ಇಂದು ಮುಂಬೈನ ಆಜಾದ್ ಮೈದಾನದಲ್ಲಿ ನಡೆಯಲಿದೆ ರೈತರ ಮೆರವಣಿಗೆ; 50,000 ರೈತರು ಸೇರುವ ನಿರೀಕ್ಷೆ
Kisan Mahapanchayat ರೈತರು 'ಕಿಸಾನ್ ಮಜ್ದೂರ್ ಮಹಾಪಂಚಾಯತ್' ಅನ್ನು ಸಹ ಯೋಜಿಸಿದ್ದಾರೆ. ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಅನುಷ್ಠಾನ, ಸ್ವಾಮಿನಾಥನ್ ವರದಿ, ನಿರುದ್ಯೋಗ ಮತ್ತು ಇತರ ಸಮಸ್ಯೆಗಳು ಸೇರಿದಂತೆ ಅಲ್ಲಿ ಅವರು ಬೆಳೆಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ತಮ್ಮ ಬೇಡಿಕೆಗಳನ್ನು ಚರ್ಚಿಸುತ್ತಾರೆ.
ಮುಂಬೈ: ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿ ಭಾನುವಾರ ಮುಂಬೈನ ಆಜಾದ್ ಮೈದಾನದಲ್ಲಿ(Azad Maidan) ಆಯೋಜಿಸಲಾದ ರ್ಯಾಲಿಯಲ್ಲಿ 50,000 ರೈತರು ಸೇರುವ ನಿರೀಕ್ಷೆಯಿದೆ ಎಂದು ರೈತ ಮುಖಂಡರು ಹೇಳಿದ್ದಾರೆ. ಅಕ್ಟೋಬರ್ 3 ರಂದು ನಡೆದ ಲಖೀಂಪುರ ಖೇರಿ ಘಟನೆಯಲ್ಲಿ (Lakhimpur Kheri incident) ಮೃತಪಟ್ಟ ರೈತರ ಚಿತಾಭಸ್ಮವನ್ನು ತಂದು ಅರಬ್ಬೀ ಸಮುದ್ರದಲ್ಲಿ ತೇಲಿಬಿಡುವ ಯೋಚನೆಯೂ ಇದೆ. ರೈತರು ‘ಕಿಸಾನ್ ಮಜ್ದೂರ್ ಮಹಾಪಂಚಾಯತ್’ (Kisaan Majdoor Mahapanchayat)ಅನ್ನು ಸಹ ಯೋಜಿಸಿದ್ದಾರೆ. ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) , ಸ್ವಾಮಿನಾಥನ್ ವರದಿ ಅನುಷ್ಠಾನ, ನಿರುದ್ಯೋಗ ಮತ್ತು ಇತರ ಸಮಸ್ಯೆಗಳು ಸೇರಿದಂತೆ ಅಲ್ಲಿ ಅವರು ಬೆಳೆಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ತಮ್ಮ ಬೇಡಿಕೆಗಳನ್ನು ಚರ್ಚಿಸುತ್ತಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ (BKU) ಮುಖಂಡ ರಾಕೇಶ್ ಟಿಕಾಯತ್ (Rakesh Tikait) ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (MVA) ಸರ್ಕಾರವು ಸಾವಿಗೀಡಾದ ರೈತರಿಗೆ ಗೌರವ ಸಲ್ಲಿಸಲು ರ್ಯಾಲಿಯಲ್ಲಿ ಸೇರುವ ನಿರೀಕ್ಷೆಯಿದೆ. ನವೆಂಬರ್ 28 ರಂದು,ಮುಂಬೈನ ಆಜಾದ್ ಮೈದಾನದಲ್ಲಿ ನಡೆಯಲಿರುವ ರೈತರ ರ್ಯಾಲಿಗೆ ನಾವು ಬೆಂಬಲ ನೀಡುತ್ತೇವೆ. ಆದರೆ, ಯಾವುದೇ ರಾಜಕೀಯ ವ್ಯಕ್ತಿಗಳು ವೇದಿಕೆಯನ್ನು ಹಂಚಿಕೊಳ್ಳುವುದಿಲ್ಲ” ಎಂದು ಎನ್‌ಸಿಪಿ (NCP)ನಾಯಕ ನವಾಬ್ ಮಲಿಕ್ ಈ ಹಿಂದೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಹೇಳಿದರು.
ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಎಂಬಾತ ವೇಗವಾಗಿ ಚಲಿಸುತ್ತಿದ್ದ ಎಸ್‌ಯುವಿಯು ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಯುಪಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪಿನ ಮೇಲೆ ಹರಿದ ಪರಿಣಾಮ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಸಾವಿಗೀಡಾಗಿದ್ದರು.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಮುಂಬರುವ ಸಂಸತ್ತಿನ ಅಧಿವೇಶನದ ಮೊದಲ ದಿನವೇ ಮಂಡಿಸಲಾಗುವುದು ಎಂದು ಕೇಂದ್ರ ಹೇಳಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸೋಮವಾರ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸುವ ನಿರೀಕ್ಷೆಯಿದೆ. ಇದನ್ನು ಈ ವಾರದ ಆರಂಭದಲ್ಲಿ ಕೇಂದ್ರ ಸಂಪುಟ ಅನುಮೋದಿಸಿತು.
ಏತನ್ಮಧ್ಯೆ, ಸಂಯುಕ್ತ ಕಿಸಾನ್ ಮೋರ್ಚಾ (SKM) ತನ್ನ ನವೆಂಬರ್ 29 ರಂದು ಸಂಸತ್ತಿಗೆ ಟ್ರ್ಯಾಕ್ಟರ್ ಮೆರವಣಿಗೆ ನಡೆಸುವ ತೀರ್ಮಾನ ಹಿಂಪಡೆದಿದ್ದು, ಮುಂದಿನ ತಿಂಗಳು ತನ್ನ ಮುಂದಿನ ಕ್ರಮವನ್ನು ನಿರ್ಧರಿಸಲು ಸಭೆ ನಡೆಸುವುದಾಗಿ ಹೇಳಿದೆ.
ಕೃಷಿ ಕಾನೂನುಗಳನ್ನು ರದ್ದುಪಡಿಸುವವರೆಗೆ ಮತ್ತು ಅವರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೆ ಚಳವಳಿಯನ್ನು ಕೊನೆಗೊಳಿಸುವುದಿಲ್ಲ ಎಂದು ರೈತರ ಸಂಘ ಈ ಹಿಂದೆ ಹೇಳಿತ್ತು. ಮೂರು ಕಾನೂನುಗಳು – ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನೆ ಮತ್ತು ಅನುಕೂಲ) ಕಾಯಿದೆ, ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸೆಪ್ಟೆಂಬರ್ 27, 2020 ರಂದು ಅವರು ಒಪ್ಪಿಗೆ ನೀಡಿದ್ದರು.
ಇದನ್ನೂ ಓದಿ:ಕೊರೊನಾ ರೂಪಾಂತರಿ ಒಮಿಕ್ರಾನ್ ಆತಂಕ; ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಹೈ ಅಲರ್ಟ್