ಇತ್ತೀಚೆಗೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ವಿಚಾರ ಪದೇಪದೆ ಮುನ್ನೆಲೆಗೆ ಬರುತ್ತಿದೆ. ನಟಿ ಕಂಗನಾ ರಣಾವತ್ ಇತ್ತೀಚೆಗಷ್ಟೇ ಈ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದರು. ಈಗ ಆ ಸಾಲಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರ್ಪಡೆಯಾಗಿದ್ದಾರೆ. ದೇಶಕ್ಕೆ ಕಾಂಗ್ರೆಸ್ ಇತಿಹಾಸವನ್ನು ತಪ್ಪಾಗಿ ಹೇಳಿದೆ. ಕೇವಲ ಮಹಾತ್ಮ ಗಾಂಧಿ, ಜವಾಹರ್ಲಾಲ್ ನೆಹರೂ ಮತ್ತು ಇಂದಿರಾ ಗಾಂಧಿಯವರ ಕೊಡುಗೆಯಿಂದ ಮಾತ್ರ ಸ್ವಾತಂತ್ರ್ಯ ಸಿಕ್ಕದೆ ಎಂದು ಹೇಳುವ ಮೂಲಕ ತಪ್ಪು ಸಂದೇಶ ಸಾರಿದೆ ಎಂದು ಮಧ್ಯಪ್ರದೇಶ ಸಿಎಂ ಹೇಳಿದ್ದಾರೆ.
ಬುಡಕಟ್ಟು ಕ್ರಾಂತಿಕಾರಿ ತಾಂತ್ಯ ಭಿಲ್ ಅಕಾ ತಾಂತ್ಯ ಮಾಮಾ ಅವರ ಜನ್ಮಸ್ಥಳವಾದ ಬರೋಡಾ ಅಹೀರ್‌ನಲ್ಲಿ ಗೌರವ ಕಲಶ ಯಾತ್ರೆ ಉದ್ಘಾಟಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನನಗೆ ಮಹಾತ್ಮ ಗಾಂಧಿ ಬಗ್ಗೆ ಅಪಾರ ಗೌರವ ಇದೆ. ಅವರು ವಿಶ್ವ ಬಂಧು. ಆದರೆ ಈ ದೇಶಕ್ಕೆ ಸ್ವಾತಂತ್ರ್ಯ ಬರಲು ಮಹಾತ್ಮ ಗಾಂಧಿ, ನೆಹರೂ ಮಾತ್ರ ಕಾರಣ ಎಂಬುದು ತಪ್ಪು. ಈ ತಪ್ಪು ಇತಿಹಾಸವನ್ನೇ ಕಾಂಗ್ರೆಸ್ ನಮಗೆ ಪಾಠ ಮಾಡಿದೆ ಎಂದು ಹೇಳಿದರು.
ಈ ದೇಶಕ್ಕೆ ಸ್ವಾತಂತ್ರ್ಯ ಬರಲು ಅನೇಕ ಕ್ರಾಂತಿಕಾರಿಗಳೂ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ತಾಂತ್ಯಾ ಮಾಮಾ, ರಾಣಿ ಲಕ್ಷ್ಮೀಬಾಯಿ, ನಾನಾ ಸಾಹೇಬ್ ಪೇಶ್ವಾ, ಭೀಮಾ ನಾಯಕ್, ರಘುನಾಥ್ ಶಾ, ಶಂಕರ್ ಶಾ, ಬಿರ್ಸಾ ಮುಂಡಾ ಸೇರಿ ಇನ್ನೂ ಅನೇಕರ ಬಲಿದಾನವಾಗಿದೆ. ಇವರ ಕ್ರಾಂತಿಕಾರಿ ಹೋರಾಟವನ್ನೆಂದೂ ಜನರು ಮರೆಯುವುದಿಲ್ಲ ಎಂದು ಚೌಹಾಣ್ ಹೇಳಿದರು. ಬುಡಕಟ್ಟು ಜನಾಂಗದ ಪ್ರಮುಖ ನಾಯಕ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಜನಜಾತೀಯ ಗೌರವ ದಿವಸ್ ಎಂದು ಘೋಷಿಸಿದ ಪ್ರಧಾನಿ ಮೋದಿಯವರಿಗೆ ಇದೇ ಸಂದರ್ಭದಲ್ಲಿ ಧನ್ಯವಾದವನ್ನೂ ಸಲ್ಲಿಸಿದರು. ಬಳಿಕ ತಾಂತ್ಯಾ ಮಾಮಾ ಬಗ್ಗೆ ಮಾತನಾಡಿ, ತಾಂತ್ಯಾ ಮಾಮಾ ಅವರು ಲೇವಾದೇವಿದಾರರ ವಿರುದ್ಧ ಹೋರಾಡಿದವರು. ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದರು. ಅದರಲ್ಲೂ ತಾಂತ್ಯಾ ಮಾಮಾ ಬ್ರಿಟಿಷರ ಖಜಾನೆಯನ್ನೇ ಲೂಟಿ ಮಾಡಿ, ಆ ಸಂಪತ್ತನ್ನು ಬಡವರಿಗೆ ಹಂಚಿದ್ದರು ಎಂದು ವಿವರಸಿದರು.
ಆದರೆ ಕಾಂಗ್ರೆಸ್ ಸರ್ಕಾರವಿದ್ದಾಗ ಬುಡಕಟ್ಟು ಜನಾಂಗದ ಯೂನಿವರ್ಸಿಟಿಗಳಿಗೆ ಇಂದಿರಾ ಗಾಂಧಿ ಹೆಸರನ್ನೇ ಇಡಲಾಯಿತು. ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಬುಡಕಟ್ಟು ಕ್ರಾಂತಿಕಾರಿ ವೀರರನ್ನು ಮರೆಯಲಾಯಿತು. ಕಾಂಗ್ರೆಸ್ ಒಂದೇ ಕುಟುಂಬವನ್ನು ಅತ್ಯಂತ ಹೆಚ್ಚಾಗಿ ಅಟ್ಟಕ್ಕೇರಿಸಿತು. ಉಳಿದೆಲ್ಲರನ್ನೂ ಮರೆಯಿತು. ಆದರೆ ಬಿಜೆಪಿ ಆ ತಪ್ಪನ್ನು ಮಾಡುವುದಿಲ್ಲ ಎಂದಿದ್ದಾರೆ. ಅಂದಹಾಗೆ ಈ ಗೌರವ ಕಲಶ ಯಾತ್ರೆಯು, ತಾಂತ್ಯಾ ಭಿಲ್ ನೆನಪಲ್ಲಿ ಡಿಸೆಂಬರ್ 4ರಂದು ನಡೆಯಲಿದೆ.
ಇದನ್ನೂ ಓದಿ: Axar Patel: ಮೂರನೇ ದಿನದಾಟದ ಬಳಿಕ ವಿಶೇಷ ಮಾಹಿತಿ ಹಂಚಿಕೊಂಡ ದಾಖಲೆ ವೀರ ಅಕ್ಷರ್ ಪಟೇಲ್
Published On - 8:47 am, Sun, 28 November 21