
ನವದೆಹಲಿ, ಅಕ್ಟೋಬರ್ 28: ಚುನಾವಣಾ ಅಕ್ರಮಗಳು ಮತ್ತು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಆರೋಪಗಳ ವಿರುದ್ಧದ ಪ್ರತಿಭಟನೆಗಳು ಚಳವಳಿಯ ರೂಪ ಪಡೆಯುತ್ತಿರುವ ಸೂಚನೆ ಸಿಕ್ಕಿದೆ. ಕಾಂಗ್ರೆಸ್ನಿಂದ ಹಲವು ತಿಂಗಳುಗಳ ಕಾಲ ಅಂತರ ಕಾಯ್ದುಕೊಂಡಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ‘ಇಂಡಿಯಾ’ ಒಕ್ಕೂಟದ ಬೃಹತ್ ರ್ಯಾಲಿಗೆ ತನ್ನ ಬೆಂಬಲ ಘೋಷಿಸಿದೆ.
ಅಲ್ಲದೆ, ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಪ್ರಮುಖ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂಬ ತನ್ನ ಆಗ್ರಹವನ್ನು ಮತ್ತೊಮ್ಮೆ ಪುನರುಚ್ಚರಿಸಿದೆ.
ಈ ಬಗ್ಗೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. “ಎಲ್ಲಕ್ಕಿಂತ ದೇಶವೇ ಮೊದಲು!” ಎಂದು ಬರೆದುಕೊಂಡು ತಮ್ಮ ಸಂಘಟನೆಯ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. “ಪ್ರಜಾಪ್ರಭುತ್ವದ ಮೂಲಭೂತ ತತ್ವವೆಂದರೆ ಜನರು ತಮ್ಮ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವುದು, ಬದಲಿಗೆ ಸರ್ಕಾರವೇ ತನ್ನ ಮತದಾರರನ್ನು ಆಯ್ಕೆ ಮಾಡಿಕೊಳ್ಳುವುದಲ್ಲ. ವಿಶೇಷ ಪರಿಷ್ಕರಣೆ (ಎಸ್ಐಆರ್) ಮೂಲಕ ಈ ತತ್ವಕ್ಕೇ ಧಕ್ಕೆ ತಂದಿರುವ ಪ್ರಮುಖ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸ್ವತಂತ್ರ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ. ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ನಂಬಿಕೆಯನ್ನು ಮರುಸ್ಥಾಪಿಸಲು ಅವರ ರಾಜೀನಾಮೆ ಅತ್ಯಗತ್ಯ.” ಎಂದಿದ್ದಾರೆ.
ಇದನ್ನೂ ಓದಿ: ಎಸ್ಐಆರ್: ಅಂತಿಮ ಮತದಾರರ ಪಟ್ಟಿ ಪ್ರಕಟ, ಹೆಸರು ಇಲ್ಲದಿದ್ರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ
“ದೇಶದಲ್ಲಿ ಸ್ವತಂತ್ರ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಹೋರಾಡುತ್ತಿರುವ ಎಲ್ಲಾ ಸಂಘಟನೆಗಳ ಜೊತೆ ನಾವು ನಿಲ್ಲುತ್ತೇವೆ ಹಾಗೂ ಬೆಂಬಲಿಸುತ್ತೇವೆ” ಎಂದು ಸಿಜೆಪಿ ನಾಯಕ ದಿಪ್ಕೆ ಹೇಳಿದ್ದಾರೆ.
ಕಳೆದೆರಡು ವಾರಗಳಿಂದ ಸಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜ್ಞಾನೇಶ್ ಕುಮಾರ್ ವಿರುದ್ಧ ಪ್ರತ್ಯೇಕ ಅಭಿಯಾನಗಳನ್ನು ನಡೆಸುತ್ತಿದ್ದವು. ಇದಕ್ಕೂ ಮುನ್ನ ಜೂನ್-ಜುಲೈ ಅವಧಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧವೂ ಪ್ರತಿಭಟನೆ ನಡೆಸಿದ್ದವು. ಅಕ್ಟೋಬರ್ 10 ರಂದು ದೆಹಲಿಯಲ್ಲಿ ಸಿಜೆಪಿ ಕರೆ ನೀಡಿದ್ದ ಪ್ರತಿಭಟನೆಯಿಂದ ಕಾಂಗ್ರೆಸ್ ದೂರ ಉಳಿದಿತ್ತು. ಆದರೆ ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಎನ್ಸಿಪಿ (ಶರದ್ ಪವಾರ್), ಆಮ್ ಆದ್ಮಿ ಪಾರ್ಟಿ ಮತ್ತು ಡಿಎಂಕೆ ಪಕ್ಷಗಳು ಸಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದವು.
ಇದನ್ನೂ ಓದಿ: ವಿಪಕ್ಷದ ಆರೋಪ ತಿರಸ್ಕರಿಸಿದ ಚುನಾವಣಾ ಆಯೋಗ; ಎಸ್ಐಆರ್ ಪರ ಸುಪ್ರೀಂ ಕೋರ್ಟ್ನಲ್ಲಿ ಸರ್ವಾನುಮತದ ಸಮರ್ಥನೆ
ಜಂತರ್ ಮಂತರ್ ಬಳಿ ಪ್ರತಿಭಟನೆ ನಡೆಸಲು ಯತ್ನಿಸಿದ ಸಿಜೆಪಿ ನಾಯಕರಾದ ಸೌರವ್ ದಾಸ್, ಆಶುತೋಷ್ ರಾಂಕಾ ಮತ್ತು ಅಜಿಂಕ್ಯ ಶಿಂಧೆ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದನ್ನು ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದರು. ಸೌರವ್ ದಾಸ್ ಮತ್ತು ರಾಂಕಾ ಅವರು ಭವಿಷ್ಯದಲ್ಲಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುವುದಿಲ್ಲವೆಂದು ಬರೆದುಕೊಟ್ಟ ನಂತರ ತಿಹಾರ್ ಜೈಲಿನಿಂದ 7 ದಿನಗಳ ಬಳಿಕ ಬಿಡುಗಡೆಯಾಗಿದ್ದಾರೆ. ರಾಜಕೀಯ ಪಕ್ಷಗಳಿಂದ ದೂರ ಉಳಿಯುವುದಾಗಿ ಹೇಳಿದ್ದ ಸಿಜೆಪಿ ಸಂಸ್ಥಾಪಕ ದಿಪ್ಕೆ, ‘ಇಂಡಿಯಾ’ ಒಕ್ಕೂಟದ ಹೋರಾಟದ ಉದ್ದೇಶ ಒಂದೇ ಆಗಿರುವುದರಿಂದ ಬೆಂಬಲ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