AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ-ಜಿನ್‌ಪಿಂಗ್ ಭೇಟಿಗೂ ಮುನ್ನ ಮಹತ್ವದ ಬೆಳವಣಿಗೆ: 6 ವರ್ಷಗಳ ಬಳಿಕ ಗುವಾಂಗ್‌ಝೌ-ನವದೆಹಲಿ ನೇರ ವಿಮಾನ ಸೇವೆ ಪುನರಾರಂಭ ಘೋಷಣೆ

ಆರು ವರ್ಷಗಳ ಬಳಿಕ ಚೀನಾ ಸದರ್ನ್ ಏರ್‌ಲೈನ್ಸ್ ಗುವಾಂಗ್‌ಝೌ-ನವದೆಹಲಿ ನೇರ ವಿಮಾನ ಸೇವೆಯನ್ನು ಸೆಪ್ಟೆಂಬರ್ 21ರಿಂದ ಪುನರಾರಂಭಿಸಲಿದೆ. ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಹಾಗೂ ಪ್ರಧಾನಿ ಮೋದಿ ಭೇಟಿಯ ಮುನ್ನ ನಡೆದ ಈ ಬೆಳವಣಿಗೆ ಭಾರತ-ಚೀನಾ ಸಂಪರ್ಕ ಸುಧಾರಣೆಯ ಸೂಚನೆ ಎಂದೇ ಬಣ್ಣಿಸಲಾಗುತ್ತಿದೆ.

ಮೋದಿ-ಜಿನ್‌ಪಿಂಗ್ ಭೇಟಿಗೂ ಮುನ್ನ ಮಹತ್ವದ ಬೆಳವಣಿಗೆ: 6 ವರ್ಷಗಳ ಬಳಿಕ ಗುವಾಂಗ್‌ಝೌ-ನವದೆಹಲಿ ನೇರ ವಿಮಾನ ಸೇವೆ ಪುನರಾರಂಭ ಘೋಷಣೆ
ಚೀನಾ ಸದರ್ನ್ ಏರ್‌ಲೈನ್ಸ್ ವಿಮಾನ (ಸಂಗ್ರಹ ಚಿತ್ರ: ರಾಯಿಟರ್ಸ್)Image Credit source: Reuters
ಗಣಪತಿ ಶರ್ಮಾ
|

Updated on: Sep 12, 2026 | 11:30 AM

Share

ಮುಖ್ಯಾಂಶಗಳು

  • ಆರು ವರ್ಷಗಳ ಬಳಿಕ ಚೀನಾದಿಂದ ಭಾರತಕ್ಕೆ ನೇರ ವಿಮಾನ ಸೇವೆ
  • ಸೆಪ್ಟೆಂಬರ್ 21ರಿಂದ ಪ್ರತಿದಿನ ವಿಮಾನ ಸಂಚಾರ
  • ಜಿನ್​ಪಿಂಗ್-ಮೋದಿ ಭೇಟಿಗೂ ಮುನ್ನ ಮಹತ್ವದ ಬೆಳವಣಿಗೆ

ನವದೆಹಲಿ, ಸೆಪ್ಟೆಂಬರ್ 12: ಚೀನಾದ ಗುವಾಂಗ್‌ಝೌ ಮತ್ತು ನವದೆಹಲಿ ನಡುವಿನ ನೇರ ವಿಮಾನ ಸಂಪರ್ಕ ಮತ್ತೆ ಆರಂಭಗೊಳ್ಳುತ್ತಿದೆ. ಚೀನಾದ ಪ್ರಮುಖ ವಿಮಾನಯಾನ ಸಂಸ್ಥೆ ಚೀನಾ ಸದರ್ನ್ ಏರ್‌ಲೈನ್ಸ್, ಸುಮಾರು ಆರು ವರ್ಷಗಳ ಬಳಿಕ ಗುವಾಂಗ್‌ಝೌ-ನವದೆಹಲಿ ನೇರ ವಿಮಾನ ಸೇವೆಯನ್ನು ಪುನರಾರಂಭಿಸಲು ಮುಂದಾಗಿದೆ. ಸೆಪ್ಟೆಂಬರ್ 21ರಿಂದ ಈ ಸೇವೆ ಆರಂಭವಾಗಲಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ. ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ಇದೇ ವೇಳೆ ಇಂದು (ಶನಿವಾರ) ಸಂಜೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಿನ್‌ಪಿಂಗ್ ನಡುವೆ ದ್ವಿಪಕ್ಷೀಯ ಸಭೆ ನಡೆಯುವ ನಿರೀಕ್ಷೆಯಿದೆ.

