ಕಾಂಗ್ರೆಸ್ ಕತೆ ಮುಗಿಯಿತು, ಹಿಮಾಚಲ ಸರ್ಕಾರ ಶೀಘ್ರ ಪತನ: ಹರ್ಷ್ ಮಹಾಜನ್

|

Updated on: Feb 28, 2024 | 8:54 PM

ರಾಜ್ಯದಲ್ಲಿ ಸುಖ್ವಿಂದರ್ ಸಿಂಗ್ ಸುಖು ಸರ್ಕಾರದ ಕೆಲಸ, ಜನರು ಮತ್ತು ಶಾಸಕರ "ಬೇಸರ" ತಮ್ಮ ಗೆಲುವಿಗೆ ಕಾರಣ ಎಂದು ಹೇಳಿದ ಮಹಾಜನ್, "ನಾನು 45 ವರ್ಷಗಳಿಂದ ಹಿಮಾಚಲ ರಾಜಕೀಯದ ಭಾಗವಾಗಿದ್ದೇನೆ. ನಾನು ದೀರ್ಘಕಾಲ ಕಾಂಗ್ರೆಸ್‌ನಲ್ಲಿದೆ. ಸುಮಾರು ಮೂರು ವರ್ಷಗಳ ಹಿಂದೆ ಬಿಜೆಪಿ ಸೇರಿದ್ದೇನೆ. ಹಾಗಾಗಿ ಎರಡೂ ಪಕ್ಷಗಳ ಜನರನ್ನು ನಾನು ಚೆನ್ನಾಗಿ ಬಲ್ಲೆ ಎಂದು ಹೇಳಿದ್ದಾರೆ

ಕಾಂಗ್ರೆಸ್ ಕತೆ ಮುಗಿಯಿತು, ಹಿಮಾಚಲ ಸರ್ಕಾರ ಶೀಘ್ರ ಪತನ: ಹರ್ಷ್ ಮಹಾಜನ್
ಹರ್ಷ್ ಮಹಾಜನ್
Follow us on

ಶಿಮ್ಲಾ ಫೆಬ್ರವರಿ 28: ಹಿಮಾಚಲ ಪ್ರದೇಶದ (Himachal Pradesh)  ಏಕೈಕ ರಾಜ್ಯಸಭಾ ಕ್ಷೇತ್ರವನ್ನು ಗೆದ್ದಿರುವ ಬಿಜೆಪಿ(BJP) ನಾಯಕ ಹರ್ಷ್ ಮಹಾಜನ್ (Harsh Mahajan), ಕಾಂಗ್ರೆಸ್ ಕತೆ ಮುಗಿದು ಹೋಗಿದೆ. ರಾಜ್ಯದಲ್ಲಿ ಅದರ ಸರ್ಕಾರ “ಶೀಘ್ರದಲ್ಲೇ ಪತನವಾಗಲಿದೆ” ಎಂದು ಹೇಳಿದ್ದಾರೆ. ಬುಧವಾರ ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಹಾಜನ್ ಅವರು, ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರು ಕಾಂಗ್ರೆಸ್ ಶಾಸಕರನ್ನು ಹೊರತುಪಡಿಸಿ, ಕನಿಷ್ಠ ಹತ್ತು ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಶೀಘ್ರದಲ್ಲೇ ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಮಹಾಜನ್ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದವರು. 2022 ರಲ್ಲಿ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆ ಮುಂಚೆಯೇ ಅವರು ಪಕ್ಷ ತೊರೆದಿದ್ದರು.

68 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಸಮಾನ ಮತಗಳು ಕಾಂಗ್ರೆಸ್ ಮತ್ತು ಬಿಜೆಪಿಗೆ ಸಿಕ್ಕಿದ ಕಾರಣ ಡ್ರಾ ಮೂಲಕ ವಿಜೇತರನ್ನು ಆರಿಸಲಾಗಿತ್ತು.

ರಾಜ್ಯದಲ್ಲಿ ಸುಖ್ವಿಂದರ್ ಸಿಂಗ್ ಸುಖು ಸರ್ಕಾರದ ಕೆಲಸ, ಜನರು ಮತ್ತು ಶಾಸಕರ “ಬೇಸರ” ತಮ್ಮ ಗೆಲುವಿಗೆ ಕಾರಣ ಎಂದು ಹೇಳಿದ ಮಹಾಜನ್, “ನಾನು 45 ವರ್ಷಗಳಿಂದ ಹಿಮಾಚಲ ರಾಜಕೀಯದ ಭಾಗವಾಗಿದ್ದೇನೆ. ನಾನು ದೀರ್ಘಕಾಲ ಕಾಂಗ್ರೆಸ್‌ನಲ್ಲಿದೆ. ಸುಮಾರು ಮೂರು ವರ್ಷಗಳ ಹಿಂದೆ ಬಿಜೆಪಿ ಸೇರಿದ್ದೇನೆ. ಹಾಗಾಗಿ ಎರಡೂ ಪಕ್ಷಗಳ ಜನರನ್ನು ನಾನು ಚೆನ್ನಾಗಿ ಬಲ್ಲೆ. ಕಾಂಗ್ರೆಸ್ ಶಾಸಕರ ನಡುವಿನ ಅತೃಪ್ತಿ ಅವರ ಜೊತೆ ಮಾತನಾಡಲು ನನಗೆ ಕಾರಣವಾಯಿತು. ನನ್ನನ್ನು ಬೆಂಬಲಿಸಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

ದಿವಂಗತ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಗ್ಗೆ ಕೇಳಿದಾಗ, ಅವರಿಗೆ ಅತ್ಯಂತ ಅಸಮಾಧಾನವಿದೆ. ಆದಷ್ಟು ಬೇಗ ಸರ್ಕಾರ ಪತನವಾಗಲಿದೆ ಎಂದು ಹೇಳಿದ್ದಾರೆ.

ಆರು ಕಾಂಗ್ರೆಸ್ ಶಾಸಕರು ಮತ್ತು ಮೂವರು ಪಕ್ಷೇತರರು ತಮಗೆ ಮತ ಹಾಕಿದ್ದಾರೆ ಎಂದು ತಿಳಿಸಿದ ಮಹಾಜನ್, ಬಿಜೆಪಿಗೆ ಸೇರಲು ಸಿದ್ಧರಿರುವ ಪಕ್ಷದಿಂದ ಕನಿಷ್ಠ 10 ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರ ಗೆಲುವಿನಲ್ಲಿ ‘ಹೊರಗಿನವರು’ ಪಾತ್ರ ವಹಿಸಿದ್ದಾರೆಯೇ ಎಂಬ ಪ್ರಶ್ನೆಗೆ ಬಿಜೆಪಿ ನಾಯಕ, “ನನಗೆ ಪ್ರತಿಯೊಬ್ಬ ಶಾಸಕರನ್ನು ಹತ್ತಿರದಿಂದ ತಿಳಿದಿದೆ. ನಾನು ಅವರಲ್ಲಿ ಹಲವರನ್ನು ಬೆಳೆಸಿದ್ದೇನೆ. ನಾನು ಮಣ್ಣಿನ ಮಗನಾಗಿರುವುದು ನನಗೆ ಸಹಾಯವಾಯಿತು. ಹಿಮಾಚಲ ಪ್ರದೇಶದ ಜನರು ತಮಗೆ ಬೇಕಾದ ಶಾಸಕರ ಮೇಲೆ ಒತ್ತಡ ಹೇರಿದರು ಎಂದು ನಾನು ಭಾವಿಸುತ್ತೇನೆ.

ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರಂತಹ ಬಿಕ್ಕಟ್ಟಿನ ನಿರ್ವಾಹಕರನ್ನು ಕಾಂಗ್ರೆಸ್ ಕಳುಹಿಸುವುದು ಸಹಾಯ ಮಾಡುತ್ತದೆಯೇ ಎಂಬ ಪ್ರಶ್ನೆಗೆ, ಉತ್ತರಿಸಿದ ಮಹಾಜನ್ ಪಕ್ಷದೊಳಗಿನ ಗುಂಪುಗಾರಿಕೆಯನ್ನು ತೋರಿಸಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಅನೇಕ ಆಕಾಂಕ್ಷಿಗಳಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ವಿಕ್ರಮಾದಿತ್ಯ ಸಿಂಗ್ ನನ್ನ ಸಹೋದರ, ರಾಜೀನಾಮೆ ಅಂಗೀಕರಿಸುವ ಪ್ರಶ್ನೆಯೇ ಇಲ್ಲ: ಹಿಮಾಚಲ ಸಿಎಂ

ತಮ್ಮ ಹಿಂದಿನ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ, “ಇದು (ನಾಯಕರ ಹಸ್ತಕ್ಷೇಪ) ಕೆಲಸ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ಕೇಂದ್ರದಿಂದ ರಾಜ್ಯಗಳಿಗೆ ಕಿತ್ತೊಗೆಯಲಾಗಿದೆ. ಎಲ್ಲರಿಗೂ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಮೇಲೆ ನಂಬಿಕೆ ಇದೆ..ಕಾಂಗ್ರೆಸ್ ಈಗ ಮಾಯವಾಗಿದೆ, ರಾಜ್ಯಗಳಲ್ಲಿಯೂ ಕಾಂಗ್ರೆಸ್ ಅಂತ್ಯದ ಆರಂಭ ಎಂದು ನಾನು ಭಾವಿಸುತ್ತೇನೆ. ಕಳೆದ ತಿಂಗಳು ರಾಮಮಂದಿರದ ಪ್ರತಿಷ್ಠಾಪನೆಯು ಹಿಮಾಚಲ ಬಿಜೆಪಿಗೆ ಸಹಾಯ ಮಾಡಿದೆ ಎಂದು ಹೇಳಿದ ಅವರು ಇದು “98% ಹಿಂದೂ ರಾಜ್ಯ” ಎಂದಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