ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನ 2ನೇ ಪಟ್ಟಿ ಪ್ರಕಟ; ಕಮಲನಾಥ್, ಅಶೋಕ್ ಗೆಹ್ಲೋಟ್ ಪುತ್ರರಿಗೆ ಸ್ಥಾನ

|

Updated on: Mar 12, 2024 | 8:09 PM

ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತನ್ನ ತಂದೆಯನ್ನು ಕೈಬಿಟ್ಟ ನಂತರ ಬಿಜೆಪಿಗೆ ಸೇರುತ್ತಾರೆ ಎಂಬ ವದಂತಿ ಬೆನ್ನಲ್ಲೇ ನಕುಲ್ ನಾಥ್ ಅವರು ಪ್ರಸ್ತುತ ಪ್ರತಿನಿಧಿಸುವ ಕ್ಷೇತ್ರವಾದ ಛಿಂದ್ವಾರಾದಿಂದ ಮತ್ತೆ ಕಣಕ್ಕಿಳಿದಿದ್ದಾರೆ. ಅದೇ ವೇಳೆ ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ಪುತ್ರ ಗೌರವ್ ಗೊಗೊಯ್, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ಗೆಹ್ಲೋಟ್ ಅವರಿಗೆ ಟಿಕೆಟ್ ನೀಡಲಾಗಿದೆ

ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನ 2ನೇ ಪಟ್ಟಿ ಪ್ರಕಟ; ಕಮಲನಾಥ್, ಅಶೋಕ್ ಗೆಹ್ಲೋಟ್ ಪುತ್ರರಿಗೆ ಸ್ಥಾನ
ಕೆಸಿ ವೇಣುಗೋಪಾಲ್
Follow us on

ದೆಹಲಿ ಮಾರ್ಚ್ 12: ಐದು ರಾಜ್ಯಗಳಾದ ಅಸ್ಸಾಂ, ಗುಜರಾತ್, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದ ಒಂದು ಸ್ಥಾನಕ್ಕೆ ಸ್ಪರ್ಧಿಸಲಿರುವ ಕಾಂಗ್ರೆಸ್ (Congress) ಪಕ್ಷದ 43 ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು (ಮಂಗಳವಾರ) ಪ್ರಕಟವಾಗಿದೆ. ಅಭ್ಯರ್ಥಿಗಳ ಪೈಕಿ ಪ್ರಮುಖರೆಂದರೆ ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ಪುತ್ರ ಗೌರವ್ ಗೊಗೊಯ್, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಪುತ್ರ ವೈಭವ್ ಗೆಹ್ಲೋಟ್ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ( Kamal Nath) ಅವರ ಪುತ್ರ ನಕುಲ್ ನಾಥ್.

ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತನ್ನ ತಂದೆಯನ್ನು ಕೈಬಿಟ್ಟ ನಂತರ ಬಿಜೆಪಿಗೆ ಸೇರುತ್ತಾರೆ ಎಂಬ ವದಂತಿ ಬೆನ್ನಲ್ಲೇ ನಕುಲ್ ನಾಥ್ ಅವರು ಪ್ರಸ್ತುತ ಪ್ರತಿನಿಧಿಸುವ ಕ್ಷೇತ್ರವಾದ ಛಿಂದ್ವಾರಾದಿಂದ ಮತ್ತೆ ಕಣಕ್ಕಿಳಿದಿದ್ದಾರೆ. 77 ವರ್ಷದ ಕಮಲ್ ನಾಥ್ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ಪ್ರಕಟ


ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪ ನಾಯಕ ಗೌರವ್ ಗೊಗೊಯ್ ಅವರು ಜೋರ್ಹತ್‌ನಿಂದ ಸ್ಪರ್ಧಿಸಲಿದ್ದಾರೆ. 2019 ರಿಂದ ಅವರು ಪ್ರತಿನಿಧಿಸುತ್ತಿರುವ ಕಲಿಯಾಬೋರ್ ಕ್ಷೇತ್ರದಿಂದ ಅವರನ್ನು ಈ ಬಾರಿ ಬದಲಿಸಲಾಗಿದೆ.  ಜಲೋರ್‌ನಿಂದ ಸ್ಪರ್ಧಿಸಲಿರುವ ವೈಭವ್ ಗೆಹ್ಲೋಟ್ ಅವರು 2019 ರಲ್ಲಿ ಜೋಧ್‌ಪುಟ್‌ನಿಂದ ಗಜೇಂದ್ರ ಸಿಂಗ್ ಶೇಖಾವತ್‌ ಮುಂದೆ ಚುನಾವಣೆಯಲ್ಲಿ ಸೋತಿದ್ದರು.

ಅಲ್ಲದೆ, ರಾಜ್ಯದ ಮಾಜಿ ಪೊಲೀಸ್ ಮುಖ್ಯಸ್ಥ ಹರೀಶ್ ಮೀನಾ ಅವರು ಟೋಂಕ್-ಸವಾಯಿ ಮಾಧೋಪುರದಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿದಿರುವ ರಾಹುಲ್ ಕಸ್ವಾ ಚುರು ಮತ್ತು ಬ್ರಿಜೇಂದ್ರ ಓಲಾ ಜುಂಜುನುದಿಂದ ಸ್ಪರ್ಧಿಸಲಿದ್ದಾರೆ.  ಮತ್ತೊಬ್ಬ ಪ್ರಮುಖ ಕಾಂಗ್ರೆಸ್ ನಾಯಕ, ಅಸ್ಸಾಂನ ಮಾಜಿ ಸಚಿವ ಮತ್ತು ನಾಗಾವ್ ಕ್ಷೇತ್ರದಿಂದ ಹಾಲಿ ಸಂಸದ ಪ್ರದ್ಯುತ್ ಬೊರ್ಡೊಲೊಯ್ ಅವರನ್ನು ಅದೇ ಕ್ಷೇತ್ರದಿಂದ ಸ್ಪರ್ಧಿಸಲು ನಾಮನಿರ್ದೇಶನ ಮಾಡಲಾಗಿದೆ.

ಅಸ್ಸಾಂನ 14 ಲೋಕಸಭಾ ಸ್ಥಾನಗಳ ಪೈಕಿ 12 ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ. ಇದು ಮೈತ್ರಿಕೂಟದ ಪಾಲುದಾರ ಅಸ್ಸಾಂ ರಾಷ್ಟ್ರೀಯ ಪರಿಷತ್‌ಗೆ ಒಂದು ಸ್ಥಾನವನ್ನು ನೀಡಿದೆ, ಆದರೆ ಉಳಿದ ಕ್ಷೇತ್ರದ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಭಾರತೀಯ ಚುನಾವಣಾ ಆಯೋಗವು ಕಳೆದ ವರ್ಷ ಅಸ್ಸಾಂಗೆ ಮಾತ್ರ ಡಿಲಿಮಿಟೇಶನ್ ಕಸರತ್ತನ್ನು ನಡೆಸಿದ ನಂತರ ಅಸ್ಸಾಂನಲ್ಲಿ ಇದು ಮೊದಲ ಚುನಾವಣೆಯಾಗಿದೆ. ಇದನ್ನು ಆಡಳಿತಾರೂಢ ಬಿಜೆಪಿಗೆ ಸಹಾಯ ಮಾಡಲು ಇದನ್ನು ಮಾಡಲಾಗಿದೆ ಎಂದು ಆರೋಪಿಸಿ ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿದ್ದವು.

ಇದನ್ನೂ ಓದಿ: ಚುನಾವಣಾ ಬಾಂಡ್‌ ಕುರಿತ ವಿವರಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿದ ಎಸ್​​ಬಿಐ

ಮುಂಬರುವ ಲೋಕಸಭೆ ಚುನಾವಣೆಗೆ ಎಂಟು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷವು ಶುಕ್ರವಾರ ಬಿಡುಗಡೆ ಮಾಡಿದೆ. ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡ್‌ನಿಂದ ಎರಡನೇ ಬಾರಿಗೆ ಸ್ಪರ್ಧಿಸಲಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್  ಆಲಪ್ಪುಳದಿಂದ ಕಣಕ್ಕಿಳಿಯಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:03 pm, Tue, 12 March 24