West Bengal: ಶವ ಹೊತ್ತೊಯ್ಯುತ್ತಿದ್ದ ವಾಹನ ನಿಂತಿದ್ದ ಟ್ರಕ್ಗೆ ಡಿಕ್ಕಿ; 18 ಮಂದಿ ಭೀಕರ ಸಾವು, ಐವರಿಗೆ ಗಾಯ
ವಿಪರೀತ ಇಬ್ಬನಿ ಬೀಳುತ್ತಿದ್ದ ಕಾರಣ ಚಾಲಕನಿಗೆ ರಸ್ತೆ ಸರಿಯಾಗಿ ಕಾಣಲಿಲ್ಲ. ಹಾಗೇ ಆತ ತುಂಬ ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಶನಿವಾರ ಮಧ್ಯರಾತ್ರಿ ಭೀಕರ ಅಪಘಾತ ನಡೆದಿದೆ. ಈ ದುರಂತದಲ್ಲಿ 18 ಮಂದಿ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹವನ್ನು ಹೊತ್ತೊಯ್ಯುತ್ತಿದ್ದ ಮೆಟಡಾರ್ ವಾಹನದಲ್ಲಿ ಸುಮಾರು 20 ಜನರು ಉತ್ತರ 24 ಪರಗಣದ ಬಾಗ್ಡಾದಿಂದ ನವದ್ವೀಪದ ಸ್ಮಶಾನದ ಕಡೆಗೆ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ.
ಈ ಮೃತದೇಹವನ್ನು ಹೊತ್ತ ವಾಹನವು ರಸ್ತೆ ಬದಿಯಲ್ಲಿದ್ದ ಟ್ರಕ್ವೊಂದಕ್ಕೆ ಡಿಕ್ಕಿ ಹೊಡೆದಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆ ನಡೆದಿದ್ದು ಹಂಸಖಲಿ ಪೊಲೀಸ್ ಠಾಣೆ ವ್ಯಾಪ್ತಿಯ ಫುಲ್ಬರಿ ಎಂಬಲ್ಲಿ. ವಿಪರೀತ ಇಬ್ಬನಿ ಬೀಳುತ್ತಿದ್ದ ಕಾರಣ ಚಾಲಕನಿಗೆ ರಸ್ತೆ ಸರಿಯಾಗಿ ಕಾಣಲಿಲ್ಲ. ಹಾಗೇ ಆತ ತುಂಬ ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ. ಇದರಿಂದಾಗಿ ರಸ್ತೆ ಪಕ್ಕದಲ್ಲಿ ನಿಂತ ಟ್ರಕ್ಗೆ ಹೋಗಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಾಗೇ, ಹೆಚ್ಚಿನ ತನಿಖೆಯನ್ನೂ ಕೈಗೆತ್ತಿಕೊಂಡಿದ್ದಾರೆ.
ಇನ್ನು ಮೆಟಡಾರ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ 20 ಮಂದಿಯಲ್ಲಿ 18 ಜನರು ಸಾವನ್ನಪ್ಪಿದ್ದು ಅದರಲ್ಲಿ 10 ಪುರುಷರು, ಏಳು ಮಹಿಳೆಯರು ಮತ್ತು ಒಬ್ಬಳು ಆರುವರ್ಷದ ಬಾಲಕಿ ಇದ್ದಾಳೆ. ಇವರೆಲ್ಲ ಬಂಧು-ಬಳಗದವರೇ ಆಗಿದ್ದಾರೆ. ಬಾಗ್ಡಾದ ಬಳಿಯ ಪರ್ಮಧಾನ್ ಎಂಬಲ್ಲಿಯ ನಿವಾಸಿಯಾಗಿದ್ದ ಶ್ರಬಣಿ ಮುಹುರಿ ಎಂಬ ವೃದ್ಧೆ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಗಾಗಿ ಇವರೆಲ್ಲರೂ ಹೊರಟಿದ್ದರು.
ಇದನ್ನೂ ಓದಿ: ನೆಲಮಂಗಲ: ಪರವಾನಗಿ ಪಡೆಯದೆ ಅಕ್ರಮ ಗ್ಯಾಸ್ ರೀಫಿಲಿಂಗ್ ಮಾಡುತ್ತಿದ್ದ ಮನೆ ಮೇಲೆ ಸಿಸಿಬಿ ದಾಳಿ; ಓರ್ವನ ಬಂಧನ
Published On - 9:52 am, Sun, 28 November 21