ನವದೆಹಲಿ: ಪಂಜಾಬ್ ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ (Punjab Assembly Election 2022) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣಾ ಸಿದ್ಧತೆಯನ್ನು ಆರಂಭಿಸಿವೆ. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ (Punjab Chief Minister Amarinder Singh) ಅವರ ಭಾರೀ ವಿರೋಧದ ನಡುವೆಯೇ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು (Navjot Singh Sidhu) ಅವರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ನೇಮಕ ಮಾಡಲಾಗಿದೆ. ಭಾನುವಾರ ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ 2022ರ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‌ನ ಕಾಂಗ್ರೆಸ್ನ ಸಾರಥ್ಯವನ್ನು ನವಜೋತ್ ಸಿಂಗ್ ಸಿಧು ವಹಿಸಿಕೊಳ್ಳಲಿದ್ದಾರೆ.
ನವಜೋತ್ ಸಿಂಗ್ ಅವರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ವಿರೋಧ ವ್ಯಕ್ತಪಡಿಸಿದ್ದರು. ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವೆ ಇತ್ತೀಚೆಗೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿತ್ತು. ಹೀಗಾಗಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದ ನವಜೋತ್ ಸಿಂಗ್ ತಮಗೆ ಪಕ್ಷದಲ್ಲಿ ಗುರುತರ ಜವಾಬ್ದಾರಿ ನೀಡಲು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನವಜೋತ್ ಸಿಂಗ್ ಅವರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಸೋನಿಯಾ ಗಾಂಧಿ ನೇಮಕ ಮಾಡಿದ್ದಾರೆ.
ಕಾಂಗ್ರೆಸ್ನ ಹಿರಿಯ ನಾಯಕರಾದ ಪ್ರತಾಪ್ ಸಿಂಗ್ ಬಾಜ್ವಾ ಅವರೇ ಪಂಜಾಬ್‌ನ ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿದ್ದವು. ಆದರೆ, ನವಜೋತ್ ಸಿಂಗ್ ಸಿಧುಗೆ ಮಣೆ ಹಾಕಿರುವ ಕಾಂಗ್ರೆಸ್ ಹೈಕಮಾಂಡ್ ನಡೆಯಿಂದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಅಸಮಾಧಾನ ಹೆಚ್ಚಾಗಿದೆ. ಈ ಹಿಂದೆ ಸುನಿಲ್ ಜಖರ್ ಅವರು ಪಂಜಾಬ್‌ನ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರೊಂದಿಗೆ ನಾಲ್ವರು ಕಾರ್ಯಾಧ್ಯಕ್ಷರನ್ನು ಕೂಡ ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ. ಸಂಗತ್ ಸಿಂಗ್ ಗಿಲ್ಝಿಯಾನ್, ಸುಖ್ವಿಂದರ್ ಸಿಂಗ್ ದನ್ನಿ, ಪವನ್ ಗೋಯಲ್ ಹಾಗೂ ಕುಲ್ಜಿತ್ ಸಿಂಗ್ ನಗ್ರಾ ಪಂಜಾಬ್‌ನ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
AICC President Sonia Gandhi appoints Navjot Singh Sidhu as the President of the Punjab Pradesh Congress Committee with immediate effect. pic.twitter.com/c7ggMUSCts
— ANI (@ANI) July 18, 2021
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನವಜೋತ್ ಸಿಂಗ್ ಅವರನ್ನು ನೇಮಕ ಮಾಡಬಾರದು ಎಂದು ಕೆಲವು ದಿನಗಳ ಹಿಂದಷ್ಟೇ ಪಂಜಾಬ್‌ನ ಕಾಂಗ್ರೆಸ್ ಸಂಸದರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಮುಂದಾಗಿದ್ದರು. ಆದರೆ, ಸಂಸದರ ಭೇಟಿಗೆ ಸೋನಿಯಾ ಗಾಂಧಿ ಅವಕಾಶ ನೀಡಿರಲಿಲ್ಲ. ಹತ್ತಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಸೋನಿಯಾ ಗಾಂಧಿಗೆ ಪತ್ರ ಬರೆದು ನವಜೋತ್ ಸಿಂಗ್ ಸಿಧು ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಹಿಂದೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಸಿಧು ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಕ್ಷಮೆ ಯಾಚಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದರು. ಆದರೂ ನವಜೋತ್ ಸಿಂಗ್ಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಸಿಕ್ಕಿದೆ.
Navjot Singh Sidhu will be an asset to Congress & forthcoming (assembly) elections along with Captain Amarinder Singh, who is the CM of Punjab & is an eminent leader of the party. Both will lead the party to victory: Former Union Minister & senior Congress leader Ashwani Kumar pic.twitter.com/7R2jBtkx8l
— ANI (@ANI) July 18, 2021
ಈ ಬಾರಿಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಮ್ಮ ಬೆಂಬಲಿಗರಾದ ವಿಜಯೇಂದರ್ ಸಿಂಗ್ ಸಿಂಗ್ಲಾ, ಮನೀಷ್ ತಿವಾರಿ, ಸಂತೋಷ್ ಚೌಧರಿ, ಡಾ. ರಾಜ್ಕುಮಾರ್ ವರ್ಕ ಅವರನ್ನು ಶಿಫಾರಸು ಮಾಡಿದ್ದರು. ಆದರೆ, ಅವರ್ಯಾರಿಗೂ ಕಾಂಗ್ರೆಸ್ ಹೈಕಮಾಂಡ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನ ನೀಡದಿರುವುದು ಕ್ಯಾಪ್ಟನ್ ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹೈಕಮಾಂಡ್ನ ಈ ನಿರ್ಧಾರದಿಂದ ಪಂಜಾಬ್‌ನ ಕಾಂಗ್ರೆಸ್ ಬಿಕ್ಕಟ್ಟು ಇನ್ನಷ್ಟು ಉಲ್ಬಣವಾಗುತ್ತದಾ ಅಥವಾ ಅಸಮಾಧಾನ ಶಮನವಾಗುತ್ತದಾ? ಎಂಬುದು ಸದ್ಯದ ಕುತೂಹಲವಾಗಿದೆ.
ಇದನ್ನೂ ಓದಿ: ಕೊನೆಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿಯಾದ ಪಂಜಾಬ್ ಸಿಎಮ್ ಅಮರಿಂದರ್ ಸಿಂಗ್
ಇದನ್ನೂ ಓದಿ: ಪಂಜಾಬ್ನಲ್ಲಿ ಕಾಂಗ್ರೆಸ್ ಬಿಕ್ಕಟ್ಟು: ಸಭೆಗೆ ರಾಹುಲ್ ನಿರಾಕರಿಸಿದ ನಂತರ ಪ್ರಿಯಾಂಕಾರನ್ನು ಭೇಟಿಯಾದ ನವಜೋತ್ ಸಿಂಗ್ ಸಿಧು
(Congress appoints Navjot Singh Sidhu as Punjab Congress Chief amid of CM Amarinder Singh Oppose)