯದಲ್ಲಿ 101 ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾ ಎಂಬ ಅನುಮಾನದಡಿ, ಸರ್ಕಾರ ಅವರ ವಿರುದ್ಧ ತನಿಖೆಗೆ ಆದೇಶಿಸಿದೆ.
ಈ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸಾ ಶಿಬಿರ ನಡೆದದ್ದು ಆಗಸ್ಟ್ 27ರಂದು ನರ್ಮದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ. ಈ ಆರೋಗ್ಯ ಕೇಂದ್ರ ರಾಯ್ಪುರದಿಂದ 300 ಕಿಮೀ ದೂರದಲ್ಲಿದೆ. ಅಂದಿನ ಶಿಬಿರದಲ್ಲಿ ಹಲವು ಅಕ್ರಮಗಳು ನಡೆದ ಬಗ್ಗೆ ಸ್ಥಳೀಯ ಪತ್ರಿಕೆಗಳು ವರದಿ ಮಾಡಿದ್ದವು. ಹಾಗೇ, 101 ಮಹಿಳೆಯರಿಗೆ ಬರೀ ಏಳು ತಾಸುಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವೇ ಎಂಬ ಬಗ್ಗೆಯೂ ಧ್ವನಿ ಎತ್ತಿದ್ದವು. ನಂತರ ಆರೋಗ್ಯ ಇಲಾಖೆ ಕ್ರಮಕ್ಕೆ ಮುಂದಾಗಿದ್ದಲ್ಲದೆ, ಸರ್ಜನ್ ಮತ್ತು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಶೋಕಾಸ್ ನೋಟಿಸ್ ನೀಡಿತ್ತು.
ಸರ್ಕಾರವೇ ಆಯೋಜಿಸಿದ್ದ ಈ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಭಾಗವಹಿಸಿ ಸರ್ಜರಿಗೆ ಒಳಗಾದ ಎಲ್ಲ ಮಹಿಳೆಯರೂ ಆರೋಗ್ಯವಾಗಿಯೇ ಇದ್ದಾರೆ. ಆದರೆ ಸರ್ಕಾರದ ಮಾರ್ಗಸೂಚಿ ಅನ್ವಯ ಒಬ್ಬ ಸರ್ಜನ್ ಒಂದು ದಿನಕ್ಕೆ ಗರಿಷ್ಠ 30 ಮಹಿಳೆಯರಿಗೆ ಮಾತ್ರ ಈ ಆಪರೇಶನ್ ಮಾಡಬೇಕು. ಆದರೆ ಮಾರ್ಗಸೂಚಿಯನ್ನು ಉಲ್ಲಂಘಿಸಿ ಬರೋಬ್ಬರಿ 101 ಮಹಿಳೆಯರಿಗೆ ಆಪರೇಶನ್ ಮಾಡಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸುವ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಲೋಕ್ ಶುಕ್ಲಾ ತಿಳಿಸಿದ್ದಾರೆ.
ಆಗಸ್ಟ್ 27ರಂದು ಮಧ್ಯಾಹ್ನ 12 ರಿಂದ 7 ಗಂಟೆ ಅವಧಿಯಲ್ಲಿ ಈ ಶಸ್ತ್ರಚಿಕಿತ್ಸೆಗಳು ನಡೆದಿದ್ದವು. ಅಂದು ಸರ್ಜರಿ ಮಾಡಿದ್ದ ವೈದ್ಯ ಸ್ಪಷ್ಟನೆ ನೀಡಿದ್ದು, ಅವತ್ತು ಶಿಬಿರಕ್ಕೆ ನೂರಾರು ಮಹಿಳೆಯರು ಬಂದಿದ್ದರು. ಹಲವು ದುರ್ಗಮ, ದೂರದ ಹಳ್ಳಿಗಳಿಂದ ಬಂದಿದ್ದ ಅವರನ್ನು ಹಾಗೇ ವಾಪಸ್ ಕಳಿಸುವುದು ಸರಿಯಲ್ಲ. ಯಾಕೆಂದರೆ ಅವರು ಪದೇಪದೆ ಬರಲು ಸಾಧ್ಯವಿಲ್ಲ ಎನ್ನಿಸಿ, ಆಪರೇಶನ್ ಮಾಡಿ ಕಳಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Rajinikanth: ‘ಕಷ್ಟದಲ್ಲಿದ್ದೇವೆ, ರಜನಿಕಾಂತ್ ಒಬ್ಬರೇ ದಿಕ್ಕು’; ರಜನಿ ಸಂಬಂಧಿಯೆಂದು ಹೇಳಿಕೊಂಡಿರುವ ಚೇತನ್ ಅಳಲು
(Chhattisgarh government has ordered a probe against surgeon Who performed tubectomies on 101 women)