ದೆಹಲಿ: ಪಂಜಾಬ್ ಕಾಂಗ್ರೆಸ್ ದೈತ್ಯ ವಿಕೆಟ್ ಇಂದು ಪತನವಾಗಿದೆ. ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಾಂಗ್ರೆಸ್ ಪಕ್ಷ ತೊರೆಯುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಅಪಮಾನ ಸಹಿಸಿಕೊಂಡು ಕಾಂಗ್ರೆಸ್ ಪಕ್ಷದಲ್ಲಿ ಇರಲ್ಲ ಎಂದು ಹೇಳಿದ್ದಾರೆ. ಆದರೆ, ಬಿಜೆಪಿ ಪಕ್ಷವನ್ನು ಸೇರುವುದಿಲ್ಲ ಎಂದು ಕೂಡ ಹೇಳಿದ್ದಾರೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಂದಿನ ನಡೆ ಈಗ ಕುತೂಹಲ ಕೆರಳಿಸಿದೆ. ಮತ್ತೊಂದೆಡೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನವಜೋತ್ ಸಿಂಗ್ ಸಿಧು, ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆಯುತ್ತಿತ್ತು. ಇವತ್ತು ಪಂಜಾಬ್ ಕಾಂಗ್ರೆಸ್ನ ಬಿಗ್ ವಿಕೆಟ್ ಪತನವಾಗಿದೆ. ಪಂಜಾಬ್ನಲ್ಲಿ 2 ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಇಂದು ಕಾಂಗ್ರೆಸ್ ಪಕ್ಷವನ್ನು ತೊರೆಯುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಪಕ್ಷದಲ್ಲಿ ಅಪಮಾನ ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಕುಸಿಯುತ್ತಿದೆ. ಕಾಂಗ್ರೆಸ್ ಪಕ್ಷವನ್ನು ನಾನು ಬಿಡುತ್ತಿದ್ದೇನೆ. ಆದರೆ, ಬಿಜೆಪಿ ಸೇರುತ್ತಿಲ್ಲ ಎಂದು ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ದೆಹಲಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಂದಿನ ನಡೆಯ ಬಗ್ಗೆ ಹೆಚ್ಚಿದ ಕುತೂಹಲ
ಇನ್ನೂ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಪಕ್ಷವು ಪಂಜಾಬ್ನಲ್ಲಿ ಪ್ರಬಲ ನಾಯಕನನ್ನು ಕಳೆದುಕೊಂಡಿದೆ. ಆದರೆ, ಕ್ಯಾಪ್ಟನ್ ಅಮರೀಂದರ್ ಸಿಂಗ್ ಬಿಜೆಿಪಿ ಸೇರಲ್ಲ ಎಂದಿದ್ದಾರೆ. ಹಾಗಾದರೆ, ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಂದಿನ ರಾಜಕೀಯ ನಡೆ ಏನು ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ. ಪಂಜಾಬ್ನಲ್ಲಿ ಹೊಸ ಪಕ್ಷ ಕಟ್ಟಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ರಾಜಕೀಯ ಶಕ್ತಿ ಸಾಮರ್ಥ್ಯ ತೋರಿಸಬಹುದು. ಇಲ್ಲವೇ ಬಿಜೆಪಿ ಹೊರತುಪಡಿಸಿ, ಬೇರೇ ಪಕ್ಷ ಸೇರಬಹುದು. ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಾಂಗ್ರೆಸ್ ವೋಟುಗಳನ್ನು ಚುನಾವಣೆಯಲ್ಲಿ ಇಬ್ಬಾಗ ಮಾಡಿದರೆ, ಕಾಂಗ್ರೆಸ್ ಪಕ್ಷಕ್ಕೆ ನಷ್ಟ ಖಚಿತ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಪ್ರಬಲ ಜಾಟ್ ಸಿಖ್ ಸಮುದಾಯಕ್ಕೆ ಸೇರಿದವರು. ಸಿಎಂ ಹುದ್ದೆಯಿಂದ ತಮ್ಮನ್ನು ತೆಗೆದಿದ್ದನ್ನು ಅನುಕಂಪದ ಅಸ್ತ್ರವನ್ನಾಗಿ ಮಾಡಿಕೊಳ್ಳಬಹುದು.
