ಜೂ ಎನ್ಟಿಆರ್ ಹೊಸಬ ಎಂಬ ಬಾಲಿವುಡ್ ನಿರ್ಮಾಪಕನ ಬೆವರಿಳಿಸಿದ ಸಿದ್ಧಾರ್ಥ್
Jr NTR: ಬಾಲಿವುಡ್ ಸಿನಿಮಾಗಳನ್ನು ಎಲ್ಲ ರೀತಿಯಲ್ಲಿಯೂ ದಕ್ಷಿಣ ಭಾರತದ ಸಿನಿಮಾಗಳು ಹಿಂದಿಕ್ಕಿವೆ. ಭಾರತೀಯ ಸಿನಿಮಾಗಳು ಎಂದರೆ ಅವು ದಕ್ಷಿಣದ ಸಿನಿಮಾಗಳು ಎಂಬ ಸ್ಥಿತಿ ನಿರ್ಮಾಣವಾಗಿದೆ. ಆದರೂ ಕೆಲವು ಬಾಲಿವುಡ್ ನಿರ್ಮಾಪಕರು ಈಗಲೂ ದಕ್ಷಿಣ ಭಾರತದ ಸಿನಿಮಾಗಳನ್ನು ನಟರನ್ನು ದ್ವಿತೀಯ ದರ್ಜೆ ನಟರಂತೆ ನೋಡುವುದು ಬಿಟ್ಟಿಲ್ಲ.
ಬಾಲಿವುಡ್ ಸಿನಿಮಾಗಳನ್ನು ದಕ್ಷಿಣ ಭಾರತದ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಹಿಂದಿಕ್ಕಿವೆ. ದಕ್ಷಿಣ ಭಾರತ ಸಿನಿಮಾಗಳ ದಾಳಿಯಿಂದ ಬಾಲಿವುಡ್ನ ದೊಡ್ಡ ನಿರ್ಮಾಪಕರು, ನಟರು ಕಂಗೆಟ್ಟಿದ್ದಾರೆ. ಎಲ್ಲ ವಿಧದಲ್ಲಿಯೂ ದಕ್ಷಿಣ ಭಾರತದ ಸಿನಿಮಾಗಳು ತಾವೆಷ್ಟು ಶಕ್ತ ಎಂಬುದನ್ನು ಈಗಾಗಲೇ ತೋರಿಸಿ ಆಗಿದೆ. ಹಾಗಿದ್ದರೂ ಸಹ ಕೆಲವು ಬಾಲಿವುಡ್ ಬಡಾ ನಿರ್ಮಾಪಕರು ತಮ್ಮ ಅಹಂ ಬಿಟ್ಟಿಲ್ಲ. ದಕ್ಷಿಣ ಭಾರತ ಸಿನಿಮಾಗಳನ್ನು, ಇಲ್ಲಿನ ನಟ-ನಟಿಯರನ್ನು ದ್ವಿತೀಯ ದರ್ಜೆಯವರಂತೆ ಕಾಣುವುದನ್ನು ಮುಂದವರೆಸಿದ್ದಾರೆ. ಇದಕ್ಕೆ ತಾಜಾ ಉದಾಹರಣೆ, ಶ್ರೀದೇವಿಯ ಪತಿ ಬೋನಿ ಕಪೂರ್ ಅವರದ್ದು.
ಬೋನಿ ಕಪೂರ್, ನಟ ಸಿದ್ಧಾರ್ಥ್, ತೆಲುಗಿನ ನಿರ್ಮಾಪಕ ನಾಗ ವಂಶಿ ಇನ್ನೂ ಕೆಲವರು ಇತ್ತೀಚೆಗೆ ರೌಂಡ್ ಟೇಬಲ್ ಚರ್ಚೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಬೋನಿ ಕಪೂರ್, ಜೂ ಎನ್ಟಿಆರ್ ಬಗ್ಗೆ ಆಡಿರುವ ಮಾತು ಈಗ ಚರ್ಚೆಗೆ ಕಾರಣವಾಗಿದೆ. ಹಿಂದಿ ಸಿನಿಮಾ ವೀಕ್ಷಕರು ದಕ್ಷಿಣ ಭಾರತದ ನಟರನ್ನು ಮೊದಲಿನಿಂದಲೂ ಸ್ವೀಕಾರ ಮಾಡಿದ್ದಾರೆ ಎಂದು ಮಾತನಾಡುತ್ತಿದ್ದ ಬೋನಿ ಕಪೂರ್, ‘ಏಕ್ ದೂಜೆ ಕೇ ಲಿಯೆ’ ಸಿನಿಮಾದಲ್ಲಿ ಕಮಲ್ ಹಾಸನ್ ಅನ್ನು ಸ್ವೀಕಾರ ಮಾಡಿದ್ದರು ಎಂದರು.
