ಪಾರದರ್ಶಕವಾಗಿ ಕಲ್ಲಿದ್ದಲು ಬ್ಲಾಕ್ಸ್ ಹರಾಜು ನಡೆದಿದೆ, ಹಗರಣ ನಡೆಸಿದವರಿಗೆ ಹರಾಜು ವಿರೋಧಿಸುವ ನೈತಿಕತೆಯಿಲ್ಲ -ಪ್ರಲ್ಹಾದ್ ಜೋಶಿ ವಾಗ್ದಾಳಿ

| Updated By: ಸಾಧು ಶ್ರೀನಾಥ್​

Updated on: Dec 07, 2022 | 6:44 PM

L0k Sabha: ಲೋಕಸಭೆಯ ಕಲಾಪದಲ್ಲಿ ಇಂದು ವಿಪಕ್ಷಗಳ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಪ್ರಲ್ಹಾದ್ ಜೋಶಿಯವರು, ಸಾರ್ವಜನಿಕ ಕಲ್ಲಿದ್ದಲು ಗಣಿ ಕಂಪನಿಗಳ ಖಾಸಗಿಕರಣ ಕುರಿತ ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.

ಪಾರದರ್ಶಕವಾಗಿ ಕಲ್ಲಿದ್ದಲು ಬ್ಲಾಕ್ಸ್ ಹರಾಜು ನಡೆದಿದೆ, ಹಗರಣ ನಡೆಸಿದವರಿಗೆ ಹರಾಜು ವಿರೋಧಿಸುವ ನೈತಿಕತೆಯಿಲ್ಲ -ಪ್ರಲ್ಹಾದ್ ಜೋಶಿ ವಾಗ್ದಾಳಿ
ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಲೋಕಸಭೆಯಲ್ಲಿ
Follow us on

ದೆಹಲಿ: ವಾಣಿಜ್ಯ ಕಲ್ಲಿದ್ದಲು ಬ್ಲಾಕ್ಸ್ ಗಳ ಹರಾಜು ಪ್ರಕ್ರಿಯೆ (Commercial Coal Blocks auction) ಅತ್ಯಂತ ಪಾರದರ್ಶಕತೆಯಿಂದ (transparent) ನಡೆಯುತ್ತಿದ್ದು, ಕಲ್ಲಿದ್ದಲು ಹಗರಣ ನಡೆಸಿದವರು ಈ ವ್ಯವಸ್ಥೆಯನ್ನ ವಿರೋಧಿಸುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ವಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆಯ ಕಲಾಪದಲ್ಲಿ ಇಂದು ವಿಪಕ್ಷಗಳ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಪ್ರಲ್ಹಾದ್ ಜೋಶಿಯವರು (Pralhad Joshi), ಸಾರ್ವಜನಿಕ ಕಲ್ಲಿದ್ದಲು ಗಣಿ ಕಂಪನಿಗಳ ಖಾಸಗಿಕರಣ ಕುರಿತ ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.

SCCL ಕಲ್ಲಿದ್ದಲು ಗಣಿ ಕಂಪನಿಯನ್ನ ಕೇಂದ್ರ ಸರ್ಕಾರ ಖಾಸಗಿಕರಣ ಮಾಡಲು ಹೊರಟಿದೆ ಎಂದು ಲೋಕಸಭೆಯಲ್ಲಿ (L0k Sabha) ಇಂದು ತೆಲಂಗಾಣ ಸಂಸದ ಉತ್ತಮ್ ರೆಡ್ಡಿ ಗದ್ದಲ ಎಬ್ಬಿಸಿದ್ದರು. ಇದಕ್ಕೆ ಸಂಸತ್ತಿನಲ್ಲಿ ಉತ್ತರಿಸಿದ ಕಲ್ಲಿದ್ದಲು ಸಚಿವ ಪ್ರಲ್ಜಾದ್ ಜೋಶಿ, SCCL ಖಾಸಗಿಕರಣ ಮಾಡುವ ಯಾವ ಪ್ರಸ್ತಾವನೆಯೂ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.

6 ನೇ ಹಂತದ ಕಲ್ಲಿದ್ದಲು ಗಣಿಗಳನ್ನ ಖಾಸಗಿಯವರಿಗೆ ಹರಾಜು ನಡೆಸುತ್ತಿರುವ ವಿಚಾರಕ್ಕೂ, SCCL ಕಂಪನಿ ಖಾಸಗಿಕರಣಕ್ಕೂ ಸಂಬಂಧವಿಲ್ಲ. ಕಲ್ಲಿದ್ದಲು ಗಣಿಗಳನ್ನ ಖಾಸಗಿಯವರಿಗೆ ಹರಾಜು ಮಾಡಲಾಗ್ತಿದೆ ಅನ್ನೋದನ್ನ ಮುಂದಿಟ್ಟುಕೊಂಡು SCCL ಸರ್ಕಾರಿ ಉದ್ಯಮವನ್ನ ಖಾಸಗಿಕರಣ ಮಾಡ್ತಿದ್ದಾರೆ ಅಂತಾ ಆರೋಪಿಸುವುದು ಸರಿಯಲ್ಲ.

SCCL ಕಂಪನಿಯಲ್ಲಿ ತೆಲಂಗಾಣ ಸರ್ಕಾರ ಶೇ 51% ರಷ್ಟು ಪಾಲುದಾರಿಕೆ ಹೊಂದಿದ್ದು ಕೇಂದ್ರ ಸರ್ಕಾರ ಶೇ 49 % ರಷ್ಟು ಶೇರ್ ಹೊಂದಿದೆ. ಹೀಗಿರುವಾಗ ತೆಲಂಗಾಣ ಸರ್ಕಾರವನ್ನು ಬಿಟ್ಟು ಕೇಂದ್ರ ಸರ್ಕಾರ ಮಾತ್ರ ಎಸ್.ಸಿ.ಸಿ.ಎಲ್ ಖಾಸಗಿಕರಣ ಮಾಡಲು ಹೇಗೆ ಸಾಧ್ಯ..? ಅಂತ ಸಂಸತ್ತಿನ್ನಲ್ಲಿಂದು ವಿಪಕ್ಷಗಳನ್ನು ಜೋಶಿ ಪ್ರಶ್ನಿಸಿದರು.

SCCL ಗೆ ಕೇಂದ್ರ ಸರ್ಕಾರವು 3 ಕಲ್ಲಿದ್ದಲು ಗಣಿಗಳನ್ನು ಮಂಜೂರು ಮಾಡಿತ್ತು. ಇವುಗಳಲ್ಲಿ 2 ಗಣಿಗಳನ್ನು SCCL ಒಪ್ಪಿಸಿದೆ ಮತ್ತು 3 ನೇ ಗಣಿ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ, ಆದರೂ ಕಲ್ಲಿದ್ದಲು ಸಚಿವಾಲಯ ಎಲ್ಲಾ ಅನುಮತಿಗಳನ್ನು ಪಡೆಯುವಲ್ಲಿ ಅನುಕೂಲ ಮಾಡಿಕೊಟ್ಟಿದೆ ಎಂದು ಇದೇ ವೇಳೆ ಪ್ರಲ್ಹಾದ್ ಜೋಶಿ ತಿಳಿಸಿದರು.

ಕಲ್ಲಿದ್ದಲು ಗಣಿಗಳ ಖಾಸಗಿ ಹರಾಜು ಪ್ರಾರಂಭವಾದಾಗಿನಿಂದ ಯಾರೂ ಕೂಡ ಆಕ್ಷೇಪಣೆಗಳನ್ನು ಎತ್ತಿಲ್ಲ. ಕೇಂದ್ರ ಸರ್ಕಾರವು ಪಾರದರ್ಶಕ ಹರಾಜು ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ರಾಜ್ಯಗಳಿಗೂ ಇದು ಪ್ರಯೋಜನಕಾರಿಯಾಗಿದೆ. ಹರಾಜಿನ ಮೂಲಕ ಸಂಪೂರ್ಣ ಆದಾಯವು ರಾಜ್ಯ ಸರ್ಕಾರಗಳಿಗೆ ಹೋಗುತ್ತದೆ. ರಾಜ್ಯಗಳು ಬಯಸಿದರೆ, ಅವರು ಭಾಗವಹಿಸಬಹುದು. ಹರಾಜಿಗೆ ಹಲವು ರಾಜ್ಯ ಸರ್ಕಾರಗಳು ಸಹಕಾರ ನೀಡುತ್ತಿವೆ. ಛತ್ತೀಸ್‌ಗಢ, ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇಲ್ಲದಿದ್ದರೂ ಸಹ ಹರಾಜನ್ನು ಅಳವಡಿಸಿಕೊಂಡಿವೆ.

ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾದವರಿಗೆ ಪಾರದರ್ಶಕತೆ ಬೇಕಾಗಿಲ್ಲ. ಹೀಗಾಗಿ ಪಾರದರ್ಶಕ ಹರಾಜನ್ನು ಖಾಸಗಿಕರಣದ ಹೆಸರಲ್ಲಿ ವಿರೋಧಿಸುತ್ತಿದ್ದಾರೆ ವಿಪಕ್ಷಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇದೇ ವೇಳೆ ತಿರುಗೇಟು ನೀಡಿದರು.

Published On - 5:59 pm, Wed, 7 December 22