ಗುವಾಂಗ್‌ಝೌ-ನವದೆಹಲಿ ಮಧ್ಯೆ ಪ್ರತಿದಿನ ಒಂದು ನೇರ ವಿಮಾನ

ಚೀನಾ ಸದರ್ನ್ ಏರ್‌ಲೈನ್ಸ್ ಗುವಾಂಗ್‌ಝೌ ಬೈಯುನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿದಿನ ಒಂದು ನೇರ ವಿಮಾನವನ್ನು ನಿರ್ವಹಿಸಲಿದೆ. ಬೋಯಿಂಗ್ 737 ಸರಣಿಯ ವಿಮಾನಗಳನ್ನು ಈ ಮಾರ್ಗದಲ್ಲಿ ಬಳಸಲಾಗುತ್ತದೆ.

ಗುವಾಂಗ್‌ಝೌ-ನವದೆಹಲಿ ವಿಮಾನದ ವೇಳಾಪಟ್ಟಿ

CZ359 ವಿಮಾನ ಗುವಾಂಗ್‌ಝೌನಿಂದ ಮಧ್ಯಾಹ್ನ 3.35ಕ್ಕೆ ಹೊರಟು, ಸಂಜೆ 7 ಗಂಟೆಗೆ ನವದೆಹಲಿಗೆ ತಲುಪಲಿದೆ. CZ360 ವಿಮಾನ ನವದೆಹಲಿಯಿಂದ ರಾತ್ರಿ 8.20ಕ್ಕೆ ಹೊರಟು, ಮರುದಿನ ಬೆಳಗಿನ ಜಾವ 4.15ಕ್ಕೆ ಗುವಾಂಗ್‌ಝೌ ತಲುಪಲಿದೆ.

ಈ ಸೇವೆಯಿಂದ ಪ್ರವಾಸಿಗರು, ವಿದ್ಯಾರ್ಥಿಗಳು, ಉದ್ಯಮಿಗಳು ಹಾಗೂ ವೃತ್ತಿಪರರಿಗೆ ಎರಡೂ ದೇಶಗಳ ನಡುವೆ ಪ್ರಯಾಣ ಸುಲಭವಾಗಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಜೊತೆಗೆ ಭಾರತ-ಚೀನಾ ವ್ಯಾಪಾರ ಸಂಬಂಧಗಳಿಗೂ ಇದು ನೆರವಾಗಲಿದೆ ಎಂದು ವರದಿಯಾಗಿದೆ. ಚೀನಾ ಸದರ್ನ್ ಏರ್‌ಲೈನ್ಸ್ ಭಾರತಕ್ಕೆ ನೇರ ವಿಮಾನ ಸೇವೆ ಪುನರಾರಂಭಿಸುತ್ತಿರುವ ಮೂರನೇ ಪ್ರಮುಖ ಚೀನೀ ವಿಮಾನಯಾನ ಸಂಸ್ಥೆಯಾಗಿದೆ.

