ದೆಹಲಿ: ಹುತಾತ್ಮ ಯೋಧ ಸಂತೋಷ್ ಬಾಬುಗೆ ಭಾರತದ ಎರಡನೇ ಅತಿದೊಡ್ಡ ಮಿಲಿಟರಿ ಗೌರವ ಪ್ರಶಸ್ತಿ, ಮಹಾವೀರ ಚಕ್ರ ಲಭಿಸಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ಮರಣೋತ್ತರ ಮಹಾವೀರ ಚಕ್ರ ಪ್ರಶಸ್ತಿ ಗೌರವಕ್ಕೆ ಸಂತೋಷ್ ಬಾಬು ಹೆಸರು ಘೋಷಣೆಯಾಗಿದೆ. ಗಾಲ್ವಾನ್ ಕಣಿವೆಯಲ್ಲಿ ನಡೆದ ಚೀನಾ-ಭಾರತ ಯೋಧರ ನಡುವಣ ಸಂಘರ್ಷದಲ್ಲಿ ಕರ್ನಲ್ ಸಂತೋಷ್ ಬಾಬು ಹುತಾತ್ಮರಾಗಿದ್ದರು.
ತೆಲಂಗಾಣ ಮೂಲದ ಕರ್ನಲ್ ಸಂತೋಷ್ ಬಾಬು, ಬಿಹಾರ-16 ರೆಜಿಮೆಂಟ್ ಕಮಾಂಡಿಂಗ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ವರ್ಷದ ಜೂನ್ 15ರ ರಾತ್ರಿ ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಕರ್ನಲ್ ಸಂತೋಷ್ ಬಾಬು ಹಾಗೂ 20 ಯೋಧರು ಹುತಾತ್ಮರಾಗಿದ್ದರು.
ಸಂತೋಷ್ ಬಾಬು ತೆಲಂಗಾಣದ ಸೂರ್ಯಪೇಟೆಯವರಾಗಿದ್ದು, 2004ರಲ್ಲಿ ಸೇನೆಗೆ ಸೇರಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಬಾಬು ತಮ್ಮ ವೃತ್ತಿ ಆರಂಭಿಸಿದ್ದರು. ಸಂತೋಷ್ ಬಾಬು, ಪತ್ನಿ, ಮಗಳು ಮತ್ತು ಮಗನನ್ನು ಅಗಲಿದ್ದರು.
ಸಂತೋಷ್ ಬಾಬು ಹುತಾತ್ಮರಾದ ಬಳಿಕ ಮಾತನಾಡಿದ್ದ ಅವರ ತಾಯಿ, ‘ನನ್ನ ಮಗ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ಬಗ್ಗೆ ಹೆಮ್ಮೆ ಇದೆ’ ಎಂದು ಹೇಳಿದ್ದರು. ‘ಸೇನೆಗೆ ಸೇರಲು, ದೇಶಸೇವೆ ಸಲ್ಲಿಸಲು ನನಗೆ ಸಾಧ್ಯವಾಗಲಿಲ್ಲ. ಹಾಗಾಗಿ, ನನ್ನ ಮಗ ಸೇನೆಗೆ ಸೇರಲಿ ಎಂದು ನಾನು ಬಯಸಿದ್ದೆ’ ಎಂದು ಬಾಬು ತಂದೆ ಹೇಳಿಕೆ ನೀಡಿದ್ದರು.
ವಿಶ್ವದ ಇತರ ದೇಶಗಳ ಸೇನೆಗಳಿಗೆ ಹೋಲಿಸಿದರೆ ಭಾರತೀಯ ಸೇನೆಯಲ್ಲಿ ಹುತಾತ್ಮರಾಗುವ ಅಧಿಕಾರಿಗಳು ಮತ್ತು ಯೋಧರ ಅನುಪಾತದ ಅಂತರ ತೀರಾ ಕಡಿಮೆಯಿದೆ. ಅಧಿಕಾರಿಗಳು ದೂರದಲ್ಲಿ ಕುಳಿತು ಯೋಧರನ್ನು ಸಂಘರ್ಷಕ್ಕಿಳಿಸುವ ಪ್ರವೃತ್ತಿ ಭಾರತೀಯ ಸೇನೆಯಲ್ಲಿ ಇಲ್ಲ ಎಂದು ವಿಶ್ವದ ಇತರ ಸೇನೆಗಳಲ್ಲಿಯೂ ಮಾತು ಇದೆ. ಗಾಲ್ವಾನ್ ಸಂಘರ್ಷದಲ್ಲಿ ಕರ್ನಲ್ ಸಂತೋಷ್ ಬಾಬು ಹುತಾತ್ಮರಾದ ರೀತಿ ಈ ಮಾತಿಗೆ ಪುಷ್ಟಿಕೊಡುವಂತೆ ಇತ್ತು.
ಪದ್ಮ ಪುರಸ್ಕಾರ | ಎಸ್ಪಿಬಿ, ಬಿ.ಎಂ. ಹೆಗ್ಡೆಗೆ ಪದ್ಮವಿಭೂಷಣ, ಕಂಬಾರಗೆ ಪದ್ಮಭೂಷಣ
Published On - 9:04 pm, Mon, 25 January 21