ಮತ್ತೆ ಟಿಎಂಸಿ ಸೇರ್ಪಡೆಯಾದ ಮತ್ತೊಬ್ಬ ಬಿಜೆಪಿ ಶಾಸಕ; ಕೇಸರಿ ಪಕ್ಷಕ್ಕೆ ಕೈಕೊಟ್ಟ ನಾಲ್ಕನೇ ಎಂಎಲ್ಎ ಇವರು !
ಮೊದಲು ಟಿಎಂಸಿಯಲ್ಲೇ ಇದ್ದ ಸೌಮೆನ್ ಬಿಜೆಪಿಗೆ ಸೇರ್ಪಡೆಯಾಗಿ ಈ ಬಾರಿ ಶಾಸಕರಾಗಿದ್ದರು. ಆದರೀಗ ತಮ್ಮ ಮಾತೃಪಕ್ಷಕ್ಕೆ ಮರಳಿ, ನನ್ನ ಆತ್ಮ ಮತ್ತು ಹೃದಯ ಟಿಎಂಸಿಯಲ್ಲೇ ಇದೆ ಎಂದಿದ್ದಾರೆ.
ಪಶ್ಚಿಮ ಬಂಗಾಳ (West Bengal)ದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ (West Bengal By-Polls) ಘೋಷಣೆಯಾದ ಬೆನ್ನಲ್ಲೇ ಬಿಜೆಪಿಯಿಂದ ತೃಣಮೂಲ ಕಾಂಗ್ರೆಸ್ (TMC)ಗೆ ಸೇರ್ಪಡೆಯಾಗುತ್ತಿರುವ ಶಾಸಕರ ಸಂಖ್ಯೆಯೂ ಹೆಚ್ಚುತ್ತಿದೆ. ಇದೀಗ ಕಾಲಿಯಾಗಂಜ್ ಬಿಜೆಪಿ ಶಾಸಕ ಸೌಮೆನ್ ರಾಯ್ (Soumen Roy) ಕೋಲ್ಕತ್ತದಲ್ಲಿ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಟಿಎಂಸಿ ಸಚಿವ ಪಾರ್ಥ ಚಟರ್ಜಿ ಉಪಸ್ಥಿತರಿದ್ದರು.
ಮೊದಲು ಟಿಎಂಸಿಯಲ್ಲೇ ಇದ್ದ ಸೌಮೆನ್ ಬಿಜೆಪಿಗೆ ಸೇರ್ಪಡೆಯಾಗಿ ಈ ಬಾರಿ ಶಾಸಕರಾಗಿದ್ದರು. ಆದರೀಗ ತಮ್ಮ ಮಾತೃಪಕ್ಷಕ್ಕೆ ಮರಳಿದ ಬಳಿಕ ಮಾತನಾಡಿದ ಅವರು, ಕೆಲವು ಕಾರಣಗಳಿಂದಾಗಿ ನಾನು ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಲಿಯಾಗಂಜ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದೆ. ಆದರೆ ನನ್ನ ಹೃದಯ ಮತ್ತು ಆತ್ಮ ಎರಡೂ ಟಿಎಂಸಿಯಲ್ಲೇ ಇದೆ. ನಾನು ಪಕ್ಷ ಬಿಟ್ಟು ಹೋಗಿದ್ದಕ್ಕೆ ಕ್ಷಮೆ ಕೇಳುತ್ತೇನೆ ಮತ್ತು ಮಮತಾ ಬ್ಯಾನರ್ಜಿಯವರಿಗೆ ಸದಾ ಬೆಂಬಲ ನೀಡುವ ಸಲುವಾಗಿ ಮರಳಿ ಬರುತ್ತಿದ್ದೇನೆ ಎಂದಿದ್ದಾರೆ.
ಕಳೆದ ವಾರ ಬಿಜೆಪಿ ಶಾಸಕರಾದ ತನ್ಮಯ್ ಘೋಷ್, ಬಿಸ್ವಜಿತ್ ದಾಸ್ ಟಿಎಂಸಿ ಸೇರ್ಪಡೆಯಾಗಿದ್ದಾರೆ. ಅದರಲ್ಲಿ ಘೋಷ್ ಬಿಷ್ಣುಪುರ ವಿಧಾನಸಭಾ ಕ್ಷೇತ್ರ ಮತ್ತು ಬಿಸ್ವಜಿತ್ ದಾಸ್, ಬಾಗ್ದಾ ಕ್ಷೇತ್ರದ ಶಾಸಕರಾಗಿದ್ದರು. ಇವರೆಲ್ಲರಿಗಿಂತ ಮೊದಲು ಬಿಜೆಪಿ ತೊರೆದು ಟಿಎಂಸಿಗೆ ಹೋಗಿದ್ದು, ಕೃಷ್ಣನಗರ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆದ್ದಿದ್ದ ಮುಕುಲ್ ರಾಯ್. ಅಲ್ಲಿಂದ ಈ ಮತಾಂತರ ಪರ್ವ ಶುರುವಾಗಿದ್ದು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ನಂತರ ಇದುವರೆಗೆ ಒಟ್ಟು ನಾಲ್ವರು ಶಾಸಕರನ್ನು ಬಿಜೆಪಿ ಕಳೆದುಕೊಂಡಂತಾಗಿದೆ. ಅವರೆಲ್ಲರೂ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ. ಇವರಲ್ಲಿ ಮುಕುಲ್ ರಾಯ್ ಅಕ್ಷರಶಃ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ. ಮೊದಲು ಟಿಎಂಸಿಯಲ್ಲಿ ಇದ್ದ ಮುಕುಲ್ ರಾಯ್ ನಂತರ ಬಿಜೆಪಿಗೆ ಸೇರ್ಪಡೆಯಾಗಿ ಶಾಸಕರಾಗಿದ್ದರು. ನಂತರ ಮತ್ತೆ ಟಿಎಂಸಿಗೇ ಹೋಗಿದ್ದಾರೆ.
ಸೆಪ್ಟೆಂಬರ್ 30ಕ್ಕೆ ಉಪಚುನಾವಣೆ ಇನ್ನು ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್ 30ರಂದು ಉಪಚುನಾವಣೆ ಘೋಷಿಸಿದೆ. ಭವಾನಿಪುರ, ಸಂಸೆರ್ಗಂಜ್ ಮತ್ತು ಜಾಂಗಿಪುರ್ ಕ್ಷೇತ್ರಗಳಲ್ಲಿ ಅಂದು ಮತದಾನ ನಡೆಯಲಿದ್ದು, ಫಲಿತಾಂಶ ಅಕ್ಟೋಬರ್ 30ರಂದು ಪ್ರಕಟಗೊಳ್ಳಲಿದೆ. ಅದರಲ್ಲಿ ಭವಾನಿಪುರದಲ್ಲಿ ಟಿಎಂಸಿಯಿಂದ ಮಮತಾ ಬ್ಯಾನರ್ಜಿಯವರೇ ಸ್ಪರ್ಧಿಸಲಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸೋತಿರುವ ಕಾರಣ, ಭವಾನಿಪುರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಇದನ್ನೂ ಓದಿ: Crime News: ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಡ್ರಗ್ಸ್ ಮಾರಿ ಸಂಪಾದಿಸಿದ್ದ ಹಣ ಮುಟ್ಟುಗೋಲು
ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ; ಕಾರ್ಯಕರ್ತರ ಜೊತೆ ಸಭೆ, ಪ್ರತಿಭಟನೆ ನಡೆಸುತ್ತೇವೆ: ಡಿ ಕೆ ಶಿವಕುಮಾರ್