ಬಹುಕೋಟಿ ಮೇವು ಹಗರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ಪರವಾಗಿ ಕಾಂಗ್ರೆಸ್ ನಾಯಕಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಮಾತನಾಡಿದ್ದಾರೆ. ತನ್ನೆದುರು ತಲೆಬಾಗದವರಿಗೆ ಯಾವುದಾದರೂ ಒಂದು ಮಾರ್ಗದಲ್ಲಿ ಸದಾ ಕಿರುಕುಳ ನೀಡುವುದು ಬಿಜೆಪಿ ರಾಜಕಾರಣದ ಒಂದು ಬಹುಮುಖ್ಯ ಅಂಶ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ಆರ್ಜೆಡಿ ಮುಖ್ಯಸ್ಥ, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು 139.5 ಕೋಟಿ ರೂಪಾಯಿ ಡೊರಾಂಡಾ ಖಜಾನೆ ಪ್ರಕರಣದಲ್ಲೂ ದೋಷಿ ಎಂದು ಇತ್ತೀಚೆಗೆ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದೆ. ಡೊರಾಂಡಾ ಖಜಾನೆಯಿಂದ 139.5 ಕೋಟಿ ಹಣವನ್ನು ಅಕ್ರಮವಾಗಿ ತೆಗೆದ ಇದು, ಮೇವು ಹಗರಣದ ಐದು ಮತ್ತು ಕೊನೇ ಕೇಸ್ ಆಗಿದೆ. ಮೇವು ಹಗರಣಕ್ಕೆ ಸಂಬಂಧಪಟ್ಟ ಉಳಿದ ನಾಲ್ಕು ಪ್ರಕರಣಗಳಲ್ಲಿ ಲಾಲೂ ಪ್ರಸಾದ್ ಯಾದವ್ಗೆ ಜೈಲು ಶಿಕ್ಷೆ ಆಗಿದ್ದು, ಸದ್ಯ ಜಾಮೀನು ಮೇಲೆ ಆಚೆ ಬಂದಿದ್ದರು. ಆದರೆ ಇದೀಗ ಐದನೇ ಕೇಸ್ನಲ್ಲಿ ದೋಷಿ ಎಂದು ಸಾಬೀತಾಗಿದೆ. ಲಾಲೂ ಪ್ರಸಾದ್ ಯಾದವ್ರನ್ನು ಸದ್ಯ ರಿಮ್ಸ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇಷ್ಟಾದ ಬಳಿಕ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಇದು ಬಿಜೆಪಿ ರಾಜಕಾರಣ. ಅವರ ಎದುರು ತಲೆಬಾಗದವರಿಗೆ ಕಿರುಕುಳ ನೀಡಲಾಗುತ್ತದೆ. ಅಂಥ ರಾಜಕೀಯದ ಭಾಗವಾಗಿಯೇ ಲಾಲೂ ಪ್ರಸಾದ್ ಯಾದವ್ ಜಿ ಮೇಲೆ ದಾಳಿ ನಡೆಯುತ್ತಿದೆ. ಅವರಿಗೆ ನ್ಯಾಯ ಸಿಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
भाजपा की राजनीति का ये अहम पहलू है कि जो भी उनके सामने झुकता नहीं है, उसको हर तरह से प्रताड़ित किया जाता है।
लालू प्रसाद यादव जी पर इसी राजनीति के चलते हमला किया जा रहा है। मुझे आशा है कि उन्हें न्याय जरूर मिलेगा।
— Priyanka Gandhi Vadra (@priyankagandhi) February 18, 2022
ಲಾಲೂ ಪ್ರಸಾದ್ ಯಾದವ್ಗೆ ಹಿಂದಿನ ಪ್ರಕರಣಗಳಲ್ಲಿ ಜಾಮೀನು ನೀಡಿದ್ದು ಹೈಕೋರ್ಟ್ ಹೊರತು ಸಿಬಿಐ ಕೋರ್ಟ್ ಅಲ್ಲ. 73 ವರ್ಷದ ಲಾಲೂ ಆರೋಗ್ಯ ಕೂಡ ಸರಿಯಿಲ್ಲ. ನಾಳೆ ಫೆ.21ರಂದು ಲಾಲೂ ಪ್ರಸಾದ್ ಯಾದವ್ಗೆ ಶಿಕ್ಷೆಯ ಪ್ರಮಾಣವನ್ನು ಸಿಬಿಐ ಕೋರ್ಟ್ ವಿಧಿಸಲಿದೆ.
ಇದನ್ನೂ ಓದಿ: ಡ್ರಗ್ಸ್ ಪಿಡುಗಿನಿಂದ ಮಕ್ಕಳನ್ನು ಕಾಪಾಡುವಂತೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