ಪಂಜಾಬ್ನಲ್ಲಿ ಕಾಂಗ್ರೆಸ್ ಬಿಕ್ಕಟ್ಟು; ಸಿಧು- ಚನ್ನಿ ಮಾತುಕತೆ
ಮತ್ತೊಂದೆಡೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಕ್ಕಟ್ಟಿಗೆ ಕಾರಣವಾಗಿರುವ ನವಜೋತ್ ಸಿಂಗ್ ಸಿಧು, ಇಂದು ಮಧ್ಯಾಹ್ನ ಚಂಡೀಗಡದ ಪಂಜಾಬ್ ಭವನದಲ್ಲಿ ಸಿಎಂ ಚರಣ್ಜಿತ್ ಸಿಂಗ್ ಚನ್ನಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಾಣಾ ಗುರ್ಜಿತ್ ಸಿಂಗ್ರನ್ನು ಸಚಿವರನ್ನಾಗಿ ನೇಮಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಡ್ವೋಕೇಟ್ ಜನರಲ್ ಆಗಿ ಎಪಿಎಸ್ ಡಿಯೋಲ್ ನೇಮಿಸಿದ್ದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಂಧ್ವಾಗೆ ಗೃಹ ಸಚಿವ ಸ್ಥಾನ ನೀಡಿದ್ದಕ್ಕೂ ಸಿಧು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವೆಲ್ಲದರ ಬಗ್ಗೆ ಸಿಧು-ಚನ್ನಿ ನಡುವೆ ಮಾತುಕತೆ ನಡೆಿದಿದೆ.
ಇದರ ಮಧ್ಯೆಯೇ ಕೇರಳದ ವಯನಾಡು ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ದೆಹಲಿಗೆ ವಾಪಸಾಗಿದ್ದು, ಸೋನಿಯಾ ಗಾಂಧಿ ಜೊತೆಗೆ ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿದ್ದಾರೆ. ಸದ್ಯ ಪಂಜಾಬ್ ಬಿಕ್ಕಟ್ಟು ಪರಿಹರಿಸುವ ಹೊಣೆಯನ್ನು ಸಿಎಂ ಚರಣ್ಜಿತ್ ಸಿಂಗ್ ಚನ್ನಿಗೆ ಕಾಂಗ್ರೆಸ್ ಹೈಕಮಾಂಡ್ ನೀಡಿದೆ. ಚನ್ನಿಯೇ ಈಗ ಡ್ಯಾಮೇಜ್ ಕಂಟ್ರೋಲ್ಗೆ ಯತ್ನಿಸುತ್ತಿದ್ದಾರೆ.
ಪಂಜಾಬ್ನಿಂದ ಗೋವಾವರೆಗೆ ಬಿಕ್ಕಟ್ಟು
ದೇಶದಲ್ಲಿ ಕಾಂಗ್ರೆಸ್ ಪಕ್ಷದ ಬಿಕ್ಕಟ್ಟು ಪಂಜಾಬ್ಗೆ ಮಾತ್ರ ಸೀಮಿತವಾಗಿಲ್ಲ. ದಕ್ಷಿಣದ ಗೋವಾದಲ್ಲೂ ಕಾಂಗ್ರೆಸ್ ಪಕ್ಷದ ಮಾಜಿ ಸಿಎಂ ಲೂಸಿನೋ ಫಾಲೇರಿಯಾ ನಿನ್ನೆ ಕಾಂಗ್ರೆಸ್ ತೊರೆೆದು ಟಿಎಂಸಿ ಪಕ್ಷ ಸೇರಿದ್ದಾರೆ. ಗೋವಾದಲ್ಲಿ ಬಿಜೆಪಿಯನ್ನು ಟಾರ್ಗೆಟ್ ಮಾಡಿ, ಮುಂದಿನ ಚುನಾವಣೆಯಲ್ಲಿ ಸೋಲಿಸಿ, ಟಿಎಂಸಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದಿದ್ದಾರೆ. ಲೂಸಿನೋ ಫಾಲೇರಿಯಾರನ್ನು ಕಾಂಗ್ರೆಸ್ ಗೋವಾ ವಿಧಾನಸಭಾ ಚುನಾವಣೆಯ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಮತ್ತೊಂದೆಡೆ ಕಾಂಗ್ರೆಸ್ ಆಳ್ವಿಕೆಯ ಛತ್ತೀಸ್ಗಡದಲ್ಲೂ ಸಿಎಂ ಬದಲಾವಣೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಸಿಎಂ ಭೂಪೇಶ್ ಬಗೇಲಾರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಬಾರದೆಂದು ಆಗ್ರಹಿಸಿ 15ಕ್ಕೂ ಹೆಚ್ಚು ಶಾಸಕರು ದೆಹಲಿಗೆ ದೌಡಾಯಿಸಿದ್ದಾರೆ. ಆರೋಗ್ಯ ಸಚಿವ ಟಿ.ಎಸ್. ಸಿಂಗ್ ದಿಯೋ ಛತ್ತೀಸ್ಗಡದಲ್ಲಿ ಸಿಎಂ ಹುದ್ದೆಯ ಆಕಾಂಕ್ಷಿ ಆಗಿದ್ದಾರೆ. ಇದೇ ರೀತಿ ರಾಜಸ್ಥಾನದಲ್ಲೂ ಕಾಂಗ್ರೆಸ್ನಲ್ಲಿ ಸಿಎಂ ಅಶೋಕ್ ಗೆಹ್ಲೋಟ್- ಸಚಿನ್ ಪೈಲಟ್ ಬಣಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಪಂಜಾಬ್ನಲ್ಲಿ ಸಿಎಂ ಬದಲಾಯಿಸಿದ ಬಳಿಕ ಸಚಿನ್ ಪೈಲಟ್ ಜೊತೆಗೆ ರಾಹುಲ್ ಗಾಂಧಿ ದೆಹಲಿಯಲ್ಲಿ ಮಾತುಕತೆ ನಡೆಸಿದ್ದಾರೆ. ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ನೀಡಬೇಕೆಂದು ಸಚಿನ್ ಪೈಲಟ್ ಪಟ್ಟು ಹಿಡಿದಿದ್ದಾರೆ.
