ಭುವನೇಶ್ವರ್: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನ 108 ಌಂಬುಲೆನ್ಸ್ ಸಿಬ್ಬಂದಿ ತ್ವರಿತವಾಗಿ ಆಸ್ಪತ್ರೆಗೆ ತಲುಪಿಸದೆ ಕೊನೆಗೆ ಅದು ಸಾವನ್ನಪ್ಪಿದ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ಬೆಳಿಕಿಗೆ ಬಂದಿದೆ.
ನಿರಂಜನ್ ಬೆಹೆರಾ ಹಾಗೂ ಗೀತಾ ದಂಪತಿಯ ಒಂದು ವರ್ಷದ ಮಗ ಕಳೆದ ಭಾನುವಾರ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಬರಿಪಾದ ಪಟ್ಟಣದ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಅವನನ್ನ ಕಟಕ್ ನಗರದ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ಸೂಚಿಸಿದರು. ಅಲ್ಲಿಂದಲೇ ನೋಡಿ ದಂಪತಿಯ ಪರದಾಟ ಶುರುವಾಗಿದ್ದು.
ಮಗುವನ್ನ ಕರೆದೊಯ್ಯಲು ಬಂದ 108 ಌಂಬುಲೆನ್ಸ್ನ ಸಿಬ್ಬಂದಿಗೆ ದಾರಿ ಮಧ್ಯೆ ಹಸಿವಾಗಿ ಊಟದ ವಿರಾಮ ತೆಗೆದುಕೊಳ್ಳೋಕೆ ಮುಂದಾದರಂತೆ. ಅಲ್ಲೇ ಇದ್ದ ಢಾಬಾದಲ್ಲಿ ಊಟ ಮುಗಿಸಿ ಆದಷ್ಟು ಬೇಗ ವಾಪಸ್ ಬರ್ತಿವಿ ಅಂತಾ ಹೋದವರು ಒಂದು ಗಂಟೆ ಕಳೆದರು ಮರಳಲೇ ಇಲ್ಲ. ಚಿಂತೆಗೆ ಒಳಗಾದ ನಿರಂಜನ್ ಸಿಬ್ಬಂದಿಯನ್ನ ಎಷ್ಟೇ ಬೇಡಿಕೊಂಡರೂ ಡೋಂಟ್ ಕೇರ್ ಅಂದಿದ್ದಾರೆ.
‘ಮಗು ಕೇವಲ 10 ನಿಮಿಷ ಮುಂಚೆ ಆಸ್ಪತ್ರೆ ತಲುಪಿದ್ದರೆ..’
ಅಂತೂ ತಿಂದು ತೇಗುತ್ತಾ ಹಿಂದಿರುಗಿದ ಸಿಬ್ಬಂದಿ ಪ್ರಯಾಣ ಮುಂದುವರೆಸಿದರು. ಮಗುವನ್ನ ಆಸ್ಪತ್ರೆಗೂ ಸಹ ತಲುಪಿಸಿದರು. ಆದರೆ, ಕಂದಮ್ಮನ ಬಾಳ ಪಯಣ ಮುಂಚೆಯೇ ಕೊನೆಗೊಂಡಿತ್ತು. ತೀವ್ರ ಅನಾರೋಗ್ಯ ಉಂಟಾದ ಮಗು ಆಸ್ಪತ್ರೆ ತಲುಪುವ ಮುನ್ನ ಮಾರ್ಗ ಮಧ್ಯೆಯೇ ಅಸುನೀಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಅವರ ಪ್ರಕಾರ ಮಗು ಕೇವಲ ಹತ್ತು ನಿಮಿಷಗಳ ಮುಂಚೆ ಆಸ್ಪತ್ರೆ ತಲುಪಿದ್ದರೆ ಅದರ ಜೀವ ಉಳಿಸಬಹುದಿತ್ತಂತೆ.
ಇನ್ನು ಮಗನ ಸಾವಿನ ಶಾಕ್ನಲ್ಲಿ ಕೆರಳಿದ ನಿರಂಜನ್ ಮತ್ತು ಆತನ ಸಂಬಂಧಿಕರು 108 ಌಂಬುಲೆನ್ಸ್ನ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಜೊತೆಗೆ, ಇಬ್ಬರ ವಿರುದ್ಧ ದೂರು ಸಹ ದಾಖಲಿಸಿದ್ದಾರೆ. ಆದರೆ, 108 ಌಂಬುಲೆನ್ಸ್ ನಿರ್ವಹಣಾ ಸಂಸ್ಥೆಯ ಪ್ರಕಾರ ಸಿಬ್ಬಂದಿ ಊಟ ಮಾಡಲು ಕೇವಲ 20 ನಿಮಿಷ ಮಾತ್ರ ತೆಗೆದುಕೊಂಡಿದ್ದರಂತೆ.