ಬೋನಿ ಕಪೂರ್ ಮಾತಿಗೆ ಪ್ರತಿಕ್ರಿಯೆ ನೀಡಿದ ಸಿದ್ಧಾರ್ಥ್, ‘ಈಗಲೂ ಬಾಲಿವುಡ್ನಲ್ಲಿ ಅದೇ ವಾತಾವರಣ ಇದೆಯೇ?’ ಎಂದು ಅನುಮಾನದಿಂದ ಪ್ರಶ್ನಿಸಿದರು. ಅದಕ್ಕೆ ಬೋನಿ ಕಪೂರ್, ಹಾಗೆ ಹೊಸಬರನ್ನು ಸ್ವೀಕರಿಸುವ ಪದ್ಧತಿ ಇಲ್ಲದಿದ್ದರೆ ಆದಿತ್ಯ ಚೋಪ್ರಾ ಏಕೆ ಜೂ ಎನ್ಟಿಆರ್ ಅನ್ನು ತಮ್ಮ ಸಿನಿಮಾಕ್ಕೆ ಹಾಕಿಕೊಳ್ಳುತ್ತಿದ್ದರು’ ಎಂದರು. ಇದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಿದ ಸಿದ್ಧಾರ್ಥ್, ‘ಜೂ ಎನ್ಟಿಆರ್ ಹೊಸ ಮುಖ ಅಲ್ಲ, ನೀವು ಮಾತನಾಡುತ್ತಿರುವುದು ಭಾರತದ ಸೂಪರ್ ಸ್ಟಾರ್ ನಟನ ಬಗ್ಗೆ, ಭಾರತದ ಸೂಪರ್ ಸ್ಟಾರ್ ನಟ, ಭಾರತದ ದೊಡ್ಡ ನಿರ್ಮಾಪಕರೊಟ್ಟಿಗೆ ಕೆಲಸ ಮಾಡುತ್ತಿದ್ದಾರೆ’ ಎಂದರು.
ಇದನ್ನೂ ಓದಿ:ದಿನದಿನಕ್ಕೂ ಸ್ಟೈಲಿಶ್ ಆಗುತ್ತಿರುವ ಶ್ರೀದೇವಿ ಪತಿ ಬೋನಿ ಕಪೂರ್
ಇದೇ ಸಂದರ್ಶನದಲ್ಲಿ ನಿರ್ಮಾಪಕ ನಾಗ ವಂಶಿ, ಬಾಲಿವುಡ್ ಸಿನಿಮಾಗಳನ್ನು ಕಟು ಪದಗಳಲ್ಲಿ ಟೀಕಿಸಿದ್ದು, ‘ಬಾಲಿವುಡ್ ಕೇವಲ ಜುಹು ಮತ್ತು ಬಾಂದ್ರಾದ ಜನರಿಗಾಗಿ ಸಿನಿಮಾ ಮಾಡುತ್ತಿದೆ’ ಎಂದರು. ನಾಗ ವಂಶಿಯ ಮಾತುಗಳನ್ನು ಬೋನಿ ಕಪೂರ್ ವಿರೋಧಿಸಿದರು. ಬಾಲಿವುಡ್ನಲ್ಲಿ ಮೊದಲಿನಿಂದಲೂ ಮಾಸ್ ಎಂಟರ್ಟೈನರ್ಗಳು ಚಾಲ್ತಿಯಲ್ಲಿವೆ ಎಂದು ವಾದಿಸಿದರು. ಅಲ್ಲದೆ, ದಕ್ಷಿಣ ಭಾರತ ಸಿನಿಮಾಗಳ ವಿದೇಶಿ ಬಾಕ್ಸ್ ಆಫೀಸ್ ಬಗ್ಗೆ ಟೀಕೆಯನ್ನು ಸಹ ವ್ಯಕ್ತಪಡಿಸಿದರು.
ಬೋನಿ ಕಪೂರ್, ಬಾಲಿವುಡ್ನ ದೊಡ್ಡ ನಿರ್ಮಾಪಕರಲ್ಲಿ ಒಬ್ಬರಾದರೂ ಅವರು ಕೆಲ ತಮಿಳು ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಅಜಿತ್ ನಟನೆಯ ‘ತುಣಿವು’, ತೆಲುಗಿನ ‘ವಕೀಲ್ ಸಾಬ್’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