ಭಾರತದ ನ್ಯಾಯಾಂಗದಲ್ಲಿ ಮಹಿಳೆಯರಿಗೆ ಶೇ 50ರ ಮೀಸಲಾತಿ ಅಗತ್ಯ: ಸುಪ್ರೀಂಕೋರ್ಟ್​ ಸಿಜೆ ರಮಣ

ಕಾನೂನು ಕಾಲೇಜುಗಳಲ್ಲಿಯೂ ವಿದ್ಯಾರ್ಥಿನಿಯರಿಗೆ ಸಮಾನ ಅವಕಾಶ ಸಿಗಬೇಕು. ಇದು ನಿಮ್ಮ ಹಕ್ಕು, ಈ ಬಗ್ಗೆ ಒತ್ತಾಯಿಸುವ ಅವಕಾಶ ನಿಮಗಿದೆ ಎಂದರು.

ಭಾರತದ ನ್ಯಾಯಾಂಗದಲ್ಲಿ ಮಹಿಳೆಯರಿಗೆ ಶೇ 50ರ ಮೀಸಲಾತಿ ಅಗತ್ಯ: ಸುಪ್ರೀಂಕೋರ್ಟ್​ ಸಿಜೆ ರಮಣ
ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ
Edited By:

Updated on: Sep 26, 2021 | 3:21 PM

ದೆಹಲಿ: ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ 50ರ ಮೀಸಲಾತಿ ಬೇಕು ಎಂದು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಹೇಳಿದರು. ಹೊಸದಾಗಿ ಸುಪ್ರೀಂಕೋರ್ಟ್​ಗೆ ನೇಮಕಗೊಂಡಿರುವ ಒಂಬತ್ತು ನ್ಯಾಯಮೂರ್ತಿಗಳಿಗೆ ಅಭಿನಂದಿಸಲು ಮಹಿಳಾ ವಕೀಲರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾನೂನು ಕಾಲೇಜುಗಳಲ್ಲಿಯೂ ವಿದ್ಯಾರ್ಥಿನಿಯರಿಗೆ ಸಮಾನ ಅವಕಾಶ ಸಿಗಬೇಕು. ಇದು ನಿಮ್ಮ ಹಕ್ಕು, ಈ ಬಗ್ಗೆ ಒತ್ತಾಯಿಸುವ ಅವಕಾಶ ನಿಮಗಿದೆ ಎಂದರು.

ನ್ಯಾಯಾಂಗದಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಸಿಗಬೇಕು. ಇದು ಸಾವಿರಾರು ವರ್ಷಗಳ ಶೋಷಣೆಯ ವಿಚಾರ. ನ್ಯಾಯಾಂಗದ ಕೆಳಹಂತದಲ್ಲಿರುವ ನ್ಯಾಯಾಧೀಶರ ಪೈಕಿ ಮಹಿಳಾ ನ್ಯಾಯಾಧೀಶರ ಪ್ರಮಾಣ ಶೇ 30ಕ್ಕಿಂತ ಕಡಿಮೆ. ಹೈಕೋರ್ಟ್​ನಲ್ಲಿ ಈ ಪ್ರಮಾಣ ಶೇ 11.5 ಇದ್ದರೆ, ಸುಪ್ರೀಂಕೋರ್ಟ್​ನಲ್ಲಿ ಶೇ 11ರಿಂದ 12ರಷ್ಟು ಮಹಿಳೆಯರು ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ದೇಶದಲ್ಲಿ ಸುಮಾರು 17 ಲಕ್ಷ ವಕೀಲರಿದ್ದಾರೆ. ಈ ಪೈಕಿ ಮಹಿಳೆಯರ ಪ್ರಮಾಣ ಕೇವಲ ಶೇ 15. ವಕೀಲರ ಸಂಘಗಳಲ್ಲಿರುವ ಪ್ರತಿನಿಧಿಗಳ ಪೈಕಿ ಮಹಿಳೆಯರ ಪ್ರಮಾಣ ಶೇ 2. ವಕೀಲರ ಸಂಘದ ಅಖಿಲ ಭಾರತೀಯ ಸಮಿತಿಯಲ್ಲಿ ಏಕೆ ಒಬ್ಬರೂ ಮಹಿಳಾ ಪ್ರತಿನಿಧಿಯಿಲ್ಲ ಎಂಬ ವಿಚಾರವನ್ನು ನಾನು ಪ್ರಸ್ತಾಪಿಸಿದ್ದೆ ಎಂದು ತಿಳಿಸಿದರು.

ಈ ವಿಚಾರಗಳನ್ನು ನಾನು ಶೀಘ್ರ ಪರಿಹರಿಸಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ಈ ಸವಾಲುಗಳನ್ನು ನಿರ್ವಹಿಸುವುದು ಮಹಿಳಾ ವಕೀಲರಿಗೆ ಸುಲಭವಲ್ಲ. ಕೆಲಸ ಮಾಡುವ ಸ್ಥಳಗಳಲ್ಲಿ ಪೂರಕ ಸೌಕರ್ಯಗಳು ಇಲ್ಲದಿರುವುದು, ಪ್ರತ್ಯೇಕ ಶೌಚಾಲಯಗಳು ಮತ್ತು ಶಿಶುಪಾಲನ ಗೃಹಗಳು ಇಲ್ಲದಿರುವ ಕಾರಣ ಮಹಿಳೆಯರಿಗೆ ನ್ಯಾಯಾಂಗದಲ್ಲಿ ಕಾರ್ಯನಿರ್ವಹಿಸಲು ಕಷ್ಟ ಎನಿಸುತ್ತಿದೆ ಎಂದರು.

ಮೂಲ ಸೌಕರ್ಯಗಳ ಸಮಸ್ಯೆ ಪರಿಹರಿಸಲು ನಾನು ಯತ್ನಿಸುತ್ತಿದ್ದೇನೆ. ಕಾರ್ಯಾಂಗದ ಹೊಣೆ ಹೊತ್ತವರು ಬದಲಾವಣೆಯನ್ನು ಜಾರಿ ಮಾಡುವುದು ಅನಿವಾರ್ಯವಾಗುವಂತೆ ಮಾಡುತ್ತಿದ್ದೇನೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು. ಇಂದು ಹೆಣ್ಣುಮಕ್ಕಳ ದಿನ ಎಂಬ ಸಂಗತಿಯನ್ನೂ ನೆನಪಿಸಿದರು. ಎಲ್ಲರಿಗೂ ಹೆಣ್ಣುಮಕ್ಕಳ ದಿನದ ಶುಭಾಶಯಗಳು. ಇದು ಅಮೆರಿಕದ ಸಂಪ್ರದಾಯ ಎನ್ನುವುದು ನಿಜ. ಆದರೆ ನಾವು ಕೆಲ ಒಳ್ಳೇ ಅಂಶಗಳನ್ನು ವಿಶ್ವದೆಲ್ಲೆಡೆ ಸಂಭ್ರಮಿಸುತ್ತೇವೆ ಎಂದರು.

(CJI NV Ramana Says India Needs 50 Percent Reservation For Women In Judiciary)