ಕಾಂಗ್ರೆಸ್ ಪಕ್ಷ, ಕೇರಳದಿಂದ ರಾಜ್ಯಸಭೆಗೆ ಜೆಬಿ ಮಾಥರ್ (Jebi Mather) ಎಂಬುವರನ್ನು ನಾಮನಿರ್ದೇಶನ ಮಾಡಿದೆ. ಇದರಲ್ಲೊಂದು ವಿಶೇಷವಿದೆ. ಬರೋಬ್ಬರಿ 42 ವರ್ಷಗಳ ನಂತರ ಕೇರಳ ರಾಜ್ಯದಿಂದ ನಾಮನಿರ್ದೇಶನಗೊಳ್ಳುತ್ತಿರುವ ಮೊದಲ ಮಹಿಳಾ ಕಾಂಗ್ರೆಸ್ ಅಭ್ಯರ್ಥಿ ಖ್ಯಾತಿ ಈ ಮಾಥರ್ ಅವರದ್ದು. ಅಂದರೆ 40ಕ್ಕೂ ಹೆಚ್ಚು ವರ್ಷಗಳಿಂದ ಕಾಂಗ್ರೆಸ್ ಯಾವುದೇ ಕೇರಳದಿಂದ ಮಹಿಳಾ ಸದಸ್ಯರನ್ನು ರಾಜ್ಯ ಸಭೆಗೆ ನಾಮಿನೇಟ್ ಮಾಡಿರಲಿಲ್ಲ. ರಾಜ್ಯಸಭೆ ಚುನಾವಣೆ ಮಾರ್ಚ್ 31ಕ್ಕೆ ನಡೆಯಲಿದ್ದು, ಕೇರಳದಿಂದ ಜೆಬಿ ಮಾಥರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇವರ ಗೆಲುವು ಖಂಡಿತ ಎಂಬ ಭರವಸೆಯನ್ನು ಪಕ್ಷ ವ್ಯಕ್ತಪಡಿಸಿದೆ.
43ವರ್ಷದ ಜೆಬಿ ಮಾಥರ್ ಸದ್ಯ ಕೇರಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಅಳುವಾ ಮುನ್ಸಿಪಲ್ಟಿಯ ಉಪಾಧ್ಯಕ್ಷರು. ಕೇರಳದಿಂದ ರಾಜ್ಯಸಭೆ ಚುನಾವಣೆ ರೇಸ್ನಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಕೆ.ವಿ.ಥಾಮಸ್, ಶಾಮ ಮೊಹಮ್ಮದ್, ಎಂ.ಎಂ.ಹಾಸನ್, ಮುಲ್ಲಪ್ಪಲ್ಲಿ ರಾಮಚಂದ್ರನ್ ಮತ್ತು ಎಂ ಲಿಜು ಇತರರು ಇದ್ದರು. ತಾವೇ ಆಯ್ಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದರು. ಆದರೆ ಮಾಥರ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಮೂಲಕ ಕಾಂಗ್ರೆಸ್, ಮಹಿಳಾ ಮತ್ತು ಯುವಜನ ಸಬಲೀಕರಣಕ್ಕೆ ಒತ್ತು ಕೊಟ್ಟಿದೆ. ಹಾಗೇ, ಅಸ್ಸಾಂನಿಂದ ರಿಪುನ್ ಬೋರಾ ಅವರನ್ನು ಪಕ್ಷ ನಾಮ ನಿರ್ದೇಶನಗೊಳಿಸಿದೆ. ಈ ಬಗ್ಗೆ ಎಐಸಿಸಿ ಪ್ರಕಟಣೆ ಹೊರಡಿಸಿದ್ದು, ರಾಜ್ಯಸಭೆಗೆ ಆಸ್ಸಾಂನಿಂದ ರಿಪುನ್ ಬೋರಾ ಮತ್ತು ಕೇರಳದಿಂದ ಜೆಬಿ ಮಾಥರ್ ಅವರನ್ನು ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅನುಮೋದನೆ ನೀಡಿದ್ದಾರೆ ಎಂದು ಹೇಳಿದೆ.
ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರೆ ಶಾಮಾ ಮೊಹಮ್ಮದ್ ಈ ಬಗ್ಗೆ ಧ್ವನಿ ಎತ್ತಿದ್ದರು. ಸುದ್ದಿವಾಹಿನಿಯೊಂದರ ಪ್ಯಾನೆಲ್ ಡಿಸ್ಕಶನ್ನಲ್ಲಿ ಭಾಗಿಯಾಗಿದ್ದ ಅವರು, ಕೇರಳದಿಂದ ಕಳೆದ 40ವರ್ಷಗಳಲ್ಲಿ ಒಬ್ಬೇಒಬ್ಬ ಮಹಿಳೆಯೂ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿಲ್ಲ. ಈ ಬಾರಿ ಪಕ್ಷ ಮಹಿಳೆಯರನ್ನೇ ರಾಜ್ಯಸಭೆಗೆ ನಾಮನಿರ್ದೇಶನ ಮಾಡಬೇಕು ಎಂದು ಆಗ್ರಹಿಸಿದ್ದರು. ಈ ಮೂಲಕ ತಮ್ಮನ್ನೂ ಪರಿಗಣಿಸಬಹುದು ಎಂದು ಹೇಳಿದ್ದರು. ಆದರೆ ಕೇರಳದಿಂದ ಶಾಮಾ ಮೊಹಮ್ಮದ್ಗೆ ಬದಲಾಗಿ ಜೆಬಿ ಮಾಥರ್ ಆಯ್ಕೆಯಾಗಿದ್ದಾರೆ. ಇನ್ನು ಕಾಂಗ್ರೆಸ್ ಸದ್ಯ ಸೋಲುವ ಕುದುರೆಯಾಗಿ ಮಾರ್ಪಾಡಾಗಿದೆ. ಈ ವರ್ಷದ ಕೊನೆಯಲ್ಲಿ ಎರಡು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯಿದ್ದು, ಅದರೊಳಗಾದರೂ ಪಕ್ಷದ ಆಂತರಿಕ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಂಡು, ಪಕ್ಷ ಸಂಘಟನೆ ಕೆಲಸಕ್ಕೆ ಒಂದು ಹೊಸ ಆಯಾಮ ನೀಡುವ ಅಗತ್ಯವಿದೆ.
ಇದನ್ನೂ ಓದಿ: ಕಲಬುರಗಿ ಡಿ.ಸಿ. ಯಶವಂತ ಗುರುಕಾರ್ ಜೋಳಿಗೆ ಹಿಡಿದರು! ಹಣ ಎತ್ತಲು ಅಲ್ಲಾ, ಗ್ರಾಮೀಣ ಭಾಗದ ಜನರ ಓದಿಗಾಗಿ!