ರಾಹುಲ್ ಗಾಂಧಿಯ ವಿದೇಶ ಪ್ರವಾಸವನ್ನು ಟೀಕಿಸಿದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು

ಒಂದೆಡೆ ಭಾರತದಲ್ಲಿ ಎಸ್​ಐಆರ್​ ವಿರೋಧಿ ಪ್ರತಿಭಟನೆ ನಡೆಯುತ್ತಿರುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ಟೀಕಾಪ್ರಹಾರ ನಡೆಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, "ರಾಹುಲ್ ಗಾಂಧಿ ಅವರಿಗೆ ವೈಯಕ್ತಿಕ ಜೀವನವಿದೆ. ಇದರೊಂದಿಗೆ ವಿಪಕ್ಷ ನಾಯಕನಾಗಿ ತಮ್ಮ ಜವಾಬ್ದಾರಿಗಳೂ ಇವೆ. ವಿದೇಶದಲ್ಲಿ ಅವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಭೇಟಿಯಾಗುತ್ತಾರೆ, ಬುದ್ಧಿಜೀವಿಗಳನ್ನು ಭೇಟಿಯಾಗುತ್ತಾರೆ. ವಿದೇಶದಲ್ಲಿದ್ದರೂ ಅವರು ಯಾವಾಗಲೂ ದೇಶಕ್ಕೆ ಪ್ರಯೋಜನವಾಗುವ ಕೆಲಸಗಳನ್ನೇ ಮಾಡುತ್ತಾರೆ" ಎಂದು ಹೇಳಿದೆ.

ರಾಹುಲ್ ಗಾಂಧಿಯ ವಿದೇಶ ಪ್ರವಾಸವನ್ನು ಟೀಕಿಸಿದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು
ಸಂದೀಪ್ ದೀಕ್ಷಿತ್ - ರಾಹುಲ್ ಗಾಂಧಿ
Image Credit source: PTI

Updated on: Oct 20, 2026 | 4:29 PM

ನವದೆಹಲಿ, ಅಕ್ಟೋಬರ್ 20: ಚುನಾವಣಾ ಆಯೋಗದ ಎಸ್​ಐಆರ್ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸಗಳ ವಿಷಯವನ್ನು ಪ್ರಸ್ತಾಪಿಸಿ ಬಿಜೆಪಿ ಮತ್ತೆ ವಾಗ್ದಾಳಿ ನಡೆಸಿದೆ. “ದೇಶಾದ್ಯಂತ ಸುಳ್ಳುಗಳನ್ನು ಹರಡಿ ರಾಹುಲ್ ಗಾಂಧಿ ಆಯಾಸಗೊಂಡಿದ್ದಾರೆ. ಹಾಗಾಗಿ ಕೆಲವು ದಿನಗಳ ಕಾಲ ವಿಯೆಟ್ನಾಮ್‌ನಲ್ಲಿ ಸುತ್ತಾಡಿಕೊಂಡು ಬರುತ್ತೇನೆ ಎಂದು ಹೊರಟಿದ್ದಾರೆ” ಎಂದು ಬಿಜೆಪಿ ಲೇವಡಿ ಮಾಡಿತ್ತು. ಇದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಚುನಾವಣಾ ದುರ್ನಡತೆ ಆರೋಪದ ವಿರುದ್ಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಸಮಯದಲ್ಲೇ ಬಿಜೆಪಿಯ ಈ ಹೇಳಿಕೆ ಬಂದಿದೆ. ಅಕ್ಟೋಬರ್ 12ರಂದು ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ನಾಯಕರು ಎಸ್​ಐಆರ್ ಅಕ್ರಮಗಳ ಕುರಿತು ಸುಪ್ರೀಂ ಕೋರ್ಟ್‌ಗೆ ಕಾಲ್ನಡಿಗೆ ಜಾಥಾ ನಡೆಸಿ ಅರ್ಜಿ ಸಲ್ಲಿಸಿದ್ದರು.


