ಐಸಿಎಸ್​ಇ 10ನೇ ತರಗತಿ ಪರೀಕ್ಷೆ ರದ್ದು, ಶೀಘ್ರದಲ್ಲೇ 11ನೇ ತರಗತಿ ಆನ್​ಲೈನ್​ನಲ್ಲಿ ಆರಂಭಿಸಲು ಶಾಲೆಗಳಿಗೆ ಸಿಐಎಸ್​ಸಿಇ  ಸೂಚನೆ

ಐಸಿಎಸ್​ಇ 10ನೇ ತರಗತಿ ಪರೀಕ್ಷೆ ರದ್ದು, ಶೀಘ್ರದಲ್ಲೇ 11ನೇ ತರಗತಿ ಆನ್​ಲೈನ್​ನಲ್ಲಿ ಆರಂಭಿಸಲು ಶಾಲೆಗಳಿಗೆ ಸಿಐಎಸ್​ಸಿಇ  ಸೂಚನೆ
ಪ್ರಾತಿನಿಧಿಕ ಚಿತ್ರ

CISCE Cancels ICSE Class 10 Exams: 10ನೇ ತರಗತಿ ಪರೀಕ್ಷೆ ರದ್ದು ಮಾಡಿರುವ CISCE 11 ನೇ ತರಗತಿಯ ಪಠ್ಯಕ್ರಮವನ್ನು ಆದಷ್ಟು ಬೇಗ ಆರಂಭಿಸಲು ಶಾಲೆಗಳಿಗೆ ಸೂಚನೆ ನೀಡಿದೆ. ದೇಶದಲ್ಲಿ ಕೊವಿಡ್ ಪರಿಸ್ಥಿತಿಯನ್ನು ಪರಿಗಣಿಸಿ, 11 ನೇ ತರಗತಿ ಆನ್‌ಲೈನ್​ನಲ್ಲಿ ಆರಂಭವಾಗಲಿದೆ.

Rashmi Kallakatta

|

Apr 20, 2021 | 11:27 AM

ದೆಹಲಿ:  ಐಸಿಎಸ್ಇ (ICSE) 10ನೇ ತರಗತಿ ಪರೀಕ್ಷೆ ಬರೆಯಲು ಆಸಕ್ತಿ ಇದೆಯೇ ಇಲ್ಲವೇ ಎಂಬ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಹೇಳಿದ್ದ ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಷನ್ ಎಕ್ಸಾಮಿನೇಷನ್ (CISCE) 10ನೇ ತರಗತಿ ಪರೀಕ್ಷೆ ರದ್ದು ಮಾಡಿದೆ. ಹಿಂದಿನ ಸುತ್ತೋಲೆಯಲ್ಲಿ ನೀಡಲಾದ ಆಯ್ಕೆಗಳನ್ನು ಈಗ ಹಿಂತೆಗೆದುಕೊಳ್ಳಲಾಗಿದೆ. ನಮ್ಮ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸುರಕ್ಷತೆ ಮತ್ತು ಯೋಗಕ್ಷೇಮ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಕೌನ್ಸಿಲ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ ವಿದ್ಯಾರ್ಥಿಗಳು ತಮ್ಮ ಮೌಲ್ಯಮಾಪನ ವಿಧಾನವನ್ನು ಆಯ್ಕೆ ಮಾಡಲು ಅನುಮತಿ ನೀಡುವುದಾಗಿ ಮಂಡಳಿ ನಿರ್ಧರಿಸಿತ್ತು. ಲಿಖಿತ ಪರೀಕ್ಷೆಗೆ ಹಾಜರಾಗಲು ಆಯ್ಕೆ ಮಾಡಿದವರನ್ನು ಅದರ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಿಂದ ಹೊರಗುಳಿಯುವವರನ್ನು ಹಿಂದಿನ ಆದೇಶದ ಪ್ರಕಾರ ವಾಸ್ತವಿಕ ಮಾನದಂಡದ ಮೇಲೆ ನಿರ್ಣಯಿಸಲಾಗುತ್ತದೆ. ಈಗ, ಎಲ್ಲಾ ವಿದ್ಯಾರ್ಥಿಗಳನ್ನು ವಾಸ್ತವಿಕ ಮಾನದಂಡ ದ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುವುದು.