ಚೀನಾ – ಭಾರತ ನಡುವಣ ವಿಮಾನ ಸಂಚಾರ ವಿವರ

ಏರ್ ಚೀನಾ ಏಪ್ರಿಲ್‌ನಲ್ಲಿ ಬೀಜಿಂಗ್-ನವದೆಹಲಿ ವಿಮಾನ ಸೇವೆಯನ್ನು ಪುನರಾರಂಭಿಸಿತ್ತು. ಈ ಮಾರ್ಗದಲ್ಲಿ ಪ್ರಸ್ತುತ ವಾರಕ್ಕೆ ಮೂರು ವಿಮಾನಗಳು ಸಂಚರಿಸುತ್ತಿವೆ. ಚೀನಾ ಈಸ್ಟರ್ನ್ ಏರ್‌ಲೈನ್ಸ್ ಏಪ್ರಿಲ್ 18ರಂದು ಕುನ್ಮಿಂಗ್-ಕೊಲ್ಕತ್ತಾ ವಿಮಾನ ಸೇವೆಯನ್ನು ಪುನರಾರಂಭಿಸಿತ್ತು. ಈ ಸಂಸ್ಥೆ 2025ರ ನವೆಂಬರ್‌ನಲ್ಲಿ ಶಾಂಘೈ-ನವದೆಹಲಿ ನೇರ ವಿಮಾನ ಸೇವೆಯನ್ನೂ ಮತ್ತೆ ಆರಂಭಿಸಿತ್ತು.

ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಭಾರತ ಮತ್ತು ಚೀನಾ ನಡುವಿನ ನೇರ ವಿಮಾನ ಸಂಪರ್ಕಕ್ಕೆ ಅಡ್ಡಿಯುಂಟಾಗಿತ್ತು. ಇದೀಗ ಎರಡೂ ದೇಶಗಳ ನಡುವಿನ ಸಂಬಂಧಗಳು ನಿಧಾನವಾಗಿ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ವಿಮಾನ ಸೇವೆಗಳು ಹಂತ ಹಂತವಾಗಿ ಪುನರಾರಂಭವಾಗುತ್ತಿವೆ.

ಭಾರತೀಯ ವಿಮಾನಯಾನ ಸಂಸ್ಥೆಗಳ ಸೇವೆಯೂ ವಿಸ್ತರಣೆ

ಚೀನಾದ ವಿಮಾನಯಾನ ಸಂಸ್ಥೆಗಳ ಜೊತೆಗೆ ಭಾರತೀಯ ವಿಮಾನಯಾನ ಸಂಸ್ಥೆಗಳೂ ಚೀನಾಕ್ಕೆ ತಮ್ಮ ಸೇವೆಗಳನ್ನು ವಿಸ್ತರಿಸುತ್ತಿವೆ. ಏರ್ ಇಂಡಿಯಾ ಫೆಬ್ರವರಿಯಲ್ಲಿ ನವದೆಹಲಿ-ಚೀನಾ ವಿಮಾನ ಸೇವೆಯನ್ನು ಪುನರಾರಂಭಿಸಿತ್ತು. ಈ ತಿಂಗಳು ದೆಹಲಿ-ಶಾಂಘೈ ಮಾರ್ಗದಲ್ಲೂ ವಾರಕ್ಕೆ ಐದು ವಿಮಾನಗಳ ಸೇವೆ ಆರಂಭಿಸಲು ಸಿದ್ಧತೆ ನಡೆಸಿದೆ.

ಇಂಡಿಗೋ ಸಂಸ್ಥೆ ಮಾರ್ಚ್‌ನಲ್ಲಿ ಕೊಲ್ಕತ್ತಾ-ಶಾಂಘೈ ನಡುವೆ ಪ್ರತಿದಿನದ ನೇರ ವಿಮಾನ ಸೇವೆ ಆರಂಭಿಸಿತ್ತು. ಇದಕ್ಕೂ ಮೊದಲು ಕೊಲ್ಕತ್ತಾ-ಗುವಾಂಗ್‌ಝೌ ಸೇವೆಯನ್ನು ಪುನರಾರಂಭಿಸಿ, ದೆಹಲಿ-ಗುವಾಂಗ್‌ಝೌ ಮಾರ್ಗದಲ್ಲೂ ವಿಮಾನಗಳನ್ನು ಆರಂಭಿಸಿತ್ತು.