ಇದನ್ನೂ ಓದಿ: ‘ತುಂಬಾ ಸುಸ್ತಾಗಿದೆಯಾ?’; ಎಸ್‌ಐಆರ್ ಪ್ರತಿಭಟನೆ ನಡುವೆ ವಿಯೆಟ್ನಾಮ್​ಗೆ ಹೊರಟ ರಾಹುಲ್ ಗಾಂಧಿಗೆ ಬಿಜೆಪಿ ಲೇವಡಿ

ಕಾಂಗ್ರೆಸ್ ತಿರುಗೇಟು:

ಬಿಜೆಪಿಯ ಈ ಪೋಸ್ಟ್‌ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ವಿಪಕ್ಷ ನಾಯಕ ರಾಹುಲ್ ಗಾಂಧಿಯ ವೈಯಕ್ತಿಕ ವಿದೇಶಿ ಪ್ರವಾಸಗಳನ್ನು ಬಿಜೆಪಿ ಅನಗತ್ಯವಾಗಿ ದೊಡ್ಡ ವಿಷಯವನ್ನಾಗಿ ಮಾಡುತ್ತಿದೆ ಎಂದು ತಿರುಗೇಟು ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್, “ರಾಹುಲ್ ಗಾಂಧಿ ಅವರಿಗೂ ವೈಯಕ್ತಿಕ ಜೀವನವಿದೆ. ಯಾರು, ಯಾವಾಗ, ಎಲ್ಲಿಗೆ ಪ್ರಯಾಣಿಸುತ್ತಾರೆ ಎಂಬುದು ದೊಡ್ಡ ವಿಷಯವೇ? ಬೇರೆಯವರು ವಿದೇಶಗಳಿಗೆ ಪ್ರಯಾಣಿಸುವುದಿಲ್ಲವೇ? ರಾಹುಲ್ ಗಾಂಧಿ ಕೂಡ ಖಾಸಗಿ ಜೀವನವಿರುವ ವ್ಯಕ್ತಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ, ಅವರಿಗೆ ತಮ್ಮದೇ ಆದ ಜವಾಬ್ದಾರಿಗಳಿವೆ. ಅವರು ಯೇಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ, ಲಂಡನ್‌ನಲ್ಲಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಅವರು ಪತ್ರಿಕಾಗೋಷ್ಠಿಗಳನ್ನು ಉದ್ದೇಶಿಸಿಯೂ ಮಾತನಾಡುತ್ತಾರೆ. ಪ್ರಧಾನಿ ಮೋದಿ ಎಂದಾದರೂ ಸುದ್ದಿಗೋಷ್ಠಿ ನಡೆಸಿದ್ದನ್ನು ನೋಡಿದ್ದೀರಾ?” ಎಂದಿದ್ದಾರೆ.

ಇದನ್ನೂ ಓದಿ: ಗರ್ಭಿಣಿ ಪತ್ರಕರ್ತೆ ಮೇಲೆ ರಾಹುಲ್ ಗಾಂಧಿ ಹಲ್ಲೆ ಆರೋಪ: ದೆಹಲಿ ಪೊಲೀಸರಿಗೆ ದೂರು

“ರಾಹುಲ್ ಗಾಂಧಿ ವಿದೇಶಕ್ಕೆ ಹೋದರೆ ಬಿಜೆಪಿಗೆ ಏನು ತೊಂದರೆ? ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಪ್ರಧಾನಿಯವರು ವಿದೇಶ ಪ್ರವಾಸ ಮಾಡಬಾರದು ಎಂಬ ಸಂಪ್ರದಾಯ ನಮ್ಮಲ್ಲಿದೆ. ಆದರೆ ನಮ್ಮ ಪ್ರಧಾನಿಯವರು ಆ ಸಂಪ್ರದಾಯವನ್ನೇ ಮುರಿದರು. ಆ ಸಮಯದಲ್ಲಿ ಯಾವುದೇ ಪ್ರಶ್ನೆಗಳು ಏಕೆ ಏಳಲಿಲ್ಲ?” ಎಂದು ಪ್ರಶ್ನಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us