ಇವಿಎಂ ಅನ್​ಲಾಕ್ ವರದಿ ಪ್ರಕಟಿಸಿದ ಮಿಡ್-ಡೇ, ಹಾಗೂ ಸುಳ್ಳು ಸುದ್ದಿ ಹಂಚಿಕೊಂಡ ಧ್ರುವ್ ರಾಠಿ, ರಾಜದೀಪ್ ಸರ್ದೇಸಾಯಿ ವಿರುದ್ಧ ದೂರು

|

Updated on: Jun 30, 2024 | 3:14 PM

EVM unlocking fake news: ಇವಿಎಂ ಯಂತ್ರವನ್ನು ಮೊಬೈಲ್ ಫೋನ್​ನಿಂದ ಅನ್​ಲಾಕ್ ಮಾಡಲಾದ ಸುದ್ದಿ ಪ್ರಕಟಿಸಿದ ಮಿಡ್ ಡೇ ಪತ್ರಿಕೆ ಹಾಗೂ ಆ ಸುಳ್ಳು ಸುದ್ದಿಯನ್ನು ಹಂಚಿಕೊಂಡ ರಾಜದೀಪ್ ಸರದೇಸಾಯಿ, ಯೂಟ್ಯೂಬರ್ ಧ್ರುವ್ ರಾಠೀ ಮೊದಲಾದವರ ವಿರುದ್ಧ ದೂರು ದಾಖಲು ಮಾಡಲಾಗಿದೆ. ವಕೀಲ ವಿವೇಕಾನಂದ ಎಂಬುವವರು ಮುಂಬೈನ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಅರ್ಜಿ ಹಾಕಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.

ಇವಿಎಂ ಅನ್​ಲಾಕ್ ವರದಿ ಪ್ರಕಟಿಸಿದ ಮಿಡ್-ಡೇ, ಹಾಗೂ ಸುಳ್ಳು ಸುದ್ದಿ ಹಂಚಿಕೊಂಡ ಧ್ರುವ್ ರಾಠಿ, ರಾಜದೀಪ್ ಸರ್ದೇಸಾಯಿ ವಿರುದ್ಧ ದೂರು
ಇವಿಎಂ ಯಂತ್ರ
Follow us on

ಮುಂಬೈ, ಜೂನ್ 30: ಇವಿಎಂ ಯಂತ್ರವನ್ನು ಮೊಬೈಲ್ ಮೂಲಕ ಕನೆಕ್ಟ್ ಮಾಡಲಾಡಲಾಯಿತು ಎನ್ನುವಂತಹ ವರದಿಯನ್ನು ಪ್ರಕಟಿಸಿದ ಮಿಡ್ ಡೇ ಪತ್ರಿಕೆಯ ವರದಿಗಾರ ಶಿರೀಷ್ ವಕಾತಾನಿಯಾ ವಿರುದ್ಧ ಮುಂಬೈನ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ದೂರು ದಾಖಲಾಗಿದೆ. ಈ ‘ಸುಳ್ಳು’ ವರದಿಯನ್ನು ಪ್ರಚುರಪಡಿಸಿದ ಪತ್ರಕರ್ತ ರಾಜದೀಪ್ ಸರ್ದೇಸಾಯಿ, ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ, ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಶ್ರೀನಾತೆ, ಎನ್​ಸಿಪಿ ಶಾಸಕ ಜಿತೇಂದ್ರ ಅಹ್ವಾದ್, ಯೂಟ್ಯೂಬರ್ ಧ್ರುವ್ ರಾಠೀ, ಕಾಂಗ್ರೆಸ್ ನಾಯಕ ಸರಳ್ ಪಟೇಲ್ ಮತ್ತು ಅರ್ಪಿತ್ ಶರ್ಮಾ ಎಂಬುವವರ ವಿರುದ್ಧವೂ ದೂರು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಮಿಡ್ ಡೇ ಪತ್ರಿಕೆ ಹಾಗೂ ಮೇಲಿನ ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅಡ್ವೋಕೇಟ್ ವಿವೇಕಾನಂದ್ ದಯಾನಂದ್ ಗುಪ್ತಾ ಮನವಿ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರವನ್ನು ವಕೀಲರು ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ ಹಂಚಿಕೊಂಡಿದ್ದಾರೆ.

