ಅಮರೀಂದರ್ ಸಿಂಗ್ ಕಾಂಗ್ರೆಸ್ ತೊರೆಯುವುದು ಖಚಿತ; ಹೊಸ ಪಕ್ಷ ಕಟ್ಟುತ್ತಾರಾ ಕ್ಯಾಪ್ಟನ್?
Amarinder Singh | ಕಾಂಗ್ರೆಸ್ ತೊರೆದರೂ ಬಿಜೆಪಿಗೆ ಸೇರುವುದಿಲ್ಲ ಎಂದಿರುವ ಅಮರೀಂದರ್ ಸಿಂಗ್ ಪಂಜಾಬ್ನಲ್ಲಿ ಹೊಸ ಪಕ್ಷ ಘೋಷಣೆ ಮಾಡುವ ಸಾಧ್ಯತೆಯಿದೆ.
ನವದೆಹಲಿ: ಪಂಜಾಬ್ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಎರಡು ದಿನಗಳ ದೆಹಲಿ ಪ್ರವಾಸ ಮುಗಿಸಿ ಪಂಜಾಬ್ನತ್ತ ತೆರಳಿದ್ದಾರೆ. ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದ ಅಮರೀಂದರ್ ಸಿಂಗ್ ಇಂದು ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿಯೂ ಅವರು ಘೋಷಿಸಿದ್ದಾರೆ. ಕಾಂಗ್ರೆಸ್ ತೊರೆದರೂ ಬಿಜೆಪಿಗೆ ಸೇರುವುದಿಲ್ಲ ಎಂದಿರುವ ಅಮರೀಂದರ್ ಸಿಂಗ್ ಪಂಜಾಬ್ನಲ್ಲಿ ಹೊಸ ಪಕ್ಷ ಘೋಷಣೆ ಮಾಡುವ ಸಾಧ್ಯತೆಯಿದೆ.
ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದೇನೆ ಎಂದು ಚಂಡೀಗಢ ಏರ್‌ಪೋರ್ಟ್‌ನಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್‌ನಲ್ಲಿ ಮುಂದುವರಿಯಲ್ಲ. ಯಾವ ಪಕ್ಷಕ್ಕೆ ಬಹುಮತವಿದೆಯೆಂದು ಸ್ಪೀಕರ್ ಪರಿಶೀಲಿಸಿ, ವಿಶ್ವಾಸಮತಯಾಚನೆಗೆ ಸೂಚಿಸಲಿ. ನವಜೋತ್ ಸಿಂಗ್ ಚುನಾವಣೆಯಲ್ಲಿ ಸ್ಪರ್ಧಿಸಿದರೆ ನಾನು ಯಾವುದೇ ಕಾರಣಕ್ಕೂ ನವಜೋತ್ ಸಿಂಗ್ ಸಿಧುಗೆ ಗೆಲ್ಲಲು ಬಿಡುವುದಿಲ್ಲ ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.
#WATCH | “…I had said it before also that Navjot Singh Sidhu is not the right man for Punjab, and if he contests, I will not let him win…,” says former Punjab CM Captain Amarinder Singh pic.twitter.com/msURZAlalR
— ANI (@ANI) September 30, 2021
ಚುನಾವಣೆ ಸಮೀಪಿಸುತ್ತಿರುವಾಗಲೇ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರುವುದಕ್ಕೆ ಬೇಸರವಿದೆ. ಇಲ್ಲಿಯವರೆಗೂ ನಾನು ಕಾಂಗ್ರೆಸ್ನಲ್ಲಿಯೇ ಇದ್ದೇನೆ. ಆದರೆ, ಇನ್ನು ಈ ಪಕ್ಷದಲ್ಲಿ ಮುಂದುವರೆಯಲು ನನಗೆ ಇಷ್ಟವಿಲ್ಲ. ನನ್ನನ್ನು ಸೂಕ್ತ ರೀತಿಯಲ್ಲಿ ಪಕ್ಷ ನಡೆಸಿಕೊಂಡಿಲ್ಲ. ಇದರಿಂದ ನನಗೆ ಅವಮಾನ ಹಾಗೂ ಬೇಸರವಾಗಿದೆ. ನವಜೋತ್ ಸಿಂಗ್ ಸಿಧು ರೀತಿಯ ಚೈಲ್ಡಿಶ್ ವ್ಯಕ್ತಿಗೆ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಜವಾಬ್ದಾರಿ ನೀಡಿದರು. ಆದರೆ, ಆತ ಅದನ್ನು ಉಳಿಸಿಕೊಳ್ಳಲಿಲ್ಲ. ಪಕ್ಷಕ್ಕಾಗಿ ದುಡಿಯುತ್ತಿರುವ ನಮ್ಮಂತಹವರಿಗೆ ಸೂಕ್ತ ಗೌರವ ಸಿಗುತ್ತಿಲ್ಲ. ನಾನು 52 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಮುಖ್ಯಮಂತ್ರಿಯಾಗಿದ್ದ ನನಗೆ ಬೆಳಗ್ಗೆ 10.30ಕ್ಕೆ ಕಾಂಗ್ರೆಸ್ ಅಧ್ಯಕ್ಷರು ಫೋನ್ ಮಾಡಿ ರಾಜೀನಾಮೆ ನೀಡಲು ಸೂಚಿಸಿದರು. ನಾನು ಅವರಿಗೆ ಯಾವ ಪ್ರಶ್ನೆಯನ್ನೂ ಕೇಳದೆ ಸಂಜೆ 4 ಗಂಟೆಗೆ ರಾಜ್ಯಪಾಲರ ಬಳಿ ಹೋಗಿ ರಾಜೀನಾಮೆ ನೀಡಿದೆ. 50 ವರ್ಷಗಳಾದರೂ ನಮ್ಮ ಪಕ್ಷದ ನಾಯಕರಿಗೆ ನನ್ನ ಮೇಲೆ ನಂಬಿಕೆ ಬಂದಿಲ್ಲ ಎಂದಾದರೆ ನಾನು ಈ ಪಕ್ಷದಲ್ಲಿದ್ದು ಏನೂ ಪ್ರಯೋಜನವಿಲ್ಲ ಎಂದೇ ಅರ್ಥ ಎಂದು ಅಮರೀಂದರ್ ಸಿಂಗ್ ಇಂದು ಬೇಸರ ಹೊರಹಾಕಿದ್ದರು.
ಇನ್ನೊಂದೆಡೆ, ಅಕ್ಟೋಬರ್ 4ರಂದು ಪಂಜಾಬ್ ಸಚಿವ ಸಂಪುಟ ಸಭೆ ಕರೆದಿರುವ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಇಂದು ನವಜೋತ್ ಸಿಂಗ್ ಸಿಧು ಅವರನ್ನು ಭೇಟಿಯಾಗಿದ್ದರು. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದು, ಅವರು ಕೂಡ ಕಾಂಗ್ರೆಸ್ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂಜಾಬ್ನಲ್ಲಿ ಎರಡು ಬಣವಾಗಿದ್ದ ಅಮರೀಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು ಇಬ್ಬರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಇಂದು ಪಂಜಾಬ್ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಹಾಗೂ ನವಜೋತ್ ಸಿಂಗ್ ಸಿಧು ಸುದೀರ್ಘ ಚರ್ಚೆ ನಡೆಸಿದ್ದು, ಸಿಎಂ ಚರಣ್ಜಿತ್ ಸಿಂಗ್ ಚನ್ನಿ, ಸಿಧು ಚರ್ಚೆ ಫಲಪ್ರದವಾಗಿದೆಯೇ? ಎಂಬ ಮಾಹಿತಿ ಲಭ್ಯವಾಗಿಲ್ಲ. ಸಿಧು ತಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುವ ವಿಶ್ವಾಸವಿದೆ ಎಂದು ನಿನ್ನೆಯಷ್ಟೇ ಚರಣ್ಜಿತ್ ಸಿಂಗ್ ಹೇಳಿದ್ದರು.
ಇದನ್ನೂ ಓದಿ: Amarinder Singh: ನಾನು ಪಂಜಾಬ್ ಮಾಜಿ ಮುಖ್ಯಮಂತ್ರಿಯಲ್ಲ, ನನ್ನ ಬಿಟ್ಟುಬಿಡಿ; ಅಮರೀಂದರ್ ಸಿಂಗ್ ಹೀಗೆ ಹೇಳಿದ್ದೇಕೆ?
Amarinder Singh: ನಾನು ಬಿಜೆಪಿ ಸೇರುತ್ತಿಲ್ಲ, ಕಾಂಗ್ರೆಸ್ಗೆ ರಾಜೀನಾಮೆ ನೀಡುತ್ತೇನೆ; ಅಮರೀಂದರ್ ಸಿಂಗ್ ಸ್ಪಷ್ಟನೆ