ದೆಹಲಿ: ಅರುಣಾಚಲ ಪ್ರದೇಶದಿಂದ (Arunachal Pradesh) ಕಾಣೆಯಾದ ಹದಿಹರೆಯದ ಬಾಲಕನ ಬಿಡುಗಡೆಗೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಸಕಾರಾತ್ಮಕ ಸೂಚನೆಯನ್ನು ನೀಡಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು (Kiren Rijiju ) ಬುಧವಾರ ತಿಳಿಸಿದ್ದಾರೆ. ಅರುಣಾಚಲ ಪ್ರದೇಶದ ಮೇಲಿನ ಸಿಯಾಂಗ್ ಜಿಲ್ಲೆಯ ಜಿಡೋ ಗ್ರಾಮದವರಾದ ಮಿರಾಮ್ ಟ್ಯಾರೋನ್ ಎಂಬ ಹದಿಹರೆಯದ ಬಾಲಕ ಜನವರಿ 18 ರಂದು ವಾಸ್ತವಿಕ ನಿಯಂತ್ರಣ ರೇಖೆಯ ಬಳಿಯಿಂದ ನಾಪತ್ತೆಯಾಗಿದ್ದನು. ಬಾಲಕ ನಾಪತ್ತೆ ಆದ ನಂತರ, ಅರುಣಾಚಲ-ಪೂರ್ವದ ಬಿಜೆಪಿ ಸಂಸದ ತಪಿರ್ ಗಾವೊ ಅವರು ಟ್ಯಾರೋನ್,ಬಾಲಕನ್ನು ನ್ನು ಭಾರತದ ಕಡೆಯಿಂದ ಪಿಎಲ್‌ಎ ಅಪಹರಿಸಿದ್ದಾರೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದಾರೆ. ಭಾರತೀಯ ಸೇನೆಯು ತಕ್ಷಣವೇ ಚೀನಾದ ಕಡೆಯಿಂದ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ಹಿಂದಿರಿಸಲು ಸಹಾಯ ಕೇಳಿತು. ಚೀನಾದ ಪಿಎಲ್ಎ ತಮ್ಮ ಕಡೆಯವರು ಒಬ್ಬ ವ್ಯಕ್ತಿಯನ್ನು ಕಂಡುಕೊಂಡಿದ್ದಾರೆ ಎಂದು ನಂತರ ದೃಢಪಡಿಸಿದ್ದು, ಗುರುತನ್ನು ಸ್ಥಾಪಿಸಲು ಹೆಚ್ಚಿನ ವಿವರಗಳನ್ನು ಕೋರಿದರು. ಭಾರತೀಯ ಸೇನೆಯು ವೈಯಕ್ತಿಕ ವಿವರಗಳು ಮತ್ತು ಟ್ಯಾರೋನ್ ಅವರ ಛಾಯಾಚಿತ್ರವನ್ನು ಚೀನಾ ಜತೆ ಹಂಚಿಕೊಂಡಿದೆ.
Hotline exchanged on Republic Day by Indian Army with Chinese PLA. PLA responded positively indicating handing over of our national and suggested a place of release. They are likely to intimate date and time soon. Delay attributed to bad weather conditions on their side. https://t.co/CX7pu2jIRV
— Kiren Rijiju (@KirenRijiju) January 26, 2022
ನಾಪತ್ತೆಯಾದ ವ್ಯಕ್ತಿಯ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಂಡ ರಿಜಿಜು, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಉಭಯ ಕಡೆಯವರು ಹಾಟ್‌ಲೈನ್ ಅನ್ನು ವಿನಿಮಯ ಮಾಡಿಕೊಂಡರು ಮತ್ತು ಪಿಎಲ್‌ಎ ಅವರ ಬಿಡುಗಡೆಗೆ ಸ್ಥಳವನ್ನು ಸೂಚಿಸಿದೆ ಎಂದು ಹೇಳಿದರು. ಬಿಡುಗಡೆಯ ದಿನಾಂಕ ಮತ್ತು ಸಮಯವನ್ನು ಶೀಘ್ರದಲ್ಲೇ ಚೀನಾದ ಕಡೆಯಿಂದ ತಿಳಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
“ಗಣರಾಜ್ಯ ದಿನದಂದು ಭಾರತೀಯ ಸೇನೆಯು ಚೀನಾದ ಪಿಎಲ್ ಎಯೊಂದಿಗೆ ಹಾಟ್‌ಲೈನ್ ವಿನಿಮಯ ಮಾಡಿಕೊಂಡಿತು. ಪಿಎಲ್ಎ ಬಾಲಕನನ್ನು ಹಸ್ತಾಂತರಿಸುವುದರ ಬಗ್ಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಿತು ಮತ್ತು ಬಿಡುಗಡೆಯ ಸ್ಥಳವನ್ನು ಸೂಚಿಸಿತು. ಅವರು ಶೀಘ್ರದಲ್ಲೇ ದಿನಾಂಕ ಮತ್ತು ಸಮಯವನ್ನು ತಿಳಿಸುವ ಸಾಧ್ಯತೆಯಿದೆ. ಅವರ ಕಡೆಯ ಹವಾಮಾನ ವೈಪರೀತ್ಯದಿಂದಾಗಿ ವಿಳಂಬವಾಗಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಯಾರೀತ ಮಿರಾಮ್?
