ಭಾರತೀಯ ಭಾಷೆಗಳಲ್ಲೂ ಬೋಧನಾ ಆಯ್ಕೆ: CBSEಯಿಂದ ಪ್ರಶಂಸನೀಯ ಹೆಜ್ಜೆ ಎಂದ ಧರ್ಮೇಂದ್ರ ಪ್ರಧಾನ್

|

Updated on: Jul 21, 2023 | 9:59 PM

ಎಲ್ಲಾ ಶಾಲೆಗಳಲ್ಲಿ ಪ್ರಾಥಮಿಕದಿಂದ ಹನ್ನೆರಡನೇ ತರಗತಿಯವರೆಗೆ ಭಾರತೀಯ ಭಾಷೆಗಳಲ್ಲಿ ಶಿಕ್ಷಣದ ಆಯ್ಕೆಯನ್ನು ಒದಗಿಸಿದ್ದಕ್ಕಾಗಿ ನಾನು ಸಿಬಿಎಸ್ಇಯನ್ನು ಅಭಿನಂದಿಸುತ್ತೇನೆ. ಎನ್ಇಪಿ ಕಲ್ಪಿಸಿದಂತೆ, ಇದು ಶಾಲೆಗಳಲ್ಲಿ ಭಾರತೀಯ ಭಾಷಾ ಆಧಾರಿತ ಶಿಕ್ಷಣವನ್ನು ಉತ್ತೇಜಿಸುತ್ತದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಭಾರತೀಯ ಭಾಷೆಗಳಲ್ಲೂ ಬೋಧನಾ ಆಯ್ಕೆ: CBSEಯಿಂದ ಪ್ರಶಂಸನೀಯ ಹೆಜ್ಜೆ ಎಂದ ಧರ್ಮೇಂದ್ರ ಪ್ರಧಾನ್
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
Follow us on

ನವದೆಹಲಿ: ಪ್ರಾಥಮಿಕ ಶಾಲೆಗಳಿಂದ ಪಿಯುಸಿ ವರೆಗೆ ಭಾರತೀಯ ಭಾಷೆಗಳಲ್ಲಿ ಬೋಧನಾ ಮಾಧ್ಯಮವಾಗಿ ಬಳಸುವಂತೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಎಲ್ಲಾ ಶಾಲೆಗಳಿಗೆ ಸೂಚಿಸಿದೆ. ಇದು ಪ್ರಶಸಂನೀಯ ಹೆಜ್ಜೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಹೇಳಿದ್ದಾರೆ. ಅಲ್ಲದೆ, ರಾಷ್ಟ್ರೀಯ ಶಿಕ್ಷಣ ನೀತಿ (NEP) ಕಲ್ಪಿಸಿದಂತೆ ಇದು ಶಾಲೆಗಳಲ್ಲಿ ಭಾರತೀಯ ಭಾಷಾ ಆಧಾರಿತ ಶಿಕ್ಷಣವನ್ನು ಉತ್ತೇಜಿಸುತ್ತದೆ ಎಂದರು.

ಈ ಬಗ್ಗೆ ಟ್ವೀಟ್ ಮಾಡಿದ ಧರ್ಮೇಂದ್ರ ಪ್ರಧಾನ್, “ಶಾಲೆಗಳಲ್ಲಿ ಮಾತೃಭಾಷೆ ಮತ್ತು ಭಾರತೀಯ ಭಾಷೆಗಳಲ್ಲಿ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದು ಪ್ರಶಂಸನೀಯ ಹೆಜ್ಜೆಯಾಗಿದೆ. ನಮ್ಮ ಎಲ್ಲಾ ಶಾಲೆಗಳಲ್ಲಿ ಪ್ರಾಥಮಿಕದಿಂದ ಹನ್ನೆರಡನೇ ತರಗತಿಯವರೆಗೆ ಭಾರತೀಯ ಭಾಷೆಗಳಲ್ಲಿ ಶಿಕ್ಷಣದ ಆಯ್ಕೆಯನ್ನು ಒದಗಿಸಿದ್ದಕ್ಕಾಗಿ ನಾನು ಸಿಬಿಎಸ್ಇಯನ್ನು ಅಭಿನಂದಿಸುತ್ತೇನೆ. ಎನ್ಇಪಿ ಕಲ್ಪಿಸಿದಂತೆ, ಇದು ಶಾಲೆಗಳಲ್ಲಿ ಭಾರತೀಯ ಭಾಷಾ ಆಧಾರಿತ ಶಿಕ್ಷಣವನ್ನು ಉತ್ತೇಜಿಸುತ್ತದೆ. ಶಿಕ್ಷಣದಲ್ಲಿ ಉತ್ತಮ ಫಲಿತಾಂಶಗಳತ್ತ ಇದು ಉತ್ತಮ ಆರಂಭವಾಗಿದೆ” ಎಂದರು.

