ದೆಹಲಿ: ದೇಶದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಮಳೆಯ ತೀವ್ರತೆಗೆ ಉತ್ತರ ಭಾರತದ ಕೆಲ ಪ್ರದೇಶಗಳು ನಲುಗಿಹೋಗಿವೆ. ಮೇಘಸ್ಫೋಟ, ಪ್ರವಾಹ, ಭೂ ಕುಸಿತಗಳಿಂದ ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಕಷ್ಟು ಅನಾಹುತ ಸಂಭವಿಸಿದ್ದು, ಸಾವು, ನೋವುಗಳು ವರದಿಯಾಗಿವೆ. ಈ ಭಾಗಗಳಲ್ಲಿ ಅಧಿಕ ಮಳೆಯಾಗುತ್ತಿದ್ದು, ಬುಧವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಹಳ್ಳಿಯೊಂದರ ಬಳಿ ಸಂಭವಿಸಿದ ಮೇಘಸ್ಫೋಟದಿಂದ ಸುಮಾರು 7 ಮಂದಿ ಸಾವಿಗೀಡಾಗಿದ್ದು, 30ಕ್ಕೂ ಹೆಚ್ಚು ಜನ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಕಿಶ್ತ್ವರ್ ಜಿಲ್ಲೆಯಲ್ಲಿ ಸದರಿ ದುರಂತ ಸಂಭವಿಸಿದ್ದು, ಜನರು ಕಂಗಾಲಾಗಿ ಹೋಗಿದ್ದಾರೆ.
ಇತ್ತ ಹಿಮಾಚಲ ಪ್ರದೇಶದಲ್ಲಿ ಘಟಿಸಿದ ಪ್ರವಾಹದಲ್ಲಿ 9 ಜನರು ದುರ್ಮರಣಕ್ಕೀಡಾಗಿದ್ದು, ಈ ಪೈಕಿ ಲಾಹೂಲ್ ಸ್ಪಿತಿಯಲ್ಲಿ 7 ಜನ ಹಾಗೂ ಚಾಂಬಾ ಜಿಲ್ಲೆಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ನಿರ್ದೇಶಕ ಸುದೇಶ್ ಕುಮಾರ್ ಮೋಕ್ತಾ ತಿಳಿಸಿದ್ದಾರೆ. ಉದಯ್ಪುರದ ತೋಜಿಂಗ್ ನುಲ್ಹಾ ಬಳಿ ಸಂಭವಿಸಿದ ಮೇಘಸ್ಫೋಟ ಲಾಹೂಲ್ ಸ್ಪಿತಿಯ ಅನಾಹುತಕ್ಕೆ ಕಾರಣವಾಗಿದೆ ಎಂದೂ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವರ್ ಜಿಲ್ಲೆಯ ಡಚ್ಚನ್ ಟೆಹ್ಸೀಲ್ ಪ್ರಾಂತ್ಯದ ಹೊಂಜಾರ್ ಎಂಬ ಕುಗ್ರಾಮದಲ್ಲಿ ಬುಧವಾರ ಮುಂಜಾನೆ ಮೇಘಸ್ಪೋಟ ಸಂಭವಿಸಿದ್ದು, ಪ್ರವಾಹದಲ್ಲಿ ಸಾಕಷ್ಟು ಮನೆಗಳು ಕೊಚ್ಚಿಹೋಗಿವೆ. ವಿಚಾರ ತಿಳಿಯುತ್ತಿದ್ದಂತೆಯೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF) ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಭೂಕುಸಿತ ಮತ್ತು ಪ್ರವಾಹದಿಂದ ಡೆಬ್ರೀಸ್ನಲ್ಲಿ 7 ಶವಗಳು ಪತ್ತೆಯಾಗಿದ್ದು, ಇನ್ನೂ 12 ಮಂದಿ ನಾಪತ್ತೆಯಾಗಿದ್ದಾರೆ. ಹೊಂಜಾರ್ ಪ್ರದೇಶದ 100 ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಅಮರನಾಥ ದೇವಾಲಯದ ಬಳಿಯೂ ಭೂಕುಸಿತ ಸಂಭವಿಸಿದೆ.
ಕಳೆದೊಂದು ವಾರದಿಂದ ಜಮ್ಮುವಿನ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಮುಂದಿನ ಒಂದು ವಾರ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಪ್ರಮುಖವಾಗಿ ನದಿ ಪಾತ್ರದ ಗ್ರಾಮಗಳು ಮತ್ತು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಅಪಾಯದಲ್ಲಿದ್ದು ಅವರನ್ನು ತುರ್ತಾಗಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
(Cloudbursts flash floods and landslides wreak havoc in North India)
ಇದನ್ನೂ ಓದಿ:
Maharashtra Rains: ಮಹಾರಾಷ್ಟ್ರದಲ್ಲಿ ಮಳೆ, ಪ್ರವಾಹದ ಅಬ್ಬರ; ಸಾವಿನ ಸಂಖ್ಯೆ 209ಕ್ಕೆ ಏರಿಕೆ, 8 ಜನರು ನಾಪತ್ತೆ