ಎಐಸಿಸಿ ಅಧ್ಯಕ್ಷ ಗಾದಿಗೆ ಚುನಾವಣೆಗೆ ಆಗ್ರಹ
ಇನ್ನೂ ಕಾಂಗ್ರೆಸ್ ಪಕ್ಷದ ಸೀನಿಯರ್ ನಾಯಕರುಗಳು ಕೂಡ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಗೋವಾ, ಪಂಜಾಬ್ನಲ್ಲಿ ನಾಯಕರು ಪಕ್ಷ ತೊರೆಯುತ್ತಿರುವ ಬಗ್ಗೆ ಚರ್ಚೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ಕರೆಯಬೇಕೆಂದು ಗುಲಾಂ ನಬಿ ಆಜಾದ್ ಸೋನಿಯಾಗಾಂಧಿಗೆ ಪತ್ರ ಬರೆದಿದ್ದಾರೆ. ಅಸ್ಸಾಂನಲ್ಲಿ ಸುಶ್ಮಿತಾ ದೇವ್ ಪಕ್ಷ ತೊರೆದು ಟಿಎಂಸಿ ಸೇರಿ ಈಗ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಕಾಂಗ್ರೆಸ್ನಲ್ಲಿ ಯಾರು ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂಬುದೇ ನಮಗೆ ಗೊತ್ತಾಗುತ್ತಿಲ್ಲ. ನಾನು ಗ್ರೂಪ್-23 ನಾಯಕರ ಪರವಾಗಿ ಮಾತನಾಡುತ್ತಿದ್ದೇನೆ, ನಮ್ಮದು ಜಿ-ಹುಜೂರ್ ಗುಂಪು ಅಲ್ಲ ಎಂದು ಹೇಳುವ ಮೂಲಕ ಸೋನಿಯಾ ಗಾಂಧಿ ನಿಷ್ಠರ ವಿರುದ್ದ ಹರಿಹಾಯ್ದಿದ್ದಾರೆ. ಇದು ಸೋನಿಯಾ ಗಾಂಧಿ ನಿಷ್ಠ ಯುವ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಕಳೆದ ರಾತ್ರಿ ಕಪಿಲ್ ಸಿಬಲ್ ಮನೆ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಜಗಳ ಅಕ್ಷರಶಃ ಬೀದಿಗೆ ಬಂದಿದೆ. ರಾಜ್ಯಗಳಲ್ಲಿ ಪ್ರಬಲವಾಗಿರುವ ಕಾಂಗ್ರೆಸ್ ಹೈಕಮಾಂಡ್ ಆದೇಶಕ್ಕೆ ತಲೆಬಾಗಬೇಕಾಗಿದೆ. ಆದರೆ ಇದರಿಂದ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತಿದೆ ಎಂದು ಕಾಂಗ್ರೆಸ್ ನಾಯಕರು ಈಗ ಹೈಕಮಾಂಡ್ ವಿರುದ್ಧ ತಿರುಗಿಬೀಳುತ್ತಿದ್ದಾರೆ.
ವಿಶೇಷ ವರದಿ: ಎಸ್ ಚಂದ್ರಮೋಹನ್, ನ್ಯಾಷನಲ್ ಬ್ಯೂರೋ ಮುಖ್ಯಸ್ಥರು, ಟಿವಿ9 ಕನ್ನಡ
ಇದನ್ನೂ ಓದಿ: Punjab Politics: ಪಂಜಾಬ್ನಲ್ಲಿ ಪ್ರಭಾವ ಕಳೆದುಕೊಳ್ಳುತ್ತಿದೆ ಕಾಂಗ್ರೆಸ್, ಬೆಳೆಯುತ್ತಿದೆ ಆಪ್
ಇದನ್ನೂ ಓದಿ: Amarinder Singh: ನಾನು ಬಿಜೆಪಿ ಸೇರುತ್ತಿಲ್ಲ, ಕಾಂಗ್ರೆಸ್ಗೆ ರಾಜೀನಾಮೆ ನೀಡುತ್ತೇನೆ; ಅಮರೀಂದರ್ ಸಿಂಗ್ ಸ್ಪಷ್ಟನೆ
Published On - 6:14 pm, Thu, 30 September 21