ಮಿರಾಮ್ ಟ್ಯಾರೋನ್ 17 ವರ್ಷದ ಹುಡುಗನಾಗಿದ್ದು ಅರುಣಾಚಲ ಪ್ರದೇಶದ ಮೇಲಿನ ಸಿಯಾಂಗ್ ಜಿಲ್ಲೆಯ ಜಿಡೋ ಗ್ರಾಮದವನಾಗಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಟ್ಯಾರೋನ್ ಮತ್ತು ಇನ್ನೂ ಕೆಲವರು ಭಾರತ-ಚೀನಾ ಗಡಿ ಭಾಗದ ಪ್ರದೇಶಗಳಲ್ಲಿ ಬೇಟೆಯಾಡುತ್ತಿದ್ದಾಗ ಟ್ಯಾರೋನ್ ನಾಪತ್ತೆಯಾಗಿದ್ದ. ಅವನ ಜತೆಗಿದ್ದವರೆಲ್ಲ ವಾಪಸ್ ಬಂದಿದ್ದರೂ ಟ್ಯಾರೋನ್ ಬಂದಿರಲಿಲ್ಲ. ಹೀಗಾಗಿ ಆತನನ್ನು ಚೀನಾ ಸೇನೆಯೇ ಅಪಹರಣ ಮಾಡಿದೆ ಎಂದು ಹೇಳಲಾಗಿತ್ತು. ಬಾಲಕ ನಾಪತ್ತೆಯಾದ ವಿಷಯ ಭಾರತೀಯ ಸೇನೆಗೆ ತಿಳಿಯುತ್ತಿದ್ದಂತೆ ಅದು ಚೀನಿ ಸೇನೆಯನ್ನು ಸಂಪರ್ಕಿಸಿ, ಈತನ ಬಗ್ಗೆ ವಿಚಾರಿಸಿತ್ತು. 2020ರ ಸೆಪ್ಟೆಂಬರ್ನಲ್ಲಿ ಕೂಡ ಇಂಥದ್ದೇ ಒಂದು ಘಟನೆ ನಡೆದಿತ್ತು. ಅರುಣಾಚಲ ಪ್ರದೇಶದ ಅಪ್ಪರ್ ಸುಬಾನ್ಸಿರಿ ಜಿಲ್ಲೆಯ ಐವರು ಯುವಕರನ್ನು ಚೀನಾ ಸೇನೆ ಅಪಹರಿಸಿತ್ತು. ಒಂದು ವಾರದ ಬಳಿಕ ಬಿಡುಗಡೆ ಮಾಡಿತ್ತು.
ಇದನ್ನೂ ಓದಿ: ನಾಪತ್ತೆಯಾಗಿರುವ ನಿಮ್ಮ ದೇಶದ ಹುಡುಗ ಇನ್ನೊಂದು ವಾರದಲ್ಲಿ ಮರಳಿ ಬರುತ್ತಾನೆ; ಭಾರತೀಯ ಸೇನೆಗೆ ಮಾಹಿತಿ ನೀಡಿದ ಚೀನಾ ಸೇನೆ