ಪ್ರಾಥಮಿಕ ಶಾಲೆಗಳಿಂದ ಹನ್ನೆರಡನೇ ತರಗತಿಯವರೆಗೆ ಭಾರತೀಯ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಬಳಸುವಂತೆ ಸಿಬಿಎಸ್ಇ ಮಂಡಳಿ, ಎಲ್ಲಾ ಶಾಲೆಗಳಿಗೆ ಸೂಚಿಸಿದೆ. ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಲು ಮತ್ತು ಬಹುಭಾಷಾ ಶಿಕ್ಷಣವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಪರಸ್ಪರ ಸಹಕರಿಸುವಂತೆ ಮಂಡಳಿಯು ಶಾಲೆಗಳಿಗೆ ಸೂಚಿಸಿದೆ.

ಇದನ್ನೂ ಓದಿ: ವಿಶ್ವ ಯುವ ಕೌಶಲ್ಯ ದಿನದಂದು ಕೃತಕ ಬುದ್ಧಿಮತ್ತೆ ಕಾರ್ಯಕ್ರಮವನ್ನು ಪ್ರಾರಂಭಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್

ಶಿಕ್ಷಣ ಸಚಿವಾಲಯ, ರಾಷ್ಟ್ರೀಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಮತ್ತು ಉನ್ನತ ಶಿಕ್ಷಣವು ರಾಷ್ಟ್ರೀಯ ಶಿಕ್ಷಣ ನೀತಿ, 2020 ರ ಅಡಿಯಲ್ಲಿ ಬಹು ಭಾಷೆಗಳಲ್ಲಿ ಶಿಕ್ಷಣವನ್ನು ಪರಿಚಯಿಸಲು ಹೇಗೆ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ವಿವರಿಸಿದ ಸಿಬಿಎಸ್ಇ, “ಭಾರತೀಯ ಭಾಷೆಗಳ ಮೂಲಕ ಶಿಕ್ಷಣವನ್ನು ಸುಗಮಗೊಳಿಸಲು ತೆಗೆದುಕೊಂಡ ಮೇಲಿನ ಉಪಕ್ರಮಗಳನ್ನು ಗಮನದಲ್ಲಿಟ್ಟುಕೊಂಡು, ಸಿಬಿಎಸ್ಇ ಸಂಯೋಜಿತ ಶಾಲೆಗಳು ಭಾರತೀಯ ಭಾಷೆಗಳನ್ನು ಬಳಸುವುದನ್ನು ಪರಿಗಣಿಸಬಹುದು.

ಭಾರತೀಯ ಸಂವಿಧಾನದ ಅನುಸೂಚಿ 8 ರಲ್ಲಿ ವಿವರಿಸಿದಂತೆ, ಪ್ರೀ ಪ್ರೈಮರಿಯಿಂದ ಪಿಯುಸಿ ವರೆಗೆ ಈಗಿರುವ ಇತರ ಆಯ್ಕೆಗಳ ಜೊತೆಗೆ ಬೋಧನಾ ಮಾಧ್ಯಮವಾಗಿ ಭಾರತೀಯ ಭಾಷೆಗಳನ್ನು ಬಳಸಬಹುದು. ಶಾಲೆಗಳು ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಬಹುದು, ಕ್ಷೇತ್ರದ ತಜ್ಞರೊಂದಿಗೆ ಸಮಾಲೋಚಿಸಬಹುದು ಮತ್ತು ಸಿಬಿಎಸ್ಇ ಶಾಲೆಗಳಲ್ಲಿ ಬಹುಭಾಷಾ ಶಿಕ್ಷಣವನ್ನು ಉತ್ತೇಜಿಸಲು, ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಇತರ ಶಾಲೆಗಳೊಂದಿಗೆ ಸಹಕರಿಸಿ” ಎಂದು ಮಂಡಳಿ ಹೇಳಿದೆ.

ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:28 pm, Fri, 21 July 23