ಭಾರತ-ಚೀನಾ ಸಂಬಂಧ ಸುಧಾರಣೆಯ ಸೂಚನೆ

2020ರಲ್ಲಿ ಪೂರ್ವ ಲಡಾಖ್‌ನಲ್ಲಿ ನಡೆದ ಗಡಿ ಸಂಘರ್ಷದ ಬಳಿಕ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದ್ದವು. ಇದರ ಪರಿಣಾಮವಾಗಿ ಪ್ರಯಾಣ, ವ್ಯಾಪಾರ, ಹೂಡಿಕೆ ಹಾಗೂ ಜನರ ನಡುವಿನ ಸಂಪರ್ಕಕ್ಕೂ ಹಲವು ನಿರ್ಬಂಧಗಳು ಎದುರಾಗಿದ್ದವು. ಇದೀಗ ಎರಡೂ ದೇಶಗಳು ಸಂಬಂಧಗಳನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ. ನೇರ ವಿಮಾನ ಸೇವೆಗಳ ಪುನರಾರಂಭವು ಪ್ರವಾಸೋದ್ಯಮ, ಶಿಕ್ಷಣ, ವ್ಯಾಪಾರ ಹಾಗೂ ವೃತ್ತಿಪರರ ಸಂಚಾರಕ್ಕೆ ಸಹಕಾರಿಯಾಗಲಿದೆ.

ಪ್ರಮುಖ ಚೀನೀ ವಿಮಾನಯಾನ ಸಂಸ್ಥೆಗಳು ಭಾರತಕ್ಕೆ ಸೇವೆಗಳನ್ನು ಪುನರಾರಂಭಿಸುತ್ತಿರುವುದು ದ್ವಿಪಕ್ಷೀಯ ಸಂಬಂಧಗಳಲ್ಲಿನ ಸುಧಾರಣೆಯ ಸೂಚನೆ ಎಂದು ಚೀನಾದ ಸಿಂಗ್ವಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾರ್ಯತಂತ್ರ ಸಂಸ್ಥೆಯ ಸಂಶೋಧನಾ ವಿಭಾಗದ ನಿರ್ದೇಶಕ ಕಿಯಾನ್ ಫೆಂಗ್ ಹೇಳಿದ್ದಾರೆ. ಭಾರತ ಮತ್ತು ಚೀನಾ ನಡುವಿನ ಜನರ ಸಂಪರ್ಕ ಹೆಚ್ಚಾದರೆ ಪರಸ್ಪರ ನಂಬಿಕೆ ವೃದ್ಧಿಯಾಗಬಹುದು. ಇದರಿಂದ ವ್ಯಾಪಾರ ಮತ್ತು ಇತರ ಕ್ಷೇತ್ರಗಳಲ್ಲಿ ಸಹಕಾರಕ್ಕೂ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಷಿ ಜಿನ್​ಪಿಂಗ್-ಮೋದಿ ಭೇಟಿಗೂ ಮುನ್ನ ಮಹತ್ವದ ಬೆಳವಣಿಗೆ

ಷಿ ಜಿನ್‌ಪಿಂಗ್ ಭಾರತ ಭೇಟಿ ಸುಮಾರು ಏಳು ವರ್ಷಗಳ ಬಳಿಕ ನಡೆಯುತ್ತಿದೆ. ಎರಡೂ ದೇಶಗಳು ಸಂಬಂಧಗಳನ್ನು ಸುಧಾರಿಸಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಇಂದು ನಡೆಯಲಿರುವ ಷಿ ಜಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ದ್ವಿಪಕ್ಷೀಯ ಸಭೆಯಲ್ಲಿ ಗಡಿ ವಿಚಾರ, ವ್ಯಾಪಾರ, ಹೂಡಿಕೆ, ವೀಸಾ ಸಮಸ್ಯೆಗಳು ಹಾಗೂ ಎರಡೂ ದೇಶಗಳ ನಡುವಿನ ಸಂಬಂಧಗಳ ಮುಂದಿನ ದಿಕ್ಕಿನ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