ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಸಂವಾದ ನಡೆಸಿದ ಗಾಯಕ ದಿಲ್ಜೀತ್ ದೊಸಾಂಜ್
ಖ್ಯಾತ ಗಾಯಕ, ಬಾಲಿವುಡ್ ನಟ ದಿಲ್ಜೀತ್ ದೊಸಾಂಜ್ ಅವರಿಗೆ ಅಪರೂಪದ ಅವಕಾಶ ಸಿಕ್ಕಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ದಿಲ್ಜೀತ್ ದೊಸಾಂಜ್ ಭೇಟಿ ಆಗಿದ್ದಾರೆ. ಆ ಸಂದರ್ಭದ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಭೇಟಿಯ ವೇಳೆ ಕೆಲವು ವಿಷಯಗಳ ಬಗ್ಗೆ ದಿಲ್ಜೀತ್ ಅವರು ಮಾತುಕಥೆ ನಡೆಸಿದ್ದಾರೆ.
ಗಾಯಕ ದಿಲ್ಜೀತ್ ದೊಸಾಂಜ್ ಅವರಿಗೆ ವಿಶ್ವಾದ್ಯಂತ ಜನಪ್ರಿಯತೆ ಇದೆ. ಹಲವು ದೇಶಗಳಲ್ಲಿ ಅವರು ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಗಮನಾರ್ಹ ಸಿನಿಮಾಗಳಲ್ಲಿ ನಟಿಸುವ ಮೂಲಕವೂ ಹೆಸರು ಮಾಡಿದ್ದಾರೆ. ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಹೆಮ್ಮೆ ಇದೆ. ಈಗ ದಿಲ್ಜೀತ್ ದೊಸಾಂಜ್ ಅವರಿಗೆ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಅಲ್ಲದೆ, ಕೆಲವು ಸಮಯ ಅವರು ಪ್ರಧಾನಿ ಜೊತೆ ಸಂವಾದ ಕೂಡ ಮಾಡಿದ್ದಾರೆ. ಈ ಅಪರೂಪದ ಕ್ಷಣಗಳ ವಿಡಿಯೋವನ್ನು ದಿಲ್ಜೀತ್ ದೊಸಾಂಜ್ ಹಾಗೂ ನರೇಂದ್ರ ಮೋದಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ಇದು ತುಂಬ ಸ್ಮರಣೀಯ ಮಾತುಕಥೆ. ಈ ಭೇಟಿಯ ಹೈಲೈಟ್ಸ್ ಇಲ್ಲಿದೆ’ ಎಂಬ ಕ್ಯಾಪ್ಷನ್ನೊಂದಿಗೆ ನರೇಂದ್ರ ಮೋದಿ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ‘ಭಾರತದ ಓರ್ವ ಹಳ್ಳಿ ಹುಡುಗ ಪ್ರಪಂಚದಲ್ಲಿ ಹೆಸರು ಮಾಡುತ್ತಾನೆ ಎಂದಾಗ ತುಂಬ ಖುಷಿ ಆಗುತ್ತದೆ’ ಎಂದು ಪ್ರಧಾನಿ ಮೋದಿ ಅವರು ದಿಲ್ಜೀತ್ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.
‘ನಿಮ್ಮ ಕುಟುಂಬದವರು ನಿಮಗೆ ದಿಲ್ಜೀತ್ (ಹೃದಯ ಗೆದ್ದವ) ಎಂದು ಹೆಸರು ಇಟ್ಟರು. ನೀವು ಜನರ ಹೃದಯವನ್ನು ಗೆಲ್ಲುತ್ತಲೇ ಸಾಗುತ್ತಿದ್ದೀರಿ’ ಎಂದು ಕೂಡ ಗಾಯಕನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸೆಯ ಮಳೆ ಸುರಿಸಿದ್ದಾರೆ. ಅವರ ಮಾತಿಗೆ ದಿಲ್ಜೀತ್ ಅವರು ಧನ್ಯವಾದ ಅರ್ಪಿಸಿದ್ದಾರೆ.
View this post on Instagram
‘ಮೇರಾ ಭಾರತ್ ಮಹಾನ್ ಅಂತ ನಾವು ಪುಸ್ತಕದಲ್ಲಿ ಓದುತ್ತಿದ್ದೆವು. ನಾನು ಪೂರ್ತಿ ದೇಶ ಸಂಚರಿಸಿದ ಬಳಿಕ ಯಾಕೆ ಮೇರಾ ಭಾರತ್ ಮಹಾನ್ ಎನ್ನುತ್ತಾರೆ ಅಂತ ನನಗೆ ತಿಳಿಯಿತು’ ಎಂದು ದಿಲ್ಜೀತ್ ದೊಸಾಂಜ್ ಹೇಳಿದ್ದಾರೆ. ‘ಭಾರತದ ವಿವಿಧ್ಯತೆಯೇ ನಮ್ಮ ಶಕ್ತಿ. ಯೋಗದ ಅನುಭವ ಪಡೆದವರು ಅದರ ಶಕ್ತಿ ಅರಿಯುತ್ತಾರೆ’ ಎಂದು ಮೋದಿ ಹೇಳಿದ್ದಾರೆ. ಮೋದಿಯವರ ಕೆಲಸವನ್ನು ದಿಲ್ಜೀತ್ ದೊಸಾಂಜ್ ಅವರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ನಿಂದ ಇಟಲಿವರೆಗೆ 2024ರಲ್ಲಿ ಪ್ರಧಾನಿ ಮೋದಿ ಭೇಟಿಯಾದ ಪ್ರಮುಖ ವ್ಯಕ್ತಿಗಳು
ಈ ಭೇಟಿಯ ವೇಳೆ ಗುರುನಾನಕ್ ಗೀತೆಯನ್ನು ದಿಲ್ಜೀತ್ ಹಾಡಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ ಮೋದಿ ಅವರನ್ನು ಭೇಟಿ ಮಾಡಿದ್ದಕ್ಕೆ ದಿಲ್ಜೀತ್ ದೊಸಾಂಜ್ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.