ಶ್ರೀನಗರ: ಕಾಶ್ಮೀರದಲ್ಲಿ 30 ವರ್ಷಗಳಲ್ಲಿ ಅತೀ ತೀವ್ರ ಚಳಿ ದಾಖಲಾಗಿದ್ದು ಇಲ್ಲಿನ ಪ್ರಸಿದ್ಧ ದಾಲ್ ಸರೋವರ ಭಾಗಶಃ ಮಂಜುಗಡ್ಡೆಯಂತಾಗಿದೆ.
ಶ್ರೀನಗರದಲ್ಲಿ ಕನಿಷ್ಠ ತಾಪಮಾನ ಮೈನಸ್ 8.4 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. 1995 ರಲ್ಲಿ ಶ್ರೀನಗರದಲ್ಲಿ ಮೈನಸ್ 8.3 ತಾಪಮಾನ ದಾಖಲಾಗಿದ್ದು 1991 ರಲ್ಲಿ ಮೈನಸ್ 11.3 ಡಿಗ್ರಿ ಸೆಲ್ಶಿಯಸ್ ಆಗಿತ್ತು. 1893 ರಲ್ಲಿ ಮೈನಸ್ 14.4 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇತರ ಸರೋವರಗಳು ಕೂಡಾ ಇದೇ ರೀತಿ ಮಂಜುಗಡ್ಡೆಯಂತಾಗಿದೆ.
ಪಹಲ್ಗಮ್ ಟೂರಿಸ್ಟ್ ರೆಸಾರ್ಟ್ನಲ್ಲಿ ಮೈನಸ್ 11.1 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅತೀ ಹೆಚ್ಚು ಚಳಿ ಇರುವ ಪ್ರದೇಶವಾಗಿದೆ ಇದು.
ಗುಲ್ಮಾರ್ಗ್ ಟೂರಿಸ್ಟ್ ರೆಸಾರ್ಟ್ನಲ್ಲಿ ಮೈನಸ್ 7 ಡಿಗ್ರಿಸೆಲ್ಶಿಯಸ್ ದಾಖಲಾಗಿದ್ದು, ಕ್ವಾಜಿಗುಂಡ್ ನಲ್ಲಿ ಮೈನಸ್ 10 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ.
ಉತ್ತರ ಕಾಶ್ಮೀರದ ಕುಪ್ವಾರದಲ್ಲಿ ಮೈನಸ್ 6.7 ಡಿಗ್ರಿ ಸೆಲ್ಶಿಯಸ್ ಮತ್ತು ದಕ್ಷಿಣ ಭಾಗದ ಕೊಕೆರ್ನಾಗ್ ನಲ್ಲಿ 10.3 ಡಿಗ್ರಿ ಸೆಲ್ಶಿಯಸ್ ಉಷ್ಣತೆ ದಾಖಲಾಗಿದೆ. ಕನಿಷ್ಠ ತಾಪಮಾನದಿಂದಾಗಿ ಪೈಪ್ ನೀರು ಕೂಡಾ ಹೆಪ್ಪುಗಟ್ಟಿದ್ದು ರಸ್ತೆಯೂ ಮಂಜಿನ ಹೊದಿಕೆ ಹೊದ್ದುಕೊಂಡಿದೆ.
Published On - 4:33 pm, Thu, 14 January 21