ಸಿಐಎಸ್​ಸಿಇ ಇನ್ನೂ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡುವ ಮಾನದಂಡವನ್ನು ಹೇಳಿಲ್ಲ. ಆದರೆ 11 ನೇ ತರಗತಿಯ ಪಠ್ಯಕ್ರಮವನ್ನು ಆದಷ್ಟು ಬೇಗ ಆರಂಭಿಸಲು ಶಾಲೆಗಳಿಗೆ ಸೂಚನೆ ನೀಡಿದೆ. ದೇಶದಲ್ಲಿ ಕೊವಿಡ್ ಪರಿಸ್ಥಿತಿಯನ್ನು ಪರಿಗಣಿಸಿ, 11 ನೇ ತರಗತಿ ಆನ್‌ಲೈನ್​ನಲ್ಲಿ ಆರಂಭವಾಗಲಿದೆ. ಅದಕ್ಕಾಗಿ 11 ನೇ ತರಗತಿಗೆ ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸಲು ಶಾಲೆಗಳಿಗೆ ತಿಳಿಸಲಾಗಿದೆ. 11 ನೇ ತರಗತಿ ವಿದ್ಯಾರ್ಥಿಗಳಿಗಿರುವ ವೇಳಾಪಟ್ಟಿಯನ್ನು ತಯಾರಿಸಲು ಮತ್ತು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಲು ಶಾಲೆಗಳಿಗೆ ಸಿಐಎಸ್​ಸಿಇ ನಿರ್ದೇಶಿಸಿದೆ.

ಆದಾಗ್ಯೂ, ಸಿಐಎಸ್​ಸಿಇ ಇನ್ನೂ 10 ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಘೋಷಿಸುವ ಮಾನದಂಡ ಏನು ಎಂದು ಹೇಳಿಲ್ಲ. ನ್ಯಾಯಯುತ ಮತ್ತು ಪಕ್ಷಪಾತವಿಲ್ಲದ ಮಾನದಂಡ ಮತ್ತು ಫಲಿತಾಂಶ ಘೋಷಣೆಯ ದಿನಾಂಕವನ್ನು ನಂತರ ಎಂದು ಘೋಷಿಸಲಾಗುವುದು ಎಂದು ಕೌನ್ಸಿಲ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷವೂ CISCE ಮೂರು ಮಾನದಂಡಗಳನ್ನು ಒಳಗೊಂಡಿರುವ ವಿಶೇಷ ಮಾನದಂಡದ ಆಧಾರದ ಮೇಲೆ ಫಲಿತಾಂಶವನ್ನು ಘೋಷಿಸಿತ್ತು.ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಮೂರು ವಿಷಯದ ಅತ್ಯುತ್ತಮ ಅಂಕಗಳು, ವಿಷಯಕ್ಕೆ ಸಂಬಂಧಿಸಿದ ಪ್ರಾಜೆಕ್ಟ್  ಮತ್ತು ಪ್ರಾಯೋಗಿಕ ಕೆಲಸ, ಪ್ರಾಜೆಕ್ಟ್ ಮತ್ತು ಪ್ರಾಯೋಗಿಕ ಕೆಲಸಗಳಿಗಾಗಿ ಪಡೆದ ಅಂಕಗಳ ಶೇಕಡಾವಾರು ಇವು ಮೂರು ಅಂಶಗಳನ್ನೊಳಗೊಂಡ ವಿಶೇಷ ಮಾನದಂಡ ಅದಾಗಿತ್ತು. ಈ ವರ್ಷ ಯಾವುದೇ ಥಿಯರಿ ಪರೀಕ್ಷೆಗಳು ನಡೆಯಲು ಸಾಧ್ಯವಿಲ್ಲ. ಏತನ್ಮಧ್ಯೆ ಈ ಮಾನದಂಡವು 2021 ಬ್ಯಾಚ್‌ಗೆ ಬದಲಾಗುವ ನಿರೀಕ್ಷೆಯಿದೆ.

CISCE ಕೈಗೊಂಡಿರುವ ಈ ಕ್ರಮವು ಸುಮಾರು ಎರಡು ಲಕ್ಷ ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರಲಿದೆ. ಪ್ರತಿ ವರ್ಷ, ಸುಮಾರು 2 ಲಕ್ಷ ವಿದ್ಯಾರ್ಥಿಗಳು 10 ನೇ ತರಗತಿ ಪರೀಕ್ಷೆಗೆ ಹಾಜರಾಗುತ್ತಾರೆ. 2020 ರಲ್ಲಿ ಐಸಿಎಸ್‌ಇ ಪರೀಕ್ಷೆಗೆ ಒಟ್ಟು 2,07,902 ಅಭ್ಯರ್ಥಿಗಳು ಹಾಜರಾಗಿದ್ದರು. ಈ 2.06 ಲಕ್ಷ ಮಂದಿ ಪರೀಕ್ಷೆಪಾಸಾಗಿದ್ದರು. 2020 ರಲ್ಲಿಯೂ10ನೇ ತರಗತಿ ಪರೀಕ್ಷೆ ಮೇಲೆ ಕೊವಿಡ್ ಪರಿಣಾಮ ಬೀರಿತ್ತು.

ಸಿಐಎಸ್​ಸಿಇ ಅಡಿಯಲ್ಲಿ 12 ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ, ಅಂತಿಮ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಹಿಂದಿನ ಆದೇಶದ ಪ್ರಕಾರ, ಕೊವಿಡ್ ಪರಿಸ್ಥಿತಿಯನ್ನು ಪರಿಗಣಿಸಿದ ನಂತರ ಪರೀಕ್ಷೆಗಳ ಮುಂದೂಡುವಿಕೆ ಮತ್ತು ಪರಿಷ್ಕೃತ ದಿನಾಂಕಗಳನ್ನು ಪ್ರಕಟಿಸಲಾಗುತ್ತದೆ.

ಈ ಮೊದಲು, ಸಿಬಿಎಸ್‌ಇ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿತ್ತು. ಇದಕ್ಕೂ ಮೊದಲು ಶಿಕ್ಷಣ ಸಚಿವರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ನಡೆಸಿದ್ದು, ಇದರಲ್ಲಿ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಲು ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ನಂತರದ ದಿನಗಳಲ್ಲಿ ಮುಂದೂಡಲು ನಿರ್ಧರಿಸಲಾಯಿತು. ಇದರ ನಂತರ  ಹೆಚ್ಚಿನ ರಾಜ್ಯಗಳು 10 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲು ನಿರ್ಧರಿಸಿದವು.

ಇದನ್ನೂ ಓದಿ: JEE Main Postponed: ಏಪ್ರಿಲ್​ 27ರಿಂದ ನಡೆಯಲಿದ್ದ ಜೆಇಇ ಮುಖ್ಯ ಪರೀಕ್ಷೆ ಮುಂದೂಡಿಕೆ..; ವಿದ್ಯಾರ್ಥಿಗಳ ಸುರಕ್ಷತೆಗಾಗಿ ಈ ನಿರ್ಧಾರವೆಂದ ಶಿಕ್ಷಣ ಸಚಿವರು

(CISCE decided to cancel ICSE Class 10 Board Exams class 11 will begin in online mode)

Follow us on

Related Stories

Most Read Stories

Click on your DTH Provider to Add TV9 Kannada