ದೆಹಲಿ: ತಿಂಗಳ ಮೊದಲ ದಿನವಾದ ಇಂದು (ಏಪ್ರಿಲ್ 1, 2022) ಎಲ್‌ಪಿಜಿ ದರ ಮತ್ತೆ ಏರಿಕೆ ಮಾಡಲಾಗಿದೆ. ಇಂದಿನಿಂದ ವಾಣಿಜ್ಯ LPG ಸಿಲಿಂಡರ್ ಬೆಲೆ ಮತ್ತಷ್ಟು ಏರಿಕೆ ಆಗಿದೆ. 19 ಕೆಜಿಯ ಎಲ್‌ಪಿಜಿ ಸಿಲಿಂಡರ್ ಬೆಲೆ 250 ರೂ. ಏರಿಕೆ ಮಾಡಲಾಗಿದೆ. ಅದರಂತೆ 19 ಕೆಜಿಯ LPG ಸಿಲಿಂಡರ್ ಬೆಲೆ 2,253 ರೂ.ಗೆ ಹೆಚ್ಚಳವಾಗಿದೆ. 2 ತಿಂಗಳಲ್ಲಿ 19 ಕೆಜಿ LPG ಸಿಲಿಂಡರ್ ಬೆಲೆ ಒಟ್ಟು 346 ರೂಪಾಯಿ ಏರಿಕೆಯಾಗಿದೆ. ಅಷ್ಟೇ ಅಲ್ಲದೆ, ಜೆಟ್ ಇಂಧನ ದರ ಕೂಡ ಶೇಕಡಾ 2 ರಷ್ಟು ಹೆಚ್ಚಳವಾಗಿದೆ. ಜೆಟ್ ಇಂಧನ ದರ ಏರಿಕೆಯಿಂದ ವಿಮಾನ ಪ್ರಯಾಣ ದರ ದುಬಾರಿ ಸಾಧ್ಯತೆ ಇದೆ. ಇನ್ನು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ವಾಣಿಜ್ಯ ಚಟುವಟಿಕೆಗಳು ಸಹಿತ ಹೊಟೇಲ್ ಉಪಹಾರ ಬೆಲೆಯಲ್ಲಿ ಏರಿಕೆ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗುತ್ತಿದ್ದು, ಸತತ ಬೆಲೆ ಏರಿಕೆಯ ಬಳಿಕ ಇಂದು (ಏಪ್ರಿಲ್ 1, 2022) ಇಂಧನ ದರದಲ್ಲಿ ಯಾವುದೇ ಏರಿಕೆ, ಇಳಿಕೆ ಆಗಿಲ್ಲ. ಅದರಂತೆ ಶುಕ್ರವಾರ ಪೆಟ್ರೋಲ್, ಡೀಸೆಲ್ ದರ ಸ್ಥಿರವಾಗಿದೆ. ಮಾರ್ಚ್ 22ರಂದು ಆರಂಭವಾದ ಬೆಲೆ ಏರಿಕೆ ಸತತವಾಗಿ ಹೆಚ್ಚುತ್ತಲೇ ಇತ್ತು. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿದಿನ ಎನ್ನುವಂತೆ ಏರುತ್ತಲೇ ಇತ್ತು. ಅದರ ಪರಿಣಾಮ ಕಳೆದ 11 ದಿನಗಳಲ್ಲಿ ಇಂಧನ ಬೆಲೆ ಪ್ರತಿ ಲೀಟರ್ಗೆ ಸರಾಸರಿ ₹ 6.40 ಹೆಚ್ಚಾಗಿದೆ. ಈ 11 ದಿನಗಳಲ್ಲಿ ಇದು ಎರಡನೇ ಬಾರಿಗೆ ಇಂಧನ ದರ ಏರಿಕೆಯಾಗದೇ ಉಳಿದುಕೊಂಡಿದೆ. ಏಪ್ರಿಲ್ ತಿಂಗಳ ಮೊದಲ ದಿನ ಜನರಿಗೆ ಮತ್ತೆ ಇಂಧನ ದರ ಏರಿಕೆಯ ಬಿಸಿ ಮುಟ್ಟುವುದು ತಪ್ಪಿದೆ. ಮೊದಲ ನಾಲ್ಕು ದಿನಗಳಲ್ಲಿ ಇಂಧನ ಬೆಲೆಗಳನ್ನು ದಿನಕ್ಕೆ ಪ್ರತಿ ಲೀಟರ್ಗೆ ತಲಾ 80 ಪೈಸೆಯಂತೆ ಹೆಚ್ಚಿಸಲಾಗಿಯಿತು. ನಂತರದ ದಿನಗಳಲ್ಲಿ ಪೆಟ್ರೋಲ್ ಧಾರಣೆಯನ್ನು ಲೀಟರ್ಗೆ 50 ಮತ್ತು 30, ಮತ್ತೆ 80 ಪೈಸೆಯಷ್ಟು ಹೆಚ್ಚಿಸಲಾಯಿತು.
ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೂಡ ಹೆಚ್ಚಳ
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 107.30 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 91.27 ರೂಪಾಯಿ ದಾಖಲಾಗಿದೆ. ಹೈದರಾಬಾದ್ನಲ್ಲಿ ಲೀಟರ್ ಪೆಟ್ರೋಲ್ ದರ 115.42 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 101.58 ರೂಪಾಯಿ ನಿಗದಿಯಾಗಿದೆ. ಗುಜರಾತ್ನ ಗಾಂಧಿನಗರದಲ್ಲಿ ಲೀಟರ್ ಪೆಟ್ರೋಲ್ ದರ 101.71 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.94 ರೂಪಾಯಿ ನಿಗದಿಯಾಗಿದೆ. ಕೇರಳದ ತಿರುವನಂತಪುರಂನಲ್ಲಿ ಲೀಟರ್ ಪೆಟ್ರೋಲ್ಗೆ 113.27 ರೂಪಾಯಿ ಇದ್ದು, ಲೀಟರ್ ಡೀಸೆಲ್ ಬೆಲೆ 100.16 ರೂಪಾಯಿ ನಿಗದಿಯಾಗಿದೆ. ಲಕ್ನೋದಲ್ಲಿ ಲೀಟರ್ ಪೆಟ್ರೋಲ್ ದರ 101.66 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 93.22 ರೂಪಾಯಿ ನಿಗದಿಯಾಗಿದೆ.
ಹೋಟೆಲ್ ತಿಂಡಿ ದುಬಾರಿ?
ನಗರ ಸೇರಿದಂತೆ ರಾಜ್ಯದಾದ್ಯಂತ ತಿನಿಸಿನ ಬೆಲೆ ಹೆಚ್ಚಿಸಲು ಹೋಟೆಲ್ ಮತ್ತು ಉಪಹಾರ ಮಂದಿರಗಳ ಮಾಲೀಕರು ನಿರ್ಧರಿಸಿದ್ದಾರೆ. ನಾಳೆಯಿಂದಲೇ (ಏಪ್ರಿಲ್ 2) ಗ್ರಾಹಕರ ಜೇಬಿಗೆ ಹೋಟೆಲ್ ಉಪಹಾರ ಮತ್ತಷ್ಟು ಹೊರೆಯಾಗಬಹುದು. ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಅಡುಗೆಗೆ ಬಳಕೆಯಾಗುವ ಖಾದ್ಯತೈಲ, ವಾಣಿಜ್ಯ ಬಳಕೆಯ ನೈಸರ್ಗಿಕ ಅನಿಲ ಸಿಲಂಡರ್ನ ಬೆಲೆ ಹೆಚ್ಚಾಗಿದೆ. ಇದರ ಜೊತೆಗೆ ಪೆಟ್ರೋಲ್-ಡೀಸೆಲ್ ಧಾರಣೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಬೆಲೆ ಏರಿಕೆ ಸರಿದೂಗಿಸಲು ಊಟ-ತಿಂಡಿ ದರ ಹೆಚ್ಚಳಕ್ಕೆ ಹೋಟೆಲ್ಗಳ ಮಾಲೀಕರು ಗಂಭೀರ ಚಿಂತನೆ ನಡೆಸಿದ್ದಾರೆ.
ಇದನ್ನೂ ಓದಿ: LPG Cylinder Price Hike: ಬೆಲೆ ಏರಿಕೆ ಶಾಕ್! ಗೃಹ ಬಳಕೆಯ LPG ಸಿಲಿಂಡರ್ ದರ ಹೆಚ್ಚಳ
ಇದನ್ನೂ ಓದಿ: ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರಿಂದ ಪ್ರತಿಭಟನೆ; ಸಿಲಿಂಡರ್, ಬೈಕ್ಗಳಿಗೆ ಹೂವಿನ ಹಾರ ಹಾಕಿ ಧರಣಿ
Published On - 8:02 am, Fri, 1 April 22