Video: ಗಣರಾಜ್ಯೋತ್ಸವ ಆಚರಣೆ ಮುಗಿಯುತ್ತಿದ್ದಂತೆ ವಿರಾಟ್ ನಿವೃತ್ತಿ, ಮೈ ಸವರಿ ಮುದ್ದಿಸಿ ಬೀಳ್ಕೊಟ್ಟ ಪ್ರಧಾನಿ ಮೋದಿ; ಯಾರು ಈ ವಿರಾಟ್?
ಜನವರಿ 15ರ ಸೇನಾ ದಿನ (Army Day)ದಂದು ಈ ಕುದುರೆಗೆ ಸೇನಾ ಮುಖ್ಯಸ್ಥರ ಶ್ಲಾಘನೆ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಈ ಪುರಸ್ಕಾರ ಪಡೆದ ಮೊದಲ ಕುದುರೆ ಎಂಬ ಹೆಗ್ಗಳಿಕೆ ವಿರಾಟ್ಗೆ ಸಲ್ಲುತ್ತದೆ.
73ನೇ ಗಣರಾಜ್ಯೋತ್ಸವದ ಕಾರ್ಯಕ್ರಮಗಳು ರಾಜಪಥ್ (Republic 2022) ನಲ್ಲಿ ಮುಕ್ತಾಯಗೊಂಡ ಬೆನ್ನಲ್ಲೇ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಗರಕ್ಷಕ ದಳದಲ್ಲಿದ್ದ ಕುದುರೆ ವಿರಾಟ್ (Virat Horse Retires) ಇಂದು ನಿವೃತ್ತಿ ಹೊಂದಿತು. ರಾಜಪಥ್ನಲ್ಲಿ ರಾಷ್ಟ್ರ ಧ್ವಜಾರೋಹಣ, ಪರೇಡ್ ಮುಕ್ತಾಯವಾದ ಬೆನ್ನಲ್ಲೇ ರಾಷ್ಟ್ರಪತಿ ರಾಮನಾಥ ಕೋವಿಂದ್ ರಾಷ್ಟ್ರಪತಿ ಭವನಕ್ಕೆ ತೆರಳಿದರು. ಅವರ ಬೆಂಗಾವಲು ಪಡೆಯಲ್ಲಿ ಒಂದಾದ ಈ ಅಂಗರಕ್ಷಕ ಕುದುರೆಯೂ ಅವರ ಹಿಂದೆ ಧಾವಿಸಿತು. ಅಲ್ಲಿಗೆ ತನ್ನ ಸೇವೆಯನ್ನು ಪೂರ್ಣಗೊಳಿಸಿ, ನಿವೃತ್ತಿಪಡೆದಿದೆ. ಪ್ರಧಾನಮಂತ್ರಿ ಮೋದಿ ಇಂದು ವಿರಾಟ್ ಕುದುರೆಯ ಮೈದಡವಿ, ಮುದ್ದಿಸಿ ಬೀಳ್ಕೊಡುಗೆ ನೀಡಿದರು. ರಾಜನಾಥ್ ಸಿಂಗ್ ಅವರೂ ಸಹ ಕುದುರೆಯ ಮುಖವನ್ನು ಪ್ರೀತಿಯಿಂದ ಸವರಿದ್ದಾರೆ. ಈ ವೇಳೆ ರಾಮನಾಥ ಕೋವಿಂದ್ ಪತ್ನಿ ಸವಿತಾ ಕೋವಿಂದ್, ಗೃಹ ಸಚಿವ ಅಮಿತ್ ಶಾ ಇತರರೂ ಇದ್ದು ಕುದುರೆಗೆ ಭಾವಪೂರ್ಣ ಬೀಳ್ಕೊಡುಗೆ ನೀಡಿದ್ದಾರೆ.
PM Shri @NarendraModi ji with horse ‘Virat’ at Rajpath today.
Virat participated successfully for 13th time in Republic Day celebrations despite his old age. pic.twitter.com/MYapyAIHiZ
— Bhupender Yadav (@byadavbjp) January 26, 2022
ಈ ವಿರಾಟ್ ಕುದುರೆ 2003ನೇ ಇಸ್ವಿಯಿಂದಲೂ ರಾಷ್ಟ್ರಪತಿ ಅಂಗರಕ್ಷಕ ದಳದಲ್ಲಿ ಇತ್ತು. ಜನವರಿ 15ರ ಸೇನಾ ದಿನ (Army Day)ದಂದು ಈ ಕುದುರೆಗೆ ಸೇನಾ ಮುಖ್ಯಸ್ಥರ ಶ್ಲಾಘನೆ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಈ ಪುರಸ್ಕಾರ ಪಡೆದ ಮೊದಲ ಕುದುರೆ ಎಂಬ ಹೆಗ್ಗಳಿಕೆ ವಿರಾಟ್ಗೆ ಸಲ್ಲುತ್ತದೆ. 2003ರಿಂದ ಇಲ್ಲಿಯವರೆಗೆ ವಿರಾಟ್ ಕುದುರೆ ಒಟ್ಟು 13 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದೆ. ಅಂದರೆ ಹಿಂದಿನ ರಾಷ್ಟ್ರಪತಿಗಳಿಂದ ಹಿಡಿದು ಇಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ವಿದ್ಯುಕ್ತ ಮೆರವಣಿಗೆಗಳಲ್ಲಿ ಅತ್ಯಂತ ಘನತೆಯಿಂದ ಪಾಲ್ಗೊಂಡಿತ್ತು. ಪರೇಡ್ನಲ್ಲಿ ಭಾಗವಹಿಸಬಹುದಾದ ಅತ್ಯಂತ ನಂಬಿಗಸ್ಥ ಕುದುರೆ ಎಂದೂ ಪರಿಗಣಿಸಲಾಗಿತ್ತು.
ವಿರಾಟ್ ತನ್ನ ಶಿಸ್ತು ಮತ್ತು ಗಾತ್ರದಿಂದ ಹೆಸರುವಾಸಿಯಾಗಿದ್ದ. ಈಗೀಗ ವಯಸ್ಸು ಜಾಸ್ತಿಯಾಗಿದ್ದರೂ ತುಂಬ ಉತ್ಸಾಹದಿಂದ ಗಣರಾಜ್ಯೋತ್ಸವ ಪರೇಡ್ಗಳಲ್ಲಿ ಪಾಲ್ಗೊಳ್ಳುತ್ತಿದ್ದ. ಅದರಲ್ಲೂ 2021ರ ಗಣರಾಜ್ಯೋತ್ಸವ ಸಮಾರಂಭದ ಪರೇಡ್ ಮತ್ತು ಬೀಟಿಂಗ್ ದಿ ರಿಟ್ರೀಟ್ ಸಮಾರಂಭದಲ್ಲಿ ಅತ್ಯುತ್ತಮವಾಗಿ ಹೆಜ್ಜೆ ಹಾಕಿದ್ದ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಭಾರತದಲ್ಲಿ ರಾಷ್ಟ್ರಪತಿ ಅಂಗರಕ್ಷಕರೆಂದರೆ ಅತ್ಯಂತ ಉನ್ನತ ಮಟ್ಟದ ರೆಜಿಮೆಂಟ್ ಆಗಿದೆ. ಅದರಲ್ಲಿ ಸ್ಥಾನಪಡೆದು, 19 ವರ್ಷಗಳಷ್ಟು ಕಾಲ ಇದ್ದಿದ್ದು ವಿರಾಟ್ ಹೆಗ್ಗಳಿಕೆಯೇ ಸರಿ.
Published On - 3:37 pm, Wed, 26 January 22