ಐದು ರಾಜ್ಯಗಳ ಹೊಣೆ ಐವರು ಹಿರಿಯ ನಾಯಕರಿಗೆ ಕೊಟ್ಟ ಸೋನಿಯಾ ಗಾಂಧಿ; ಚುನಾವಣೋತ್ತರ ಪರಿಸ್ಥಿತಿ ಪರಿಶೀಲನೆಗೆ ಸೂಚನೆ
ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಜಿ23 ನಾಯಕರು ಸ್ವಲ್ಪ ಕಟುವಾಗಿಯೇ ವಿಮರ್ಶೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಒಂದಾಗಿರಲಿ. ಆದರೆ ಗಾಂಧಿ ಕುಟುಂಬಕ್ಕೆ ತುಂಬ ನಿಷ್ಠರಾಗಿರುವವರನ್ನು ಪಕ್ಷದ ಆಯಕಟ್ಟಿನ ಸ್ಥಾನಗಳಿಂದ ತೆಗೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಪಂಚರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಕಾಂಗ್ರೆಸ್ಗೀಗ ಪಕ್ಷದೊಳಗಿನ ಪರಿಸ್ಥಿತಿಯನ್ನು ಎಷ್ಟು ಪರಾಮರ್ಶಿಸಿದರೂ ಸಾಕಾಗುತ್ತಿಲ್ಲ. ಈಗಾಗಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಿಡಬ್ಲ್ಯೂಸಿ ಸಭೆ ನಡೆದಿದೆ. ಸದ್ಯದ ಮಟ್ಟಿಗೆ ಸೋನಿಯಾ ಗಾಂಧಿಯವರೇ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಅದರ ಬೆನ್ನಲ್ಲೇ ಐದೂ ರಾಜ್ಯಗಳ ಅಂದರೆ ಗೋವಾ, ಪಂಜಾಬ್, ಮಣಿಪುರ, ಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆಯನ್ನೂ ಪಡೆದಿದ್ದಾರೆ. ಇದೀಗ ಈ ಐದು ರಾಜ್ಯಗಳಲ್ಲಿ ಚುನಾವಣೆ ನಂತರ ಇರುವ ಪರಿಸ್ಥಿತಿ ಪರಿಶೀಲನೆ ಮಾಡುವಂತೆ ಐವರು ಹಿರಿಯ ನಾಯಕರನ್ನು ಸೋನಿಯಾ ಗಾಂಧಿ ನೇಮಕ ಮಾಡಿದ್ದಾರೆ. ಪ್ರಾದೇಶಿಕವಾಗಿ ಸಾಂಸ್ಥಿಕ ಬದಲಾವಣೆಗಳನ್ನು ಮಾಡುವ ನಿಟ್ಟಿನಲ್ಲಿ ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂದು ಮೌಲ್ಯಮಾಪನ ಮಾಡಿ ಎಂದೂ ಹೇಳಿದ್ದಾರೆ.
ಅದರಂತೆ ರಾಜ್ಯ ಸಭಾ ಸದಸ್ಯರಾದ ರಜನಿ ಪಾಟೀಲ್ ಗೋವಾ, ಜೈರಾಮ್ ರಮೇಶ್ ಮಣಿಪುರ, ಅಜಯ್ ಮೇಕನ್ ಪಂಜಾಬ್, ಜಿತೇಂದ್ರ ಸಿಂಗ್ ಉತ್ತರ ಪ್ರದೇಶ ಮತ್ತು ಅವಿನಾಶ್ ಪಾಂಡೆ ಉತ್ತರಾಖಂಡ್ನ ರಾಜಕೀಯ ಸ್ಥಿತಿ ಮೌಲ್ಯಮಾಪನ ಮಾಡಲಿದ್ದು, ಅಲ್ಲಿ ಪಕ್ಷ ಸಂಘಟನೆ, ಪಕ್ಷದ ಅಭಿವೃದ್ಧಿಗೆ ಏನೆಲ್ಲ ಕ್ರಮ ಕೈಗೊಳ್ಳಬಹುದೆಂದು ಪರಿಶೀಲನೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂತ ಮಾಹಿತಿ ಲಭ್ಯವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಕಾಂಗ್ರೆಸ್ಗೆ ಈಗಿನ ವಿಧಾನಸಭೆ ಚುನಾವಣೆಯೂ ಶಾಕ್ ನೀಡಿದೆ. ಪಂಜಾಬ್ನಲ್ಲಿ ಆಡಳಿತದಲ್ಲಿದ್ದ ಸರ್ಕಾರವಾಗಿದ್ದರೂ, ಈ ಸಲ ಸೋತಿದೆ.
ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಜಿ23 ನಾಯಕರು ಸ್ವಲ್ಪ ಕಟುವಾಗಿಯೇ ವಿಮರ್ಶೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಒಂದಾಗಿರಲಿ. ಆದರೆ ಗಾಂಧಿ ಕುಟುಂಬಕ್ಕೆ ತುಂಬ ನಿಷ್ಠರಾಗಿರುವವರನ್ನು ಪಕ್ಷದ ಆಯಕಟ್ಟಿನ ಸ್ಥಾನಗಳಿಂದ ತೆಗೆಯಬೇಕು ಎಂದು ಇವರು ಒತ್ತಾಯಿಸುತ್ತಿದ್ದಾರೆ. ಈ ಜಿ23 ನಾಯಕರು ನಿನ್ನೆ ಹಿರಿಯ ನಾಯಕ ಗುಲಾಂ ನಬಿ ಆಜಾದ್ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದರು. ಸಂಸದ ಶಶಿ ತರೂರ್ ಕೂಡ ಭಾಗವಹಿಸಿದ್ದರು. ಸದ್ಯ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ತುಸು ಹೆಚ್ಚಾಗಿವೆ.
ಇದನ್ನೂ ಓದಿ:ಶಿರಸಿ ಮಾರಿಕಾಂಬೆ ರಥದ ಬಳಿ ತಲುಪಿತು ಅಪ್ಪು ಫೋಟೋ; ಜಾತ್ರೆಯಲ್ಲಿ ಅಭಿಮಾನ ಮೆರೆದ ಪುನೀತ್ ಫ್ಯಾನ್ಸ್