ಸಿಆರ್​ಪಿಸಿ 165(3) ಸೆಕ್ಷನ್ ಅಡಿಯಲ್ಲಿ ವಕೀಲರು ಈ ಅರ್ಜಿ ಸಲ್ಲಿಸಿದ್ದಾರೆ. ಐಪಿಸಿ ಸೆಕ್ಷನ್ 505(2) ಅಡಿಯಲ್ಲಿ ಪ್ರಕರಣದ ತನಿಖೆ ಆಗಬೇಕು ಎಂದೂ ಈ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಅಮ್ಮನ ಹೆಸರಲ್ಲಿ ಗಿಡ ನೆಡುವ ಅಭಿಯಾನಕ್ಕೆ ಮನ್ ಕೀ ಬಾತ್​ನಲ್ಲಿ ಕರೆ ನೀಡಿದ ಪ್ರಧಾನಿ ಮೋದಿ

ಜೂನ್ 16ರಂದು ಮಿಡ್ ಡೇ ಪತ್ರಿಕೆಯಲ್ಲಿ ಇವಿಎಂ ಅನ್​ಲಾಕ್ ಮಾಡಲಾದ ಸುದ್ದಿಯೊಂದು ಪ್ರಕಟವಾಗಿತ್ತು. ಜೋಗೇಶ್ವರಿ ಈಸ್ಟ್ ಕ್ಷೇತ್ರದಿಂದ ಗೆದ್ದ ಶಿವಸೇನಾ ಸಂಸದ ರವೀಂದ್ರ ವಾಯ್ಕರ್ ಅವರ ಸಂಬಂಧಿಕರಾದ ಮಂಗೇಶ್ ಪಂಡಿಲ್ಕರ್ ಎಂಬುವವರು ಜೂನ್ 4ರಂದು ಮತ ಎಣಿಕೆ ದಿನ ಮೊಬೈಲ್ ಫೋನ್ ಬಳಸಿ ಒಟಿಪಿ ಪಡೆದು ಇವಿಎಂ ಯಂತ್ರ ಅನ್​ಲಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದರು ಎಂದು ಮಿಡ್ ಡೇ ಪತ್ರಿಕೆಯ ವರದಿಯಲ್ಲಿ ತಿಳಿಸಲಾಗಿತ್ತು.

ಅಂದು ಮತ ಎಣಿಕೆಯ ಆರಂಭದಲ್ಲಿ ವಾಯ್ಕರ್ ಹಿನ್ನೆಯಲ್ಲಿದ್ದರು. ಇವಿಎಂ ಅನ್​ಲಾಕ್ ಮಾಡಿದ ಬಳಿಕ ವಾಯ್ಕರ್ ಮತ್ತೆ ಮುನ್ನಡೆಗೆ ಬಂದು ಅಂತಿಮವಾಗಿ ಅಲ್ಪ ಮತಗಳ ಅಂತರದಿಂದ ಜಯ ಗಳಿಸಿದ್ದರು ಎಂದು ವರದಿಯಲ್ಲಿ ಬರೆಯಲಾಗಿತ್ತು.

ಈ ವರದಿ ಸೋಷಿಯಲ್ ಮೀಡಿಯಾ ಹಾಗೂ ಇತರ ಕೆಲ ಮಾಧ್ಯಮಗಳಲ್ಲಿ ಹಂಚಿಕೆ ಆಗಿತ್ತು. ಚುನಾವಣಾ ಆಯೋಗ ತನಿಖೆ ನಡೆಸಿ, ಇವಿಎಂ ಅನ್​ಲಾಕ್ ಮಾಡಲಾಗಿರುವುದೆಲ್ಲ ಸುಳ್ಳು ಎಂದು ಹೇಳಿದೆ. ಮತ ಎಣಿಕೆ ಕೇಂದ್ರಕ್ಕೆ ಅನಧಿಕೃತವಾಗಿ ಫೋನ್ ತೆಗೆದುಕೊಂಡು ಹೋದ ಕಾರಣಕ್ಕೆ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ಮಿಡ್ ಡೇ ಪತ್ರಿಕೆ ಬಳಿಕ ಈ ವರದಿಯನ್ನು ವೆಬ್​ಸೈಟ್​ನಿಂದ ಅಳಿಸಿದೆ.

ಇದನ್ನೂ ಓದಿ: ಕಾಲಿನ ಗಾಯಕ್ಕೆ ಆಸ್ಪತ್ರೆಗೆ ದಾಖಲಾದ ಬಾಲಕನ ಖಾಸಗಿ ಅಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಎಡವಟ್ಟು

ರಾಹುಲ್ ಗಾಂಧಿ, ಧ್ರುವ್ ರಾಠೀ, ಪ್ರಿಯಾಂಕಾ ಚತುರ್ವೇದಿ, ಪ್ರಶಾಂತ್ ಭೂಷಣ್ ಮೊದಲಾದವರು ಮಿಡ್ ಡೇ ಪತ್ರಿಕೆ ವರದಿಯನ್ನು ಹಂಚಿಕೊಂಡು ಇವಿಎಂ ವಿರುದ್ಧ ಧ್ವನಿ ಎತ್ತಿದ್ದರು. ಇವಿಎಂ ಅನ್ನು ಹ್ಯಾಕ್ ಮಾಡಬಹುದು ಎಂದು ಇಲಾನ್ ಮಸ್ಕ್ ಮಾಡಿದ ಎಕ್ಸ್ ಪೋಸ್ಟ್​ಗೆ ರಾಹುಲ್ ಗಾಂಧಿ ಸ್ಪಂದಿಸಿ, ಮಿಡ್ ಡೇ ಪತ್ರಿಕೆಯ ವರದಿಯ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