ನವದೆಹಲಿ: ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 33ನೇ ದಿನಕ್ಕೆ ಕಾಲಿಟ್ಟಿದೆ. ಇದೇ ವೇಳೆ, ಇಂದು ಕಾಂಗ್ರೆಸ್ ಪಕ್ಷದ 136ನೇ ಸಂಸ್ಥಾಪನಾ ದಿನವೂ ಆಗಿದೆ. ಇದೆಲ್ಲದರ ನಡುವೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ಇದು ಅಲ್ಪಾವಧಿಯ ಅವರ ವೈಯಕ್ತಿಕ ಪ್ರವಾಸ ಎಂದು ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೇವಾಲಾ ಹೇಳಿದ್ದಾರೆ. ರಾಹುಲ್ ಗಾಂಧಿ ಎಲ್ಲಿಗೆ ಹೋಗಿದ್ದಾರೆ ಎಂಬ ವಿಷಯವನ್ನು ಬಿಟ್ಟು ಕೊಡದ ಸುರ್ಜೇವಾಲ ಸ್ವಲ್ಪ ದಿನ ಅವರು ಇಲ್ಲಿರುವುದಿಲ್ಲ ಎಂದಷ್ಟೇ ಹೇಳಿದ್ದಾರೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಇಟಲಿಯತ್ತ ರಾಹುಲ್?
ಆದರೆ ಕೆಲವು ಮೂಲಗಳ ಪ್ರಕಾರ ರಾಹುಲ್ ಭಾನುವಾರ ಕತಾರ್ ಏರ್ವೇಸ್ ಮೂಲಕ ಇಟಲಿ ದೇಶದ ಮಿಲಾನ್ ನಗರಕ್ಕೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲಿ ಅವರ ಅಜ್ಜಿ ವಾಸವಾಗಿದ್ದು, ಈ ಹಿಂದೆಯೂ ರಾಹುಲ್ ಈ ರೀತಿ ಪ್ರವಾಸ ಕೈಗೊಂಡಿದ್ದರು. ಕಾಂಗ್ರೆಸ್ ಪಕ್ಷದ ನಾಯಕತ್ವದ ಬಗ್ಗೆ ತೀರ್ಮಾನ ಕೈಗೊಳ್ಳುವ ಹೊತ್ತಲ್ಲಿ ರಾಹುಲ್ ವಿದೇಶ ಪ್ರಯಾಣ ಬೆಳೆಸಿರುವುದು ಪಕ್ಷದಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿದೆ.
ರಾಹುಲ್ ಗಾಂಧಿ ವಿದೇಶದಲ್ಲಿ ಕೂತು ಸರ್ಕಾರವನ್ನು ಪ್ರಶ್ನಿಸಲಿದ್ದಾರೆಯೇ?