Harbhajan Singh: ಪಂಜಾಬ್ನ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಅಭ್ಯರ್ಥಿಯಾಗಿ ಹರ್ಭಜನ್ ಸಿಂಗ್ ಆಯ್ಕೆ
ಅಷ್ಟೇ ಅಲ್ಲದೆ ಹರ್ಭಜನ್ ಸಿಂಗ್ ಅವರನ್ನು ಪಂಜಾಬ್ ರಾಜ್ಯದ ಉದ್ದೇಶಿತ ಕ್ರೀಡಾ ವಿಶ್ವವಿದ್ಯಾಲಯದ ಮುಖ್ಯಸ್ಥರನ್ನಾಗಿ ಮಾಡುವ ಸಾಧ್ಯತೆಯಿದೆ.
ಪಂಜಾಬ್‌ನಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಮಣಿಸಿ ಆಮ್ ಆದ್ಮಿ ಪಕ್ಷ (Aam Aadmi Party) ಅಧಿಕಾರಕ್ಕೇರಿದೆ. ಪಂಜಾಬ್‌ನಲ್ಲಿ ತನ್ನ ಗೆಲುವಿನೊಂದಿಗೆ ಆಮ್ ಆದ್ಮಿ ಪಕ್ಷವು (AAP) ರಾಜ್ಯಸಭೆಯ ಸ್ಥಾನವನ್ನು ಪಡೆದುಕೊಂಡಿದೆ. ಬುಧವಾರ ಭಗವಂತ್ ಮಾನ್ ಪಂಜಾಬ್ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಈ ಬಾರಿ ಪಂಜಾಬ್ನ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಅಭ್ಯರ್ಥಿಯಾಗಿ ಮಾಜಿ ಕ್ರಿಕಟಿಗ ಹರ್ಭಜನ್ ಸಿಂಗ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಸಭೆಗೆ ಕಳುಹಿಸಲು ಶಾರ್ಟ್‌ಲಿಸ್ಟ್ ಮಾಡಿದ ಹೆಸರುಗಳಲ್ಲಿ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಹೆಸರೂ ಇದೆ ಎಂದು ಆಪ್ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೆ ಹರ್ಭಜನ್ ಸಿಂಗ್ ಅವರನ್ನು ಪಂಜಾಬ್ ರಾಜ್ಯದ ಉದ್ದೇಶಿತ ಕ್ರೀಡಾ ವಿಶ್ವವಿದ್ಯಾಲಯದ ಮುಖ್ಯಸ್ಥರನ್ನಾಗಿ ಮಾಡುವ ಸಾಧ್ಯತೆಯಿದೆ. ಮಾರ್ಚ್ 10 ರಂದು ಹರ್ಭಜನ್ ಸಿಂಗ್ ಅವರು ಭಗವಂತ್ ಮಾನ್ ಅವರನ್ನು ಸಿಎಂ ಹುದ್ದೆಗೆ ಏರಿಸಿರುವುದನ್ನು ಟ್ವೀಟ್ ಮೂಲಕ ಸ್ವಾಗತಿಸಿದ್ದರು.
ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಈ ವರ್ಷ ರಾಜ್ಯಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಪಂಜಾಬ್ ಅಭ್ಯರ್ಥಿಯಾಗಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಘೋಷಿಸಿದೆ. ಈ ತಿಂಗಳ ಅಂತ್ಯದ ವೇಳೆಗೆ ಆಮ್ ಆದ್ಮಿ ಪಕ್ಷವು ರಾಜ್ಯಸಭೆಯಲ್ಲಿ ಐದು ಸ್ಥಾನಗಳನ್ನು ಪಡೆಯಲಿದೆ. ಮೂಲಗಳ ಪ್ರಕಾರ, ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ರಾಜ್ಯ ಸರ್ಕಾರವು ಹರ್ಭಜನ್ ಸಿಂಗ್ ಅವರನ್ನು ಕ್ರೀಡಾ ವಿಶ್ವವಿದ್ಯಾಲಯದ ಮುಖ್ಯಸ್ಥರನ್ನಾಗಿ ಮಾಡುವ ಸಾಧ್ಯತೆಯೂ ಇದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಫೆಬ್ರವರಿಯಲ್ಲಿ ನಡೆದ ಪಂಜಾಬ್ ಚುನಾವಣೆಗೂ ಮುನ್ನ ‘ಟರ್ಬನೇಟರ್’ ಹರ್ಭಜನ್ ಸಿಂಗ್ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಹಲವಾರು ಮಾಧ್ಯಮಗಳು ಈ ಸಾಧ್ಯತೆಯ ಬಗ್ಗೆ ವರದಿ ಮಾಡಿತ್ತು. ಆದರೆ, ತಾವು ಆಮ್ ಆದ್ಮಿ ಪಕ್ಷಕ್ಕೆ ಸೇರುವ ವದಂತಿಯನ್ನು ಹರ್ಭಜನ್ ಸಿಂಗ್ ತಳ್ಳಿ ಹಾಕಿದ್ದರು. ನಾನು ಕ್ರಿಕೆಟ್ನಿಂದ ನಿವೃತ್ತಿ ಪಡೆದ ಬಳಿಕ ಸಾಕಷ್ಟು ಪಕ್ಷಗಳಿಂದ ನನಗೆ ಆಫರ್ ಬರುತ್ತಿದೆ. ಆದರೆ, ಯಾವ ಪಕ್ಷಕ್ಕೆ ಸೇರಬೇಕೆಂಬ ಬಗ್ಗೆ ನಿಧಾನವಾಗಿ ಯೋಚನೆ ಮಾಡುತ್ತೇನೆ. ಆ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದಿದ್ದರು. ಆದರೆ, ಅದಾದ ಕೆಲವೇ ದಿನಗಳಲ್ಲಿ ಅವರು ನವಜೋತ್ ಸಿಂಗ್ ಸಿಧು ಜೊತೆ ಫೋಟೋದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ, ಹರ್ಭಜನ್ ಸಿಂಗ್ ಕಾಂಗ್ರೆಸ್ ಸೇರುವ ಕುರಿತೂ ಚರ್ಚೆಯಾಗಿದ್ದವು. ಆದರೆ, ಈಗ ಅವರು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಅಭ್ಯರ್ಥಿಯಾಗಿ ಆಯ್ಕೆಯಾಗುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಬಿದ್ದಿದೆ.
ಇದನ್ನೂ ಓದಿ: ಶೀಘ್ರದಲ್ಲೇ ಬಹುದೊಡ್ಡ, ಇತಿಹಾಸ ಕಾಣದ ನಿರ್ಧಾರ ಘೋಷಣೆ ಮಾಡುವುದಾಗಿ ಪಂಜಾಬ್ ಸಿಎಂ ಭಗವಂತ್ ಮಾನ್ ಟ್ವೀಟ್
ಆಪ್ ಟಾರ್ಗೆಟ್: ಪಂಜಾಬ್ ಆಯ್ತು ಈಗ ಇನ್ನೆರಡು ರಾಜ್ಯಗಳ ಮೇಲೆ ಕಣ್ಣಿಟ್ಟಿದ್ದೇವೆ ಎಂದ ಆಮ್ ಆದ್ಮಿ ಪಾರ್ಟಿ ಮುಖಂಡ
Published On - 1:56 pm, Thu, 17 